ಬೆಂಗಳೂರು: ಬಾಂಗ್ಲಾದೇಶದ ಜಮಾತ್–ಉಲ್–ಮುಜಾಹಿದ್ದೀನ್ (ಜೆಎಂಬಿ) ಉಗ್ರ ಸಂಘಟನೆಯ ಕಾರ್ಯಕರ್ತನಾಗಿದ್ದ ಉಗ್ರ ಜೈದುಲ್ಲಾ ಇಸ್ಲಾಂ ಅಲಿಯಾಸ್ ಕೌಸರ್‌ಗೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಪ್ರಕರಣಗಳ ವಿಶೇಷ ನ್ಯಾಯಾಲಯ 7 ವರ್ಷ ಕಠಿಣ ಶಿಕ್ಷೆ ಹಾಗೂ ರೂ. 57 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಅಕ್ರಮವಾಗಿ ರಾಜ್ಯದಲ್ಲಿ ವಾಸಿಸುತ್ತಿದ್ದು, ಸಂಘಟನೆಗೆ ಹಣ ಕಳುಹಿಸಲು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಡಕಾಯಿತಿ ನಡೆಸುತ್ತಿದ್ದ. ಡಕಾಯಿತಿಗೆ ಸಂಚು ರೂಪಿಸುತ್ತಿದ್ದ ಸಂದರ್ಭದಲ್ಲಿ ರಾಮನಗರದಲ್ಲಿ ಈತನನ್ನು ಬಂಧಿಸಲಾಗಿತ್ತು. ನಂತರ ತನಿಖೆ ನಡೆಸಿದ್ದ ಎನ್ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
2005ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲೂ ಕೌಸರ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಬಿಡುಗಡೆಯಾದ ನಂತರ ಕೌಸರ್, 2014 ರಲ್ಲಿ ಸಂಘಟನೆಯ ಮುಖ್ಯಸ್ಥ ಸಲಾವುದ್ದೀನ್ ಸಲೇಹಿನ್ ಜತೆ ಅಕ್ರಮವಾಗಿ ಭಾರತ ಪ್ರವೇಶಿಸಿದ್ದ. ನಂತರ ಸಂಘಟನೆಯ ತಂಡಗಳನ್ನು ದೇಶದ ವಿವಿಧ ಭಾಗಗಳಿಗೆ ನಿಯೋಜಿಸಿದಾಗ ಕೌಸರ್ ದಕ್ಷಿಣ ಭಾರತಕ್ಕೆ ಆಗಮಿಸಿ ಇಲ್ಲಿ ಸಂಘಟನೆಯನ್ನು ವಿಸ್ತರಿಸುವ ಜವಬ್ಧಾರಿ ಹೊತ್ತಿದ್ದ.
ಕೌಸರ್ ತನ್ನ ಸಹಚರರ ಜತೆ ಸೇರಿಕೊಂಡು ಬೆಂಗಳೂರು ನಗರ, ಗ್ರಾಮಾಂತರ ಭಾಗದಲ್ಲಿ ಡಕಾಯಿತಿ ಮತ್ತು ದರೋಡೆ ನಡೆಸುತ್ತಿದ್ದ. ಅಕ್ರಮವಾಗಿ ಸಂಪಾದಿಸಿದ ಹಣವನ್ನು ವಿವಿಧ ಖಾತೆಗಳ ಮೂಲಕ ಸಂಘಟನೆಯ ಖಾತೆಗೆ ವರ್ಗಾವಣೆ ಮಾಡುತ್ತಿದ್ದ. ಅಕ್ರಮವಾಗಿ ಸಂಪಾದಿಸಿದ ಹಣದ ಸಂಬಂಧ ಉಗ್ರ ಕೌಸರ್ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಸಂಘಟನೆಯನ್ನು ಬಲಪಡಿಸುವುದರ ಜತೆಗೆ ಶಸ್ತ್ರಾಸ್ತ್ರಗಳ ಸಂಗ್ರಹ, ಸಂಘಟನೆಗೆ ಸೇರಿದ ಯುವಕರಿಗೆ ತರಬೇತಿ, ತರಬೇತಿಗೆ ಹಣ ಹೊಂದಿಸುವ ಕೆಲಸವನ್ನೂ ಮಾಡುತ್ತಿದ್ದ ಎಂದು ಎನ್‌ಐಎ ಮೂಲಗಳು ತಿಳಿಸಿವೆ.