ಬೆಂಗಳೂರು: ಜಾತಿಗಣತಿ ವರದಿ ಜಾರಿ ಕುರಿತು ಮುಂದಿನ ವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ಮಧ್ಯೆ ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಮುಖಂಡರು ಏಕಾಏಕಿ ನಿರ್ಧಾರ ತೆಗೆದುಕೊಳ್ಳುವುದು ಬೇಡ, ವಾಸ್ತವಾಂಶಗಳನ್ನು ಅಧ್ಯಯನ ಮಾಡಲು ಉಪ ಸಂಪುಟದ ಸಮಿತಿ ರಚನೆ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಆದರೆ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಚಿವರು ವರದಿ ಜಾರಿಗೆ ಪಟ್ಟುಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
ಮತ್ತೊಂದು ಕಡೆ ಕೇಂದ್ರ ಸರ್ಕಾರ ಜನಗಣತಿಯೊಂದಿಗೆ ಜಾತಿ ಗಣತಿ ನಡೆಸಲು ಮುಂದಾಗಿರುವುದರಿಂದ ರಾಜ್ಯಸರ್ಕಾರ ನಡೆಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಅಸಂವಿಧಾನಿಕ ಅಥವಾ ಜನವಿರೋಧಿ ಎಂದು ಟೀಕಿಸಲು ವಿರೋಧಪಕ್ಷಗಳಿಗೆ ಆಧಾರವಿಲ್ಲವಾಗಿದೆ.
ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ವರದಿಯನ್ನು ಬಹಿರಂಗವಾಗಿಯೇ ವಿರೋಧಿಸಿದ್ದು ಅನುಷ್ಠಾನಗೊಳಿಸಿದರೆ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿವೆ. ಆದರೂ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಅವರ ಆಪ್ತ ಸಚಿವರೊಬ್ಬರು ತಿಳಿಸಿದ್ದಾರೆ.
ಜಾತಿ ಜನಗಣತಿ ವರದಿ ಅನುಷ್ಠಾನವಾಗಲಿದೆ ಎಂಬ ಚರ್ಚೆಯಾಗುತ್ತಿದ್ದಂತೆ ಮೀಸಲಾತಿ ಪರಿಷ್ಕರಣೆಯಾಗಬೇಕೆಂಬ ಬೇಡಿಕೆಯೂ ತೀವ್ರಗೊಳ್ಳುತ್ತಿದೆ. ಇದರಿಂದಾಗಿ ನೇಮಕಾತಿಗಳು ಹಾಗೂ ಬಡ್ತಿಗಳಿಗೆ ತಡೆ ಉಂಟಾಗಲಿದೆ. ಆದ್ದರಿಂದ ಸದ್ಯಕ್ಕೆ ಸಚಿವ ಸಂಪುಟ ಉಪಸಮಿತಿ ರಚಿಸುವುದೇ ಸೂಕ್ತ ಎಂದು ಕೆಲವು ಸಚಿವರು ಸಲಹೆ ನೀಡಿದ್ದಾರೆ.
ಕಳೆದ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿಯೇ ಜಾತಿಗಣತಿ ವಿಚಾರ ಚರ್ಚೆಗೆ ಬರಬೇಕಿತ್ತು. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿ 11 ಮಂದಿ ಜೀವ ತೆತ್ತ ಪ್ರಕರಣ ಕುರಿತು ಚರ್ಚೆ ನಡೆಸಬೇಕಾಗಿದ್ದರಿಂದ ಜಾತಿ ಜನಗಣತಿಯ ತಂಟೆಗೆ ಹೋಗಿಲ್ಲ.
ಜಾತಿ ಜನಗಣತಿಗೆ ಸಂಬಂಧಪಟ್ಟಂತ ಎಲ್ಲಾ ಸಚಿವರೂ ಲಿಖಿತ ಅಭಿಪ್ರಾಯ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದರು. ಆದರೆ ಬಹುತೇಕ ಸಚಿವರು ಇನ್ನೂತಮ್ಮ ಅಭಿಪ್ರಾಯ ತಿಳಿಸಿಲ್ಲ. ಲಿಖಿತ ಅಭಿಪ್ರಾಯ ನೀಡುವಂತೆ ಮುಖ್ಯಮಂತ್ರಿಗಳ ಕಚೇರಿಯಿಂದ ಸೂಚನೆ ಹೋಗಿದೆ ಎಂದೂ ತಿಳಿದುಬಂದಿದೆ.

 
                                    
