ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡ್ರಗ್ ಜಾಲದ ಮೇಲೆ ಬೆಂಗಳೂರು ನಗರ ಪೊಲೀಸರು ಮತ್ತು ಸಿಸಿಬಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಸಿಸಿಬಿ ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಿದ್ದು, ಈಗಾಗಲೆ ಕೋಟ್ಯಾಂತರ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಶನಿವಾರವೂ ನಗರದ ವಿವಿಧ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದು,. ಬೆಂಗಳೂರಿನ ಕೊರಿಯರ್ ಏಜೆನ್ಸಿ ಮತ್ತು ಅಂಚೆ ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಸಂಪಂಗಿ ರಾಮನಗರದ ಕೊರಿಯರ್ ಏಜೆನ್ಸಿಯಲ್ಲಿ ಸಿಸಿಬಿ ಮತ್ತು ಶ್ವಾನದಳ ಪಾರ್ಸೆಲ್ಗಳ ಪರಿಶೀಲನೆ ನಡೆಸಿತು.
ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಮಾತನಾಡಿ, ವಿದೇಶದಿಂದ ಬರುತ್ತಿದ್ದ ಪಾರ್ಸಲ್‌ಗಳಲ್ಲಿ ಡ್ರಗ್ಸ್ ಪತ್ತೆಯಾಗಿತ್ತು. ಹೀಗಾಗಿ, ಒಟ್ಟು ಏಳು ಕಡೆ ಪರಿಶೀಲನೆ ನಡೆಸಲಾಗಿದೆ. ಹೊಸ ವರ್ಷ ಹಿನ್ನೆಲೆಯಲ್ಲಿ ಡ್ರಗ್ಸ್ ಪೂರೈಕೆ ಹೆಚ್ಚಾಗುತ್ತಿರುವ ಮಾಹಿತಿ ಇದೆ. ತಪ್ಪು ವಿಳಾಸ ಕೊಟ್ಟು ಕೊರಿಯರ್ಗಳಲ್ಲಿ ಸರಬರಾಜು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೊರಿಯರ್ ಕಚೇರಿ, ಅಂಚೆ ಕಚೇರಿಗಳಲ್ಲಿ ಪರಿಶೀಲನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಮಂಗಳೂರು ಸಿಸಿಬಿ ಪೊಲೀಸರು ಕೂಡಾ ಶನಿವಾರ ಕಾರ್ಯಾಚರಣೆ ನಡೆಸಿದ್ದು, 10 ಲಕ್ಷ ರೂ. ಮೌಲ್ಯದ 200 ಗ್ರಾಂ ಎಮ್ಡಿಎಮ್ಎ ವಶಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರಿನ ದರ್ಶನ್ ಕೆ.ಜಿ (25), ನೈಜೀರಿಯಾ ಮೂಲದ ಚಿಕ ಜೋಸೇಫ್ ಇಝಿ (26) ಬಂಧಿತ ಆರೋಪಿಗಳು. ಆರೋಪಿ ಚಿಕ ಜೋಸೆಫ್ ಇಝಿ 2023ರಲ್ಲಿ ಉದ್ಯೋಗ ವೀಸಾದಲ್ಲಿ ಭಾರತಕ್ಕೆ ಆಗಮಿಸಿದ್ದ. ಚಿಕ ಜೋಸೆಫ್ ಬೆಂಗಳೂರಿನ ಯಲಹಂಕದಲ್ಲಿ ಹೇರ್ ಕಟ್ಟಿಂಗ್ ಮಾಡುತ್ತಿದ್ದ. ಈಗಾಗಲೇ ಈತನ ವಿರುದ್ಧ ಬೆಂಗಳೂರು ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ ದಾಖಲಾಗಿ, ಬಂಧಿತನಾಗಿದ್ದು, ನಾಲ್ಕು ತಿಂಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆಯಾಗಿದ್ದ. ಇದೀಗ ಮತ್ತೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.