ಬೆಂಗಳೂರು: ಕನ್ನಡ ತಂತ್ರಾಂಶ ಲಿಪಿ ವಿನ್ಯಾಸದಲ್ಲಿ ವೈವಿಧ್ಯತೆ ಇಂದಿನ ಅಗತ್ಯವಾಗಿದ್ದು ಆಧುನಿಕ ಕಾಲಕಾಲಕ್ಕೆ ಹೊಂದಿಕೊಳ್ಳದೇ ಹೋದಲ್ಲಿ ಕನ್ನಡಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದ್ದಾರೆ.
ಕನ್ನಡದಲ್ಲಿ ಹೊಸ ಲಿಪಿ ಅಭಿವೃದ್ಧಿಪಡಿಸುವ ಕುರಿತಾದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕನ್ನಡದಲ್ಲಿ ಹಲವಾರು ತಾಂತ್ರಿಕ ಪರಿಣಿತರು ಯುನಿಕೋಡ್ ನಲ್ಲಿ ವಿವಿಧ ಮಾದರಿಗಳ ಕನ್ನಡ ಲಿಪಿಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ. ಇವೆಲ್ಲವೂ ಸಾರ್ವಜನಿಕರಿಗೆ ಲಭ್ಯವಾದಲ್ಲಿ ಕನ್ನಡ ಲಿಪಿಗಳಿಗೆ ವೈವಿಧ್ಯತೆ ದೊರಕುವುದಿದ್ದು ತಂತ್ರಾಂಶದಲ್ಲಿ ಕನ್ನಡದ ಬಳಕೆ ಗಮನಾರ್ಹವಾಗಿ ಹೆಚ್ಚುತ್ತದೆ. ಜನ ಸ್ನೇಹಿಯಾದ ಲಿಪಿಗಳ ವಿನ್ಯಾಸದ ಅಭಿವೃದ್ಧಿಯನ್ನು, ತಂತ್ರಾಂಶ ವ್ಯವಸ್ಥೆಯನ್ನು ಪೋಷಿಸುವ ಜವಾಬ್ದಾರಿ ಸರ್ಕಾರದ ಮೇಲಿದ್ದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಈ ಹೊಣೆಗಾರಿಕೆಯನ್ನು ನಿರ್ವಹಿಸಲಿದೆ. ಲಿಪಿ ವಿನ್ಯಾಸ ಅಭಿವೃದ್ಧಿ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ಪರಿಣಿತರು ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಕೈ ಜೋಡಿಸಬಹುದಾಗಿದೆ ಎಂದರು.
ಸರ್ಕಾರಕ್ಕೆ ವರದಿ:
2017ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಾಲತಾಣಗಳಲ್ಲಿ ಏಕರೂಪ ಶಿಷ್ಟತೆಯ ವರದಿಯನ್ನು ಸಲ್ಲಿಸಿ ಗಮನಾರ್ಹ ಕೆಲಸ ಮಾಡಿದೆ. ಆಂಗ್ಲಭಾಷೆಯಲ್ಲಿ ಭಾವನೆಗಳನ್ನು ಕೂಡಾ ಲಿಪಿಯ ಮೂಲಕ ವ್ಯಕ್ತಪಡಿಸುವ ಅವಕಾಶವಿದ್ದು, ಮೊಬೈಲ್ ತಂತ್ರಾಂಶ, ಕ್ಲೌಡ್ ತಂತ್ರಾಂಶಗಳಲ್ಲಿಯೂ ಹೊಸ ವಿನ್ಯಾಸಗಳ ಕನ್ನಡ ಲಿಪಿ ಬೇಕಿದೆ. ಕನ್ನಡದ ಕೀಲಿಮಣೆಯ ವಿನ್ಯಾಸದಲ್ಲಿಯೂ ಒಂದು ಸಮಾನತೆ ಬೇಕಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಒಂದು ಸಂಹಿತೆಯನ್ನೇ ರೂಪಿಸಬೇಕಿದೆ. ಈ ಕುರಿತಂತೆ ಸಮಿತಿಯು ಸರ್ಕಾರಕ್ಕೆ ಶೀಘ್ರವೇ ಸಮಗ್ರ ವರದಿ ಸಲ್ಲಿಸಲಿದೆ ಎಂದು ಡಾ. ಬಿಳಿಮಲೆ ಹೇಳಿದರು. ಸಭೆಯಲ್ಲಿ ತಾಂತ್ರಿಕ ಕ್ಷೇತ್ರದಲ್ಲಿ ಪರಿಣಿತರಾದ ಜಿ.ಎನ್.ಮೋಹನ್, ಮಧು ವೈ.ಎನ್, ಮಂಜುನಾಥ ಆರ್. ಆರ್., ಎನ್.ರವಿಕುಮಾರ್ ಮತ್ತು ಡಾ.ಸಂತೋಷ ಹಾನಗಲ್ಲ ಮತ್ತಿತರರು ಹಾಜರಿದ್ದರು.