ಪ್ರಶಾಂತ್ ಜಿ ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ಅವರ ನಿರ್ದೇಶನದದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕಷ್ಣಂ ಪ್ರಣಯ ಸಖಿ” ಚಿತ್ರದ “ಮೈ ಮ್ಯಾರೇಜ್ ಇಸ್ ಫಿಕ್ಸ್ಡ್”, “ಚಿನ್ನಮ್ಮ” ಹಾಗೂ “ದ್ವಾಪರ ದಾಟುತ” ಮೂರು ಹಾಡುಗಳು ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಅದರಲ್ಲೂ ಇತ್ತೀಚೆಗೆ ಬಿಡುಗಡೆಯಾದ ಡಾ||ವಿ.ನಾಗೇಂದ್ರ ಪ್ರಸಾದ್ ಬರೆದು, “ಸರಿಗಮಪ” ಖ್ಯಾತಿಯ ಜಸಕರಣ್ ಸಿಂಗ್ ಹಾಡಿರುವ “ದ್ವಾಪರ ದಾಟುತ” ಹಾಡು ಟ್ವಿಟರ್, ಯೂಟ್ಯೂಬ್ ಹಾಗೂ ಇನ್ಸ್ಟಾ ರೀಲ್ಸ್ ಗಳಲ್ಲಿ ಭಾರಿ ಟ್ರೆಂಡ್ ಹುಟ್ಟುಹಾಕಿದೆ. ಯೂಟ್ಯೂಬ್ ನಲ್ಲಿ ಎಂಟು ಮಿಲಿಯನ್ ಗೂ ಅಧಿಕ ವೀಕ್ಷಣೆಯಾಗಿರುವ ಈ ಹಾಡು ಇನ್ಸ್ಟಾ ರೀಲ್ಸ್ ನಲ್ಲಿ 2 ನೇ ಸ್ಥಾನದಲ್ಲಿದೆ. ಟ್ವಿಟರ್ ನಲ್ಲೂ ಹೊಸ ದಾಖಲೆ ಬರೆದಿದೆ. ಟ್ವಿಟರ್ ಹಾಗೂ ಇನ್ಸ್ಟಾ ರೀಲ್ಸ್ ನಲ್ಲಿ ಈ ರೀತಿಯ ಜನಪ್ರಿಯತೆ ಸಿಗುತ್ತಿರುವ ಕನ್ನಡದ ಮೊದಲ ಹಾಡು ಇದಾಗಿದೆ ಎಂದು ನಿರ್ದೇಶಕ ಶ್ರೀನಿವಾಸರಾಜು ತಿಳಿಸಿದ್ದಾರೆ.
ಹಾಡು ಬರೆದಿರುವ ನಾಗೇಂದ್ರ ಪ್ರಸಾದ್ ಸಹ ಈವರೆಗೂ ನಾನು ಬರೆದಿರುವ ಹಾಡುಗಳಲ್ಲಿ ಇದು ನನ್ನ ಮೆಚ್ಚುಗೆಯ ಹಾಡು ಎನ್ನುತ್ತಾರೆ.
“ಮುಂಗಾರು ಮಳೆ” ಯ ನಂತರ “ಕೃಷ್ಣಂ ಪ್ರಣಯ ಸಖಿ” ಚಿತ್ರದ ಹಾಡುಗಳಿಗೆ ಸಿಗುತ್ತಿರುವ ಜನಪ್ರಿಯತೆಗೆ ಮನ ತುಂಬಿ ಬಂದಿದೆ ಎಂದು ನಾಯಕ ಗಣೇಶ್ ತಿಳಿಸಿದ್ದಾರೆ.
ಈಗಾಗಲೇ ಬಿಡುಗಡೆಯಾಗಿರುವ ಮೂರು ಹಾಡುಗಳು ಯಶಸ್ವಿಯಾಗಿರುವುದಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಆಡಿಯೋ ಹಕ್ಕು ಪಡಿದಿರುವ ಆನಂದ್ ಆಡಿಯೋದವರು ಆನಂದ ಪಟ್ಟಿದ್ದಾರೆ. ಈ ಸಂಭ್ರಮದ ಸಮಯದಲ್ಲಿ ನಿರ್ಮಾಪಕರು ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ. ಆಗಸ್ಟ್ 15 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರವನ್ನು ವೀಕ್ಷಿಸಲು ಗೋಲ್ಡನ್ ಸ್ಟಾರ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.