ಬೀಜಿಂಗ್: ಚೀನಾದಲ್ಲಿ ಕೋವಿಡ್ ಮಾದರಿಯ ಸೋಂಕನ್ನು ಹೋಲುವ ಹೊಸ ಮಾದರಿಯ ವೈರಾಣು ಹ್ಯೂಮನ್ ಮೆಟಾನ್ಯೂಮೊ ವೈರಸ್ (HMPV) ವ್ಯಾಪಕವಾಗಿ ಹರಡುತ್ತಿದೆ. ಆಸ್ಪತ್ರೆಗಳಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ರೋಗಿಗಳು ಕಂಡು ಬರುತ್ತಿದ್ದಾರೆ. ಸಾವಿನ ಸಂಖ್ಯೆಯೂ ದಿನದಿಂದ ಏರಿಕೆಯಾಗುತ್ತಿದ್ದು, ಸ್ಮಶಾನಗಳಲ್ಲಿ ಸರತಿ ಸಾಲು ಕಂಡು ಬರುತ್ತಿದೆ ಎಂದು ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ. ಜ್ವರ ಹಾಗೂ ಕೋವಿಡ್–19 ಸೋಂಕಿನ ಗುಣಲಕ್ಷಣ ಒಂದಿರುವ ಈ ಹೊಸ ವೈರಸ್ ಎಲ್ಲಾ ವಯೋಮಾನದವರನ್ನೂ ಭಾದಿಸುವ ಲಕ್ಷಣ ಹೊಂದಿದೆ. ಆದರೂ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ ಎಂದು ತಿಳಿದು ಬಂದಿದೆ. ಸದ್ಯಕ್ಕೆ HMPV ವೈರಸ್ ಗುಣಪಡಿಸಲು ಯಾವುದೇ ಲಸಿಕೆ ಇಲ್ಲ.
ಈ ವೈರಾಣು ಮೊದಲು ಕಂಡು ಬಂದಿದ್ದು, 2001ರಲ್ಲಿ. ಆದರೂ, ಇದು ಸುಮಾರು 60 ವರ್ಷಗಳಷ್ಟು ಹಳೆಯ ಎಂದು ವೈರಾಣು ತಜ್ಞರು ತಿಳಿಸಿದ್ದಾರೆ. ಮುಂಜಾಗ್ರತೆ ವಹಿಸುವಂತೆ ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ. ನ್ಯುಮೋನಿಯಾ ನಿರ್ವಹಣೆಗೆ ಪೈಲೆಟ್ ನಿರ್ವಹಣಾ ವ್ಯವಸ್ಥೆಯನ್ನು ಚೀನಾ ಜಾರಿಗೆ ತಂದಿದೆ.
ಚಳಿಗಾಲದಲ್ಲಿ ಉಸಿರಾಟ ಸಂಬಂಧಿಂತ ಕಾಯಿಲೆಗಳು ಹೆಚ್ಚಾಗಿ ಕಂಡುಬರುವುದು ಸಹಜ. ಇಂತಹ ಸಂದರ್ಭದಲ್ಲಿ ಈ ವೈರಾಣು ಪತ್ತೆಯಾಗಿರುವುದು ಇನ್ನಷ್ಟು ಆತಂಕ ಮೂಡಿಸಿದೆ. ಸಧ್ಯಕ್ಕೆ ಚೀನಾ ತುರ್ತು ಪರಿಸ್ಥಿತಿ ಘೋಷಿಸಿಲ್ಲ. ಸೋಂಕು ಇರುವುದನ್ನು ಚೀನಾ ಖಚಿತಪಡಿಸಿದೆ. ಉತ್ತರ ಚೀನಾದಲ್ಲಿ ಹೆಚ್ಚು ವ್ಯಾಪಿಸಿದೆ. ಮಕ್ಕಳು, ವೃದ್ಧರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರನ್ನು ಈ ವೈರಾಣು ಹೆಚ್ಚಾಗಿ ಭಾದಿಸಲಿದೆ. ಶೀತ, ಕೆಮ್ಮು ಹಾಗೂ ಜ್ವರದ ಲಕ್ಷಣ, ಮೂಗು ಕಟ್ಟುವುದು, ಉಸಿರಾಟದ ಸಮಸ್ಯೆ ಎದುರಾಗುವುದು ಈ ವೈರಸ್ ನ ಪ್ರಮುಖ ಗುಣಲಕ್ಷಣಗಳಾಗಿವೆ.