ಮೈಸೂರು: ನಾನು ಅಥವಾ ನನ್ನ ಮಗ ಜೈಲಿಗೆ ಹೋಗುವಂತಹ ಯಾವುದೇ ಕೆಲಸ ಮಾಡಿಲ್ಲ. ಅಂತಹ ಸ್ಥಿತಿಯೂ ಮನಗೆ ಬಂದಿಲ್ಲ ಎಂದು ಶಾಸಕ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಇಷ್ಟಕ್ಕೂ ನಮ್ಮ ವಿರುದ್ಧ ಯಾವುದಾದರೂ ಪ್ರಕರಣವಿದ್ದರೆ ತಾನೇ ಬಂಧಿಸಲು ಸಾಧ್ಯ ಎಂದೂ ಅವರು ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಿ.ಟಿ ದೇವೇಗೌಡರು ಹಾಗೂ ಅವರ ಮಗನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಅದನ್ನು ತಪ್ಪಿಸಿದ್ದು ಕುಮಾರಸ್ವಾಮಿ. ಇಲ್ಲದಿದ್ದರೆ ಜಿ.ಟಿ ದೇವೇಗೌಡರು ಮತ್ತು ಅವರ ಮಗ ಜೈಲು ಸೇರುತ್ತಿದ್ದರು ಎಂಬ ಹೆಚ್.ಡಿ ರೇವಣ್ಣ ಹೇಳಿಕೆಗೆ ದೇವೇಗೌಡರು ತಿರುಗೇಟು ನೀಡಿದರು.
ಸಾರ್ವಜನಿಕ ಜೀವನ ಪ್ರವೇಶಿಸಿ 54 ವರ್ಷಗಳಾಗಿವೆ. ರಾಜಕೀಯವಾಗಿ ನನ್ನ ವಿರುದ್ದ ಯಾರೂ ದೂರು ನೀಡಿಲ್ಲ. ನನ್ನ ಮಗ ಹರೀಶ್ ಗೌಡ 2010ರಿಂದ ಸಾರ್ವಜನಿಕ ಸೇವೆಯಲ್ಲಿದ್ದಾನೆ. ಆತನ ವಿರುದ್ದವೂ ಯಾವುದೇ ಪ್ರಕರಣಗಳಿಲ್ಲ. ದಬ್ಬಾಳಿಕೆ ನಡೆಸುವುದು ಅಥವಾ ಏಕವಚನದಲ್ಲಿ ಮಾತನಾಡುವುದನ್ನು ನಾವು ಮಾಡಿಲ್ಲ ಎಂದು ಪರೋಕ್ಷವಾಗಿ ರೇವಣ್ಣ ಅವರಿಗೆ ತಿರುಗೇಟು ನೀಡಿದರು.
ನಾನು ಮಾಧ್ಯಮಗಳಿಂದ ದೂರವಿದ್ದೇನೆ. ಏನನ್ನೂ ಮಾತನಾಡಬಾರದು ಎಂದು ನಿರ್ಧರಿಸಿದ್ದೇನೆ. ಆದರೂ, ಪದೇ ಪದೇ ನನ್ನ ಹೆಸರನ್ನೇಕೆ ಪ್ರಸ್ತಾಪಿಸುತ್ತಾರೆ? ನನ್ನ ಕ್ಷೇತ್ರದ ಅಭಿವೃದ್ದಿ ಬಿಟ್ಟು ಬೇರೇನೂ ವಿಚಾರ ನನ್ನ ತಲೆಯಲ್ಲಿ ಇಲ್ಲ ಎಂದು ಜಿಟಿಡಿ ಹೇಳಿರು.