ಹುಬ್ಬಳ್ಳಿ: ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಜ್ ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ನಿನ್ನೆ ಸಂಜೆ 4.45ರ ಸುಮಾರಿಗೆ ಆರೋಪಿ ಫಯಾಜ್ ಕಾಲೇಜು ಕ್ಯಾಂಪಸ್ ಒಳಗೆ ಬಂದು, ನೇಹಾಳನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ. ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಘಟನೆ ನಡೆದ ಒಂದು ಗಂಟೆಯ ಒಳಗಾಗಿ ಆರೋಪಿ ಫಯಾಜ್ ನನ್ನು ಬಂಧಿಸಿದ್ದರು.
ನೇಹಾ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ಕುಟುಂಬಸ್ಥರಿಗೆ ನೇಹಾ ಮೃತದೇಹ ಹಸ್ತಾಂತರಿಸಲಾಗಿದೆ. ವೀರಶೈವ ಜಂಗಮ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
ಈ ನಡುವೆ, ನೇಹಾ ಹತ್ಯೆಗೆ ಫಯಾಜ್ ತನ್ನ ನಾಲ್ವರು ಸ್ನೇಹಿತರ ಸಹಾಯ ಪಡೆದಿದ್ದ ಎಂದು ಆಕೆಯ ತಂದೆ ನಿರಂಜನ ಹಿರೇಮಠ ತಿಳಿಸಿದ್ದಾರೆ. ಐದಾರು ತಿಂಗಳಿನಿಂದಲೇ ನೇಹಾ ಹತ್ಯೆಗೆ ಸಂಚು ನಡೆದಿತ್ತು ಎಂದು ಅವರು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ನೇಹಾ ಹಂತಕ ಫಯಾಜ್ ಬೆಳಗಾವಿ ಜಿಲ್ಲೆ ಮುನವಳ್ಳಿಯವನಾಗಿದ್ದು, ಅಲ್ಲಿ ಹಿಂದೂ-ಮುಸ್ಲಿಮರು ಜಂಟಿಯಾಗಿ ಘಟನೆ ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಸಂಕೇಶ್ವರ – ಸವದತ್ತಿ ಹೆದ್ದಾರಿಯಲ್ಲಿ ಮುಸ್ಲಿಮ್ ಸಮುದಾಯದ ನೂರಾರು ಮಂದಿ ನೇಹಾ ಫೊಟೋ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಇತ್ತ ಹುಬ್ಬಳ್ಳಿಯಲ್ಲಿ ಮುಸ್ಲಿಂ ಸಮುದಾಯ ಹತ್ಯೆ ಖಂಡಿಸಿ ಪ್ರತಿಭಟಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ. ನೇಹಾ ಹತ್ಯೆಯನ್ನು ಮುಸ್ಲಿಂ ಸಮುದಾಯದ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಅಳ್ನಾವರ, ಕುಂದಗೋಳ, ಕಲಘಟಗಿ, ಹುಬ್ಬಳ್ಳಿ ಹಾಗೂ ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷರು ಕಮಿಷನರ್ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲುಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ನೇಹಾ ಹಿರೇಮಠ ಕೊಲೆ ಪ್ರಕರಣ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾರೇ ಕಾನೂನು ಕೈಗೆತ್ತಿಕೊಂಡರೂ ಖಂಡಿಸುತ್ತೇವೆ. ಪೊಲೀಸರ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಬೆಂಗಳೂರಿನಲ್ಲಿ ಹೇಳಿದ್ದಾರೆ. ಬಿಜೆಪಿ ನಾಯಕರ ಆರೋಪದ ಬಗ್ಗೆ ಕೇಳಾದ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಬೊಮ್ಮಾಯಿ ಕಾಲದಲ್ಲೂ ಇವೆಲ್ಲಾ ಆಗಿತ್ತಲ್ಲವೇ ಎಂದು ಪ್ರಶ್ನಿಸಿದರು.