ಕಿತ್ತೂರು (ಬೆಳಗಾವಿ): ಹುಬ್ಬಳ್ಳಿಯ ನೇಹಾ ಹಿರೇಮಠ ಹಂತಕನಿಗೆ ಅತ್ಯಂತ ಕಠೋರವಾದ ಶಿಕ್ಷೆಯೇ ಆಗಬೇಕು. ಇಂಥವರಿಗೆ ಸಮಾಜದಲ್ಲಿ ಜೀವಿಸುವ ಯಾವುದೇ ಅರ್ಹತೆಯಿಲ್ಲ ಎಂದು ಮಾಜಿ ಶಾಸಕಿ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿಈ ಕುರಿತು ಪೋಸ್ಟ್ ಮಾಡಿರುವ ಅವರು, ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವ ಕೃತ್ಯವಾಗಿದೆ. ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ಮೃತ ಯುವತಿಯ ಕುಟುಂಬಕ್ಕೆ ಈ ಸಾವಿನ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಇಂತಹ ದುಷ್ಕೃತ್ಯವನ್ನು ಎಸಗುವವರಿಗೆ ಸಮಾಜದಲ್ಲಿ ಜೀವಿಸುವ ಯಾವುದೇ ಅರ್ಹತೆಯಿಲ್ಲ. ಇಂತಹ ಅಪರಾಧಗಳಿಗೆ ಅತ್ಯಂತ ಕಠೋರ ಶಿಕ್ಷೆಯನ್ನೇ ನೀಡಬೇಕು. ಆಗ ಮಾತ್ರ ತಪ್ಪು ಮಾಡುವ ರಾಕ್ಷಸರಿಗೆ ಭಯ ಹುಟ್ಟುತ್ತದೆ ಎಂದು ಅವರು ತಿಳಿಸಿದ್ದಾರೆ.
ನೇಹಾಳ ಮನೆಯವರಿಗೆ ಆಗಿರುವ ನೋವು ಮತ್ಯಾವ ತಂದೆ ತಾಯಿಗೂ ಬರಬಾರದು. ನೇಹಾ ನಮ್ಮ ಮನೆ ಮಗಳು. ಕೊಲೆಯಾಗಿರುವ ನೇಹಾಳಿಗೆ ನ್ಯಾಯ ಸಿಗಲೇಬೇಕು. ಹಾಗೆ ಕೊಲೆಗಾರನಿಗೆ ಕಾನೂನಿನ ಪ್ರಕಾರವೇ ಆದಷ್ಟು ಶೀಘ್ರ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೊಲೆಗಡುಕ ಫಯಾಜ್ ನಂಥ ಕ್ರಿಮಿಗಳು ಎಲ್ಲ ಜಾತಿ ಧರ್ಮದಲ್ಲೂ ಇದ್ದಾರೆ. ಹೀಗಾಗಿ ಇದಕ್ಕೆ ಧರ್ಮ, ಜಾತಿಯ ಲೇಪನ ಹಚ್ಚಿ ಸಮಾಜದಲ್ಲಿ ಸಂಘರ್ಷದ ವಾತಾವರಣ ನಿರ್ಮಿಸುವುದು ಸರಿಯಲ್ಲ. ಇಂಥ ಕೊಲೆಗಳನ್ನು ಧರ್ಮದ ನೆಲೆಯಲ್ಲಿ ಇಟ್ಟು ಪರಸ್ಪರ ದ್ವೇಷ, ಪ್ರತೀಕಾರದ ಭಾವ ಮೂಡಿಸುವುದು ಕೂಡ ಅಪರಾಧವೇ ಆಗುತ್ತದೆ. ಇಂಥ ಕೊಲೆಗಳನ್ನು ರಾಜಕೀಯ ಕಾರಣಕ್ಕೆ ಬಳಸಿಕೊಳ್ಳುವುದು ಕೂಡ ಹೇಯತನ. ಇಂಥವರಿಗೆ ಆದ ಘಟನೆಯ ನೋವಿಗಿಂತ ಹೆಚ್ಚಾಗಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸ್ವಾರ್ಥವೇ ಹೆಚ್ಚಾಗಿರುತ್ತದೆ. ಇಂಥವರ ಬಗ್ಗೆ ಕೂಡ ಸಮಾಜ ಎಚ್ಚರ ವಹಿಸಬೇಕು ಎಂದು ಅವರು ಹೇಳಿದ್ದಾರೆ.
ಹುಬ್ಬಳ್ಳಿ ಪೊಲೀಸರು ಕೊಲೆ ನಡೆದ ಒಂದೇ ಗಂಟೆಯೊಳಗೆ ಆರೋಪಿ ಫಯಾಜ್ ನನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಇದಕ್ಕಾಗಿ ಹುಬ್ಬಳ್ಳಿ ಪೊಲೀಸರನ್ನು ನಾನು ಅಭಿನಂದಿಸುತ್ತೇನೆ. ಇಂಥ ಪ್ರಕರಣಗಳು ನಡೆದಾಗ ಫಾಸ್ಟ್ ಟ್ರಾಕ್ ಕೋರ್ಟ್ ಗಳಲ್ಲಿ ಆದಷ್ಟು ಶೀಘ್ರ ವಿಚಾರಣೆ ನಡೆಯುವಂತೆ ಮಾಡಿ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್, ನೇಹಾ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಭೆಯಲ್ಲಿ ಪಾಲ್ಗೊಂಡು ಸಂತಾಪ ವ್ಯಕ್ತಪಡಿಸಿದರು.