ಬೆಂಗಳೂರು: ಗ್ರಾಮೀಣ ಭಾರತದ ಪ್ರಗತಿಗಾಗಿ ನೆಹರೂ ಅವರು ಸಹಕಾರ ಕ್ಷೇತ್ರಕ್ಕೆ ಚೈತನ್ಯ ನೀಡಿದರು. ಹೀಗಾಗಿ ಸಹಕಾರಿ ಚಳವಳಿ ಲಕ್ಷಾಂತರ ಕುಟುಂಬಗಳ ಆರ್ಥಿಕ ಮೂಲವಾಗಿದೆ. ಸಹಕಾರ ಕ್ಷೇತ್ರ ಗಟ್ಟಿಯಾದರೆ ಆರ್ಥಿಕ, ಸಾಮಾಜಿಕ ಚೈತನ್ಯ ಹೆಚ್ಚಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.
72ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿ, ಸಹಕಾರಿ ಪುರಸ್ಕೃತರಿಗೆ ‘ಸಹಕಾರ ರತ್ನ’ ಪ್ರಶಸ್ತಿಯನ್ನು ವಿತರಿಸಿ ಮಾತನಾಡಿದರು.
ಏಷ್ಯಾದಲ್ಲೇ ಮೊದಲ ಬಾರಿಗೆ ಸಹಕಾರಿ ಬ್ಯಾಂಕ್ ಸ್ಥಾಪನೆಯಾಗಿದ್ದು ರಾಜ್ಯದಲ್ಲಿ. ಹೀಗಾಗಿ ಕರ್ನಾಟಕವನ್ನು ಭಾರತದ ಸಹಕಾರ ಕ್ಷೇತ್ರದ ರಾಜಧಾನಿ ಎಂದು ಕರೆಯುತ್ತಾರೆ. ಯಾವುದೇ ಗ್ರಾಮ ಉದ್ಧಾರ ಆಗಬೇಕಾದರೆ ಆ ಗ್ರಾಮದಲ್ಲಿ ಒಂದು ಶಾಲೆ, ಒಂದು ಸಹಕಾರಿ ಸಂಘ, ಒಂದು ಆಸ್ಪತ್ರೆ ಇರಬೇಕು ಎನ್ನುವುದು ನೆಹರೂ ಅವರ ಸ್ಪಷ್ಟ ಕಲ್ಪನೆಯಾಗಿತ್ತು. ಈ ಕಲ್ಪನೆಯನ್ನು ಗುರಿಯಾಗಿಸಿಕೊಂಡು ಕೆಲಸ ಮಾಡಿ ಸಹಕಾರ ಚಳವಳಿಗೆ ನೆಹರೂ ಮತ್ತು ಮಹಾತ್ಮ ಗಾಂಧಿ ಅವರು ಶಕ್ತಿ ನೀಡಿದರು ಎಂದು ವಿವರಿಸಿದರು.
ರಾಜ್ಯದಲ್ಲಿ ವಾರ್ಷಿಕ ವಹಿವಾಟು 25000 ಕೋಟಿ ಜೊತೆಗೆ ಪ್ರತೀ ದಿನ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು ಇದು ಸಹಕಾರಿ ಚಳವಳಿ ಮೂಲಕ ಬೆಳೆದ ಹಾಲು ಮಹಾ ಮಂಡಳಗಳ ಮಹತ್ ಸಾಧನೆ. ಹಾಲು ಉತ್ಪಾದಕರ ಸಂಘಗಳು ಚಳವಳಿ ಸ್ವರೂಪದಲ್ಲಿ ನಡೆದು ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರು ಹಾಲನ್ನು ನೇರವಾಗಿ ಉತ್ಪಾದಕರ ಸಂಘಗಳಿಗೆ ಸರಬರಾಜು ಮಾಡುವಂತಾಯಿತು ಎಂದರು.
ಸಹಕಾರ ಕ್ಷೇತ್ರದಿಂದಾಗಿ ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ದೊಡ್ಡ ಚೈತನ್ಯ ಸಿಕ್ಕಿದೆ. ಲಕ್ಷಾಂತರ ಕುಟುಂಬಗಳ ಬದುಕಿಗೆ ನಾನು ಮೊದಲಿಗೆ ಮುಖ್ಯಮಂತ್ರಿಯಾಗಿ ಹಾಲಿನ ಪ್ರೋತ್ಸಾಹ ಮೊತ್ತವನ್ನು ಲೀಟರಿಗೆ 3ರೂ ಮಾಡಿದ್ದೆ. ಈಗ ಪ್ರೋತ್ಸಾಹ ಧನವನ್ನು ಲೀಟರಿಗೆ 5ರೂಗೆ ಹೆಚ್ಚಿಸಿ ಪ್ರತೀ ದಿನ ಸರ್ಕಾರದಿಂದ 5 ಕೋಟಿ ರೂಪಾಯಿ ಸಹಾಯಧನವನ್ನು ಹಾಲು ಉತ್ಪಾದಕರಿಗೆ ನೀಡಲಾಗುತ್ತಿದೆ. 40 ಲಕ್ಷ ರೈತರಿಗೆ ನೇರ ಅವರ ಬ್ಯಾಂಕ್ ಖಾತೆಗಳಿಗೆ ಸಹಾಯ ಧನ ಜಮೆ ಆಗುತ್ತಿದೆ. ಇದಕ್ಕೆಲ್ಲಾ ಹಾಲು ಮಹಾ ಮಂಡಳ ತಾಯಿಬೇರು ಇದ್ದಹಾಗೆ ಎಂದು ಶ್ಲಾಘಿಸಿದರು.

