ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ನಿರೀಕ್ಷೆಯಲ್ಲಿದ್ದ ನೀರಜ್ ಚೋಪ್ರಾ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ನೀರಜ್ ಗೆಲುವಿನ ನಂತರ ಆತನ ತಾಯಿ ಪಾಕ್ ಆಟಗಾರ ನದೀಮ್ ಬಗ್ಗೆ ಭಾವುಕ ಹೇಳಿಕೆ ನೀಡಿದ್ದಾರೆ.
ANI ಸುದ್ದಿ ಸಂಸ್ಥೆ ನೀರಜ್ ತಾಯಿಯ ಪ್ರತಿಕ್ರಿಯೆ ನೀಡಿದ ಅವರು, ನಾವು ತುಂಬಾ ಸಂತೋಷವಾಗಿದ್ದೇವೆ. ನನ್ನ ಮಗ ಗೆದ್ದ ಬೆಳ್ಳಿಯೂ ನಮಗೆ ಬಂಗಾರಕ್ಕೆ ಸಮನಾಗಿ ಕಾಣುತ್ತಿದೆ. ಚಿನ್ನ ತೆಗೆದುಕೊಂಡವನೂ ನಮ್ಮ ಮಗನೇ. ಕಷ್ಟಪಟ್ಟು ಸಾಧನೆ ಮಾಡಿದ್ದಾನೆ. ಪ್ರತಿಯೊಬ್ಬ ಆಟಗಾರನಿಗೆ ಅವನ ದಿನ ಅಂತ ಇರುತ್ತದೆ. ನೀರಜ್ ಗಾಯಗೊಂಡಿದ್ದ. ಹೀಗಾಗಿ ಬೆಳ್ಳಿ ಗೆದ್ದಿದ್ದಾನೆ. ಆತನ ಪ್ರದರ್ಶನದಿಂದ ನಮಗೆ ಸಂತೋಷವಾಗಿದೆ. ಅವನು ಬಂದಾಗ, ನಾನು ಅವನ ನೆಚ್ಚಿನ ಅಡುಗೆ ಮಾಡುತ್ತೇನೆ ಎಂದು ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಬಗ್ಗೆ ಮನಕಲಕುವ ಹೇಳಿಕೆಯನ್ನೂ ನೀಡಿದ್ದಾರೆ.
ಅಂತಿಮ ಪಂದ್ಯದಲ್ಲಿ ಅರ್ಷದ್ ನದೀಮ್ 92.97 ಮೀಟರ್ ಎಸೆದು ಚಿನ್ನದ ಪದಕವನ್ನು ಪಡೆದರು. ನೀರಜ್ ಚೋಪ್ರಾ 89.45 ಮೀಟರ್ ಎಸೆದು ಬೆಳ್ಳಿ ಪದಕ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಕಂಚಿನ ಪದಕ ಗ್ರೆನಡಾದ ಆಂಡರ್ಸನ್ ಪೀಟರ್ಸ್ ಪಾಲಾಯಿತು. ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಮೂಲಕ ನದೀಮ್ ಅಥ್ಲೆಟಿಕ್ಸ್ನಲ್ಲಿ ಪಾಕಿಸ್ತಾನದ ಮೊದಲ ಒಲಿಂಪಿಕ್ ಪದಕವನ್ನು ಗೆದ್ದು ಇತಿಹಾಸ ಬರೆದಿದ್ದಾರೆ .