ಈಗಾಗಲೇ ಕಳೆದ ಹಲವು ತಿಂಗಳುಗಳಿಂದ ಟಿಡಿಪಿ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಢಾ ಜೊತೆ ಹಲವು ಸುತ್ತಿನ ಮಾತುಕತೆ ನಂತರ ಎನ್‌ಡಿಎ ಮೈತ್ರಿ ಕೂಟಕ್ಕೆ ಟಿಡಿಪಿ ಸೇರ್ಪಡೆ ಕುರಿತಾಗಿ ಉಭಯ ಪಕ್ಷಗಳು ತೀರ್ಮಾನಿಸಿದ್ದು, ಕೆಲವೇ ಹೊತ್ತಿನಲ್ಲಿ ಅಧಿಕೃತ ತೀರ್ಮಾನ ಹೊರ ಬೀಳಲಿದೆ.
2018ರವರೆಗೂ ಟಿಡಿಪಿ ಪಕ್ಷವು ಬಿಜೆಪಿ ಸಾರಥ್ಯದ ಎನ್‌ಡಿಎ ಮೈತ್ರಿ ಕೂಟದಲ್ಲಿ ಇತ್ತು. ಆದರೆ, ತಮ್ಮ ರಾಜ್ಯಕ್ಕೆ ಸಿಗಬೇಕಾದ ಹಣಕಾಸಿನ ನೆರವಿನ ವಿಚಾರವಾಗಿ ಕೇಂದ್ರ ಸರ್ಕಾರದ ಜೊತೆ ಭಿನ್ನಮತ ಎದುರಾದ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು, ಎನ್‌ಡಿಎ ಮೈತ್ರಿ ಕಡಿತ ಮಾಡಿಕೊಳ್ಳುವ ತೀರ್ಮಾನ ಕೈಗೊಂಡಿದ್ದರು.
2019ರ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಎನ್‌ಡಿಎಯಿಂದ ಹೊರ ಬಂದಿದ್ದ ಟಿಡಿಪಿ ಇದೀಗ 2024ರ ಲೋಕಸಭಾ ಚುನಾವಣೆ ಸಮೀಪದಲ್ಲಿ ಇರುವಾಗ ಮತ್ತೆ ಎನ್‌ಡಿಎ ಸೇರಲು ಸಜ್ಜಾಗಿದೆ. ಸೀಟು ಹಂಚಿಕೆ ಮಾತುಕತೆ ಗಹನವಾಗಿ ನಡೆಯುತ್ತಿದೆ ಅನ್ನೋ ಮಾಹಿತಿಗಳೂ ಇವೆ.
ಆಂಧ್ರ ಪ್ರದೇಶದ ರಾಜ್ಯದ ಒಟ್ಟು 25 ಲೋಕಸಭಾ ಕ್ಷೇತ್ರಗಳ ಪೈಕಿ ಯಾವ ಕ್ಷೇತ್ರದಲ್ಲಿ ಯಾವ ಪಕ್ಷ ಸ್ಪರ್ಧೆ ಮಾಡಬೇಕು ಅನ್ನೋದೇ ಅತಿ ಮುಖ್ಯವಾಗಿದ್ದು, ಅಂತಿಮವಾಗಿ ಯಾರಿಗೆ ಒಟ್ಟು ಎಷ್ಟು ಕ್ಷೇತ್ರ ಹಂಚಿಕೆಯಾಯ್ತು ಅನ್ನೋ ಸಂಖ್ಯೆ ಕೂಡಾ ಮಹತ್ವ ಪಡೆಯಲಿದೆ.