ನಯಾಬ್ ಸಿಂಗ್ ಸೈನಿ ಹರಿಯಾಣ ನೂತನ ಮುಖ್ಯಮಂತ್ರಿ?

Most read

ಹೊಸದಿಲ್ಲಿ: ಹರಿಯಾಣದಲ್ಲಿ ಆಳುವ ಬಿಜೆಪಿ-ಜೆಜೆಪಿ ಮೈತ್ರಿಕೂಟದ ಸರ್ಕಾರದ ಪತನದ ನಂತರ ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ನಯಾಬ್ ಸಿಂಗ್ ಸೈನಿ ಹೆಸರು ಮುಂಚೂಣಿಗೆ ಬಂದಿದ್ದು, ಮನೋಹರ್ ಲಾಲ್ ಕಟ್ಟರ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ರಾಜಕೀಯ ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ನಡೆಯುತ್ತಿದ್ದು, ಮುಖ್ಯಮಂತ್ರಿ ಸ್ಥಾನ ತೊರೆದಿರುವ ಕಟ್ಟರ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸೂಚಿಸಿ ಸೈನಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರಲು ಬಿಜೆಪಿ ಹೈಕಮಾಂಡ್ ಯೋಜಿಸಿದೆ.

ಮತ್ತೆ ಸರ್ಕಾರ ರಚಿಸಲು ಅಗತ್ಯ ಸಂಖ್ಯೆ ಹೊಂದಿದ್ದೇವೆ ಎಂದು ಬಿಜೆಪಿ ಪ್ರತಿಪಾದಿಸುತ್ತಿದ್ದು, ಈಗ ಬಿಜೆಪಿ 41 ಶಾಸಕರ ಬೆಂಬಲ ಹೊಂದಿದ್ದರೆ ಜೆಜೆಪಿ 10 ಸ್ಥಾನಗಳನ್ನು ಹೊಂದಿದೆ. ಆರು ಮಂದಿ ಪಕ್ಷೇತರ ಶಾಸಕರ ಬೆಂಬಲದ ಜೊತೆಗೆ ಹರಿಯಾಣ ಲೋಕಿತ್ ಪಕ್ಷದ ಏಕೈಕ ಶಾಸಕ ಕೂಡ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಈ ನಡುವೆ ಜೆಜೆಪಿ ಪಕ್ಷದ ಐವರು ಶಾಸಕರು ಬಂಡಾಯವೆದ್ದಿದ್ದು ಬಿಜೆಪಿ ಬೆಂಬಲಿಸುವ ಸಾಧ್ಯತೆ ಇದೆ. ಹೀಗಾಗಿ ಸರಳ ಬಹುಮತ ಸಾಧಿಸಲು ಬಿಜೆಪಿಗೆ ಯಾವ ಸಮಸ್ಯೆಯೂ ಇಲ್ಲದಂತಾಗಿದೆ.

ಇಂದು ಸಂಜೆಯೇ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದ್ದು, ಕಟ್ಟರ್ ಅವರೇ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರಾ ಅಥವಾ ನಯಾಬ್ ಸಿಂಗ್ ಸೈನಿಯವರಿಗೆ ಮುಖ್ಯಮಂತ್ರಿ ಪಟ್ಟ ಒಲಿದು ಬರಲಿದೆಯೇ ಎಂಬುದನ್ನು ಕಾದುನೋಡಬೇಕಿದೆ. ಕೇಂದ್ರ ಸಚಿವ ಅರ್ಜುನ್ ಮುಂಡಾ, ತ್ರಿಪುರ ಮಾಜಿ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇಬ್ ಅವರು ಬಿಜೆಪಿ ವೀಕ್ಷಕರಾಗಿ ಎಡೆಬಿಡದ ಸಭೆಗಳನ್ನು ನಡೆಸುತ್ತಿದ್ದಾರೆ.

ಈಗ ಮುಖ್ಯಮಂತ್ರಿ ಹುದ್ದೆಗೆ ಕೇಳಿಬರುತ್ತಿರುವ ಕುರುಕ್ಷೇತ್ರ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ನಯಾಬ್ ಸಿಂಗ್ ಸೈನಿ ಹಿಂದುಳಿದ ಸಮುದಾಯದವರಾಗಿದ್ದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಕಳೆದ ಅಕ್ಟೋಬರ್ ನಲ್ಲಿ ನೇಮಕಗೊಂಡಿದ್ದರು. 1996 ರಲ್ಲಿ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಜೀವನ ಆರಂಭಿಸಿದ ಸೈನಿ ಹಂತಹಂತವಾಗಿ ಮೇಲಕ್ಕೇರಿದವರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕುರುಕ್ಷೇತ್ರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸೈನಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಿರ್ಮಲ್ ಸಿಂಗ್ ಅವರನ್ನು 3.83 ಲಕ್ಷ ಮತಗಳ ಭಾರೀ ಅಂತರದಲ್ಲಿ ಮಣಿಸಿದ್ದರು.

More articles

Latest article