ಬೆಂಗಳೂರು: ರಾಜ್ಯ ಸರ್ಕಾರದ ಮುಂದೆ ನಿನ್ನೆ ಶರಣಾಗಿದ್ದ 6 ನಕ್ಸಲ್ ನಾಯಕರಿಗೆ ಜನವರಿ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಲಾಗಿದೆ. ಎಲ್ಲ ಅರು ಮಂದಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.
ನಿನ್ನೆ ಶರಣಾಗಿದ್ದ ಮುಂಡಗಾರು ಲತಾ, ಸುಂದರಿ ಕೊತ್ಲೂರು, ವನಜಾಕ್ಷಿ ಬಾಳೆಹೊಳೆ, ಜಿಶಾ, ವಸಂತ್ ಟಿ.ಎನ್, ಮಾರೆಪ್ಪ ಅರೋಲಿ ಅವರನ್ನು ಇಂದು ಎನ್‌ಐಎ ವಿಶೇಷ ಕೋರ್ಟ್‌ನ ನ್ಯಾಯಾಧೀಶರಾದ ಗಂಗಾಧರ್ ಮುಂದೆ ಹಾಜರುಪಡಿಸಲಾಗಿತ್ತು. ಚಿಕ್ಕಮಗಳೂರು ಡಿವೈಎಸ್‌ಪಿ ಬಾಲಾಜಿ ಸಿಂಗ್ ಎಲ್ಲರನ್ನೂ ಹಾಜರುಪಡಿಸಿದ್ದರು. ನ್ಯಾಯಾಧೀಶರು ಜನವರಿ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.
ಬಿಗಿ ಭದ್ರತೆಯ ನಡುವೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಸಂಕೀರ್ಣದ ರಾಷ್ಟ್ರೀಯ ತನಿಖಾ ದಳ (ಎನ್ ಐ ಎ) ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಡಿಸಿಪಿ ಹೆಚ್.ಟಿ. ಶೇಖರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ನ್ಯಾಯಾಲಯಕ್ಕೆ ಹಾಜರುಪಡಿಸುವುದಕ್ಕೂ ಮುನ್ನ 6 ನಕ್ಸಲರನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು.
ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರು ಶರಣಾದ ನಕ್ಸಲರಲ್ಲಿ ನಾಲ್ವರು ಮಹಿಳೆಯರು, ಇಬ್ಬರು ಪುರುಷ ನಕ್ಸಲರಿದ್ದಾರೆ. ರಾಜ್ಯದಲ್ಲಿ ಉಳಿದುಕೊಂಡಿದ್ದ 8 ನಕ್ಸಲರ ಪೈಕಿ ವಿಕ್ರಂಗೌಡ ಅವರನ್ನು ಎನ್ಕೌಂಟರ್ ಮಾಡಲಾಗಿದೆ. ಉಳಿದ 7 ಮಂದಿಯ ಪೈಕಿ 6 ನಕ್ಸಲರು ಶರಣಾಗತಿಯಾಗಿದ್ದಾರೆ. ಆದರೆ ಏಕೈಕ ನಕ್ಸಲ್ ರವೀಂದ್ರ ಶರಣಾಗಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ ರವೀಂದ್ರ ವಿರುದ್ಧ 14 ಪಪ್ರಕರಣಗಳಿವೆ. ಈತ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ., ಕಳೆದ 18 ವರ್ಷಗಳಿಂದ ನಕ್ಸಲ್ ರವೀಂದ್ರ ಭೂಗತನಾಗಿದ್ದಾನೆ.