ಹೊಸದಿಲ್ಲಿ: ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ನಯಾಬ್ ಸಿಂಗ್ ಸೈನಿ ಹರಿಯಾಣ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಸಂಜೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ರಾಜಕೀಯ ಬೆಳವಣಿಗೆಗಳು ಕ್ಷಿಪ್ರಗತಿಯಲ್ಲಿ ನಡೆಯುತ್ತಿದ್ದು, ಮುಖ್ಯಮಂತ್ರಿ ಸ್ಥಾನ ತೊರೆದಿರುವ ಕಟ್ಟರ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸೂಚಿಸಿ ಸೈನಿ ಅವರನ್ನು ಮುಖ್ಯಮಂತ್ರಿ ಗಾದಿಗೆ ತರಲಾಗುತ್ತಿದೆ.
ಇಂದು ಮಧ್ಯಾಹ್ನ ನಡೆದ ತುರ್ತು ಶಾಸಕಾಂಗ ಪಕ್ಷದ ಸಭೆಯಲ್ಲಿ ಹೊಸ ನಾಯಕನನ್ನು ಆಯ್ಕೆ ಮಾಡಲಾಗಿದ್ದು, ಬಿಜೆಪಿ ರಾಷ್ಟೀಯ ವರಿಷ್ಠರು ಸೇರಿದಂತೆ ನಿರ್ಗಮಿತ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಉಪಸ್ಥಿತರಿದ್ದು ನಿಯೋಜಿತ ಮುಖ್ಯಮಂತ್ರಿಗೆ ಶುಭ ಕೋರಿದರು.
ವಿಧಾನಸಭೆಯಲ್ಲಿ ಬಿಜೆಪಿ 41 ಶಾಸಕರ ಬೆಂಬಲ ಹೊಂದಿದ್ದರೆ ಜೆಜೆಪಿ 10 ಸ್ಥಾನಗಳನ್ನು ಹೊಂದಿದೆ. ಆರು ಮಂದಿ ಪಕ್ಷೇತರ ಶಾಸಕರ ಬೆಂಬಲದ ಜೊತೆಗೆ ಹರಿಯಾಣ ಲೋಕಿತ್ ಪಕ್ಷದ ಏಕೈಕ ಶಾಸಕ ಕೂಡ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಈ ನಡುವೆ ಜೆಜೆಪಿ ಪಕ್ಷದ ಐವರು ಶಾಸಕರು ಬಂಡಾಯವೆದ್ದಿದ್ದು ಬಿಜೆಪಿ ಬೆಂಬಲಿಸುವ ಸಾಧ್ಯತೆ ಇದೆ. ಹೀಗಾಗಿ ಸರಳ ಬಹುಮತ ಸಾಧಿಸಲು ಬಿಜೆಪಿಗೆ ಯಾವ ಸಮಸ್ಯೆಯೂ ಇಲ್ಲದಂತಾಗಿದೆ.
ಕೇಂದ್ರ ಸಚಿವ ಅರ್ಜುನ್ ಮುಂಡಾ, ತ್ರಿಪುರ ಮಾಜಿ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇಬ್ ಅವರು ಬಿಜೆಪಿ ವೀಕ್ಷಕರಾಗಿ ಆಗಮಿಸಿದ್ದು, ಹೊಸ ಸರ್ಕಾರ ರಚನೆ ಸಂಬಂಧ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ.
ಯಾರು ಈ ನಯಾಬ್ ಸೈನಿ?
ಸಂಜೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಕುರುಕ್ಷೇತ್ರ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ನಯಾಬ್ ಸಿಂಗ್ ಸೈನಿ ಹಿಂದುಳಿದ ಸಮುದಾಯದವರಾಗಿದ್ದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಕಳೆದ ಅಕ್ಟೋಬರ್ ನಲ್ಲಿ ನೇಮಕಗೊಂಡಿದ್ದರು. 1996 ರಲ್ಲಿ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಜೀವನ ಆರಂಭಿಸಿದ ಸೈನಿ ಹಂತಹಂತವಾಗಿ ಮೇಲಕ್ಕೇರಿದವರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕುರುಕ್ಷೇತ್ರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸೈನಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಿರ್ಮಲ್ ಸಿಂಗ್ ಅವರನ್ನು 3.83 ಲಕ್ಷ ಮತಗಳ ಭಾರೀ ಅಂತರದಲ್ಲಿ ಮಣಿಸಿದ್ದರು.
ಇಂದು ಬೆಳಿಗ್ಗೆ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ತಮ್ಮ ಸಚಿವ ಸಂಪುಟದ ಸಮೇತ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದರು. ಬಿಜೆಪಿ-ಜೆಜೆಪಿ ಮೈತ್ರಿಕೂಟದಲ್ಲಿ ಲೋಕಸಭಾ ಚುನಾವಣೆ ಸ್ಥಾನ ಹೊಂದಾಣಿಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ನಡುವಿನ ಸಂಬಂಧ ಹಳಸಿದ್ದು, ಮೈತ್ರಿ ಕಿತ್ತುಹೋಗಿದೆ. ಎರಡೂ ಪಕ್ಷಗಳು ಎಲ್ಲ ಹತ್ತು ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು ಪರಸ್ಪರ ಸೆಣೆಸಲಿವೆ.