ವಿಬಿಜಿ ರಾಮ್‌ ಜಿ ಯೋಜನೆಗೆ  ಶ್ರೀರಾಮಚಂದ್ರ ಹೆಸರಿಟ್ಟಿಲ್ಲ; ನಾಥೂರಾಮನ ಹೆಸರಿಟ್ಟಿದ್ದಾರೆ: ಸಚಿವ ಶರಣ ಪ್ರಕಾಶ ವಾಗ್ದಾಳಿ

Most read

ರಾಯಚೂರು: ಮಹಾತ್ಮಾ ಗಾಂಧಿ ಹೆಸರಿನ ನರೇಗಾ ಯೋಜನೆಯನ್ನು ರದ್ದುಗೊಳಿಸಿ ವಿಬಿಜಿ ರಾಮ್‌ ಜಿ ಯೋಜನೆಗೆ  ಶ್ರೀರಾಮಚಂದ್ರನ ಹೆಸರನ್ನು ನಾಮಕರಣ ಮಾಡಿಲ್ಲ. ಮಹಾತ್ಮಾ ಅವರನ್ನು ಕೊಂದ ನಾಥೂರಾಮ್ ಗೋಡ್ಸೆ ಹೆಸರು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಲೇವಡಿ ಮಾಡಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಗೋಡ್ಸೆ ತತ್ವಗಳನ್ನು ಅನುಷ್ಠಾನಗೊಳಿಸಲು ಹೊರಟಿದೆ ಎಂದೂ ಅವರು ಟೀಕಿಸಿದ್ದಾರೆ.

ಅವರು ಇಂದು ಇಲ್ಲಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಟೀಯಲ್ಲಿ ಮಾತನಾಡಿದರು. ಗ್ರಾಮೀಣಾಭಿವೃದ್ಧಿಗೆ ಪೂರಕವಾಗಿದ್ದ ಮನರೇಗಾ ಯೋಜನೆಯನ್ನು ರದ್ದುಗೊಳಿಸಿಸಿ, ವಿಕಸಿತ ಭಾರತ – ರೋಜಗಾರ ಮತ್ತು ಅಜೀವಿಕಾ ಮಿಷನ್ (ಗ್ರಾಮಿಣ) ಎಂಬ ಕಾಯಿದೆಯನ್ನು ಜಾರಿಗೊಳಿಸಿದೆ. ಬಡವರು, ಕೂಲಿ ಮತ್ತು ಕೃಷಿ ಕಾರ್ಮಿಕರ ಉದ್ಯೋಗಕ್ಕೆ ತಡೆಯೊಡ್ಡಿ ವಿನಾಕಾರಣ ರಾಮನ ಹೆಸರನ್ನು ಸೇರಿಸಿದ್ದಾರೆ ಎಂದು ಟೀಕಿಸಿದರು.

ವಿಬಿಜಿ ರಾಮ್‌ ಜಿ ಯೋಜನೆ ಕುರಿತು ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚೆಗೆ ಅವಕಾಶ ನೀಡಲಿಲ್ಲ. ಸದನ ಸಮಿತಿಯಿಂದಲೂ ಒಪ್ಪಿಗೆ ಪಡೆಯಲಿಲ್ಲ. ಬಡವರು ಹಾಗೂ ಕಾರ್ಮಿಕರ ಅಭಿವೃದಧಿಗೆ ನೆರವಾಗುತ್ತಿದ್ದ ಕಾಯ್ದೆಯನ್ನು ಬದಲಿಸಲಾಗಿದೆ. ನರೇಗಾದಲ್ಲಿ 100 ದಿನಗಳ ಮಿತಿ ಇರಲಿಲ್ಲ. ಕನಿಷ್ಠ 100 ದಿನ ಉದ್ಯೋಗ ನೀಡಬೇಕು ಎಂದಿತ್ತು. ಆದರೂ  ಬಿಜೆಪಿ ಮುಖಂಡರು ದೇವರ ಹೆಸರಿನಲ್ಲಿ ದಾರಿ ತಪ್ಪಿಸುವ ಕೆಲಸ  ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಮೊದಲಿನಿಂದಲೂ  ನರೇಗಾ ಕಾಯ್ದೆಯನ್ನು ವಿರೋಧಿಸಿ ಬಂಡವಾಳ ಶಾಹಿಗಳ ಪರ ಒಲವು ತೋರಿತ್ತು. 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ಟೀಕಾಪ್ರಹಾರವನ್ನು ಹೆಚ್ಚಿಸಿತ್ತು. ಕೋವಿಡ್‌ ಅವಧಿಯಲ್ಲಿ ನರೇಗಾ ಯೋಜನೆ ವರದಾನವಾಗಿತ್ತು. ಇದನ್ನು ಕೇಂದ್ರ ಸರ್ಕಾರವೂ ಒಪ್ಪಿಕೊಂಡಿತ್ತು. ಆದರೆ  ಇದೀಗ ಕಾಯ್ದೆಯ ಮೂಲ ಉದ್ದೇಶವನ್ನೇ ಬುಡ ಮೇಲು ಮಾಡಿ ಬಡವರ ಹೊಟ್ಟೆಯ ಮೇಲೆ ಹೊಡೆದಿದ್ದಾರೆ ಎಂದರು.

ಆರ್‌ಎಸ್‌ಎಸ್‌ನ ನಾಗಪುರದ  ಮುಖ್ಯ ಕಚೇರಿಯಿಂದ ಬರುವ ಆದೇಶಗಳನ್ನು ಮೋದಿ ಸರಕಾರ ಪಾಲಿಸುತ್ತಿದೆಯೇ ಹೊರತು, ಜನಪರವಾದ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿಲ್ಲ ಎಂದ ಸಚಿವರು, ವಿಬಿಜಿ ರಾಮ್‌ ಜಿ ಹೊರೆಯನ್ನೂ ರಾಜ್ಯ ಸರ್ಕಾರಗಳ ಮೇಲೆ ಹೊರಿಸುತ್ತಿದೆ. ಅತ್ತ ಜಿಎಸ್‌ ಟಿ ಪಾಲು ನೀಡುವಲ್ಲಿಯೂ ಅನ್ಯಾಯ ಎಸಗುತ್ತಿದೆ ಎಂದು ಟೀಕಿಸಿದರು.

ಸಣ್ಣ ನೀರಾವರಿ ಸಚಿವ ಎನ್‌.ಎಸ್‌.ಬೋಸರಾಜು, ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ, ಶಾಸಕ ಬಸನಗೌಡ ದದ್ದಲ್, ಶರಣಗೌಡ ಭಯ್ಯಾಪುರ ಉಪಸ್ಥಿತರಿದ್ದರು.

More articles

Latest article