ನರೇಂದ್ರ ಮೋದಿಯವರ ಸೋಲು ಭಾರತದ ಗೆಲುವು

Most read

ಸರ್ವಾಧಿಕಾರಿ ಮನಸ್ಥಿತಿಯೊಂದಿಗೆ ‘ವನ್ ಮ್ಯಾನ್ ಗವರ್ನ್ ಮೆಂಟ್’ ನಂತೆ ಕೆಲಸ ಮಾಡುತ್ತಿದ್ದ ಮೋದಿಯವರು ಈಗ ತನ್ನ ಮೈತ್ರಿ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಒಂದು ಹೆಜ್ಜೆಯನ್ನೂ ಮುಂದೆ ಇರಿಸದಂತಾಗಿದೆ. ‘ರಾಹುಲ್ ಯಾರು?’ ಎಂದು ಹಗುರವಾಗಿ ಮಾತನಾಡಿದ್ದ ಮೋದಿಯವರು ಈಗ ರಾಹುಲ್ ರನ್ನು ವಿಪಕ್ಷ ಸ್ಥಾನದಲ್ಲಿ ನೋಡಬೇಕಾಗಿದೆ, ಅವರ ಟೀಕಾ ಮಾತುಗಳನ್ನು ಆಲಿಸಬೇಕಾಗಿದೆ. ‘ಬಾಲಕ್ ಬುದ್ಧಿ’ಯು ಅವರಿಗೆ ನಿತ್ಯವೂ ಮರೆಯಲಾಗದಂತಹ ಏಟು ಕೊಡುತ್ತಿದೆ ಶ್ರೀನಿವಾಸ ಕಾರ್ಕಳ

ನರೇಂದ್ರ ಮೋದಿಯವರು ಶಾಸಕನಾಗಿ ಮುಖ್ಯಮಂತ್ರಿಯಾದವರಲ್ಲ. ನೇರವಾಗಿ ಗುಜರಾತಿನ ಮುಖ್ಯಮಂತ್ರಿಯಾಗಿ, ಆ ಬಳಿಕ ಶಾಸಕನಾದವರು. 2001 ರಿಂದ ಅವರ ಈ ಸರ್ವಾಧಿಕಾರಿ ಅಧಿಕಾರ ಪರ್ವ ಆರಂಭವಾಯಿತು.

‘ಸರ್ವಾಧಿಕಾರಿ ಅಧಿಕಾರ ಪರ್ವ’ ಎಂದು ಯಾಕೆ ಹೇಳಿದೆ ಎಂದರೆ, ಗುಜರಾತ್ ವಿಧಾನ ಸಭೆಯಲ್ಲಿ ಭಾರೀ ಬಹುಮತವಿದ್ದುದರಿಂದ ಅವರು, ತನ್ನ ಜಾಯಮಾನಕ್ಕೆ ಅನುಗುಣವಾಗಿಯೇ, ವಿಪಕ್ಷಕ್ಕೆ ಯಾವ ಗೌರವನ್ನೂ ನೀಡದೆ, ಅಲ್ಲಿ ದರ್ಪದ ಆಧಿಕಾರ ನಡೆಸಿದವರು. ವಿಧಾನ ಸಭೆಯ ಕಲಾಪಗಳಿಗೆ ಅವರು ಹಾಜರಾಗುತ್ತಿದ್ದುದು ಕಡಿಮೆ. ಮಸೂದೆಗಳನ್ನು ಪಾಸ್ ಮಾಡುವಾಗ ಪ್ರಜಾಸತ್ತಾತ್ಮಕ ಚರ್ಚೆಗಳಿಗೆ ಅವಕಾಶ ನೀಡುತ್ತಿದ್ದುದೇ ಇಲ್ಲ. ಬೇಕು ಅನಿಸಿದಾಗ, ಅದರಲ್ಲೂ ಕಾರ್ಪೋರೇಟ್ ಗೆಳೆಯರಿಗೆ ಅನುಕೂಲವಾಗುವ ಮಸೂದೆಗಳನ್ನು ‘ಗುಜರಾತ್ ಮಾಡೆಲ್’ ಹೆಸರಿನಲ್ಲಿ ಬುಲ್ ಡೋಜ್ ಮಾಡಿಬಿಡುತ್ತಿದ್ದರು. ಸಂಸದೀಯ ಪ್ರಜಾತಂತ್ರಕ್ಕಾಗಲೀ, ಸಂಸದೀಯ ಪರಂಪರೆಗಾಗಲೀ ಅಲ್ಲಿ ಯಾವ ಅವಕಾಶವೂ ಇರಲಿಲ್ಲ.

ಭ್ರಷ್ಟಾಚಾರದ ವಿರುದ್ಧ ಬಹಳಷ್ಟು ಮಾತನಾಡುವ ಮೋದಿಯವರು ಗುಜರಾತ್ ಆಡಳಿತ ಕಾಲದಲ್ಲಿ ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯೇ ಕಾರ್ಯಾಚರಿಸದ ಹಾಗೆ ನೋಡಿಕೊಂಡರು. ‘ಗುಜರಾತ್ ಸರಕಾರ ಅಂದರೆ ಮೋದಿ, ಮೋದಿ ಅಂದರೆ ಗುಜರಾತ್ ಸರಕಾರ’ ಎಂಬಂತೆ ಇತ್ತು ಆಗಿನ ಆಡಳಿತ (ಗುಜರಾತ್ ಮುಖ್ಯಮಂತ್ರಿ ಹುದ್ದೆ ತೊರೆದ ಮೇಲೂ ಪರೋಕ್ಷವಾಗಿ ಗುಜರಾತ್ ಸರಕಾರ ನಡೆಸುತ್ತಿದ್ದುದು ಮೋದಿಯವರೇ). ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಮೋದಿಯವರಿಗೆ ಪ್ರಜಾತಂತ್ರದಲ್ಲಿ ಯಾವ ನಂಬಿಕೆಯೂ ಇರಲಿಲ್ಲ. ಅವರು ಬೇರೆಯವರನ್ನು ನಂಬುತ್ತಲೂ ಇರಲಿಲ್ಲ.

2014 ರಲ್ಲಿಯೂ ಹೀಗೆಯೇ ಆಯಿತು. ಸಂಸದನಾಗಿ ಯಾವ ಅನುಭವವನ್ನೂ ಹೊಂದಿರದ ಮೋದಿಯವರು ನೇರವಾಗಿ ಮೊದಲ ಬಾರಿಗೆ ಸಂಸದನಾದರು, ಪ್ರಧಾನ ಮಂತ್ರಿಯೂ ಆದರು. ಲೋಕಸಭೆಯಲ್ಲಿ ಭಾರೀ ಬಹುಮತವಿತ್ತು. ಅಧಿಕೃತ ವಿಪಕ್ಷವೇ ಇರಲಿಲ್ಲ. ಹಾಗಾಗಿ ಆನೆ ಸಾಗಿದ್ದೇ ದಾರಿ ಎಂಬಂತೆ ಅವರ ನಡೆಯಾಗಿತ್ತು. ವಿಪಕ್ಷ ದುರ್ಬಲವಾಗಿದ್ದ ಸಂದರ್ಭವನ್ನು ಸರಿಯಾಗಿಯೇ ದುರುಪಯೋಗ ಪಡಿಸಿಕೊಂಡ ಮೋದಿಯವರು ತಮಗೆ ಬೇಕಾದವರನ್ನು ಲೋಕಸಭಾಧ್ಯಕ್ಷ ಮಾಡಿಕೊಂಡರು. ಅಧಿಕೃತ ವಿಪಕ್ಷ ನಾಯಕ ಸ್ಥಾನವನ್ನು ಕಾಂಗ್ರೆಸ್ ಗೆ ನೀಡಲಿಲ್ಲ; ನೀಡುತ್ತಿದ್ದರೆ ಅದೊಂದು, ಔದಾರ್ಯದ ಪ್ರಜಾತಾಂತ್ರಿಕ ಸತ್ ಸಂಪ್ರದಾಯವನ್ನು ಗೌರವಿಸಿದಂತಾಗುತ್ತಿತ್ತು. ಮೋದಿಯವರ ಸರ್ವಾಧಿಕಾರಿ ಧೋರಣೆಯ ಕಾರಣವಾಗಿ ಆನಂತರದ 10 ವರ್ಷ ಏನು ನಡೆಯಿತು ಎನ್ನುವುದನ್ನು ದೇಶ ನೋಡಿದೆ.

ಜಡ್ಜ್‌ ಗಳ ನೇಮಕಾತಿ

ಮಾಧ್ಯಮಗಳನ್ನು ಆಮಿಷ ಮತ್ತು ಧಮಕಿಗಳ ಮೂಲಕ ನಡುಬಗ್ಗಿಸಿ ನಿಲ್ಲುವಂತೆ ಮಾಡಲಾಯಿತು. ಅಲ್ಲಿಗೆ ಪ್ರಜಾತಂತ್ರದ ಒಂದು ಕಂಬ ಕುಸಿದು ಬಿತ್ತು. ನ್ಯಾಯಾಂಗದಲ್ಲೂ ತಮಗೆ ಇಷ್ಟವಾದವರನ್ನು ಮಾತ್ರ ನ್ಯಾಯಮೂರ್ತಿಯಾಗಿ ನೇಮಿಸಲು ಅವಕಾಶ ನೀಡಲಾಯಿತು. ಕೊಲಿಜಿಯಂ ಶಿಫಾರಸು ಮಾಡಿದರೂ ಕೆಲವರನ್ನು ಜಡ್ಜ್ ಆಗಿ ನೇಮಿಸಲು ಅವಕಾಶ ನಿರಾಕರಿಸಲಾಯಿತು. ಜಸ್ಟಿಸ್ ಅರುಣ್ ಮಿಶ್ರಾ, ಜಸ್ಟಿಸ್ ರಂಜನ್ ಗೊಗೋಯಿ, ಜಸ್ಟಿಸ್ ಕಾನ್ವಿಲ್ಕರ್ ಮೊದಲಾದವರು ನೇರವಾಗಿ ನರೇಂದ್ರ ಮೋದಿಯವರ ಪರ ನಿಂತುದರಿಂದ ಸುಪ್ರೀಂ ಕೋರ್ಟ್ ನ ಘನತೆಗೂ ಕುಂದು ಬಂದಿತು, ಆ ಜಸ್ಟಿಸ್ ಗಳು ನಿವೃತ್ತಿಯ ಆನಂತರ ಒಳ್ಳೆಯ ಸ್ಥಾನಮಾನಗಳನ್ನೂ ಪಡೆದುಕೊಂಡರು. ಒಟ್ಟಿನಲ್ಲಿ ಭಾರತದ ನ್ಯಾಯಾಂಗ ತನ್ನ ವಿಶ್ವಾಸಾರ್ಹತೆಯನ್ನು, ಘನತೆಯನ್ನು ಕಳೆದುಕೊಂಡಿತು.

ಹಾಸ್ಯಾಸ್ಪದವಾದ ಸಂಸತ್ ಕಲಾಪ

ಇನ್ನು ಸಂಸದೀಯ ಕಲಾಪಗಳ ಬಗ್ಗೆಯಂತೂ ಹೇಳುವ ಅಗತ್ಯವಿಲ್ಲ. ಬಿಜೆಪಿಯಿಂದ ಬಂದ ಲೋಕಸಭೆ ಮತ್ತು ರಾಜ್ಯ ಸಭೆಯ ಸಭಾಪತಿಗಳು ಬಿಜೆಪಿಯ ಪೂರ್ಣಾವಧಿ ಕಾರ್ಯಕರ್ತರಂತೆ ಅತ್ಯಂತ ಪಕ್ಷಪಾತದಿಂದ ನಡೆದುಕೊಂಡರು.  ವಿಪಕ್ಷದ ಸಂಸದರಿಗೆ ಮಾತನಾಡಲು ಅವಕಾಶ ವಿಲ್ಲ. ಅವರ ಮೈಕ್ ಬಂದ್ ಮಾಡಲಾಯಿತು. ಕ್ಯಾಮರಾ ಅವರ ಮೇಲೆ ಇರದಂತೆ ಮಾಡಲಾಯಿತು. ಪಟ್ಟು ಬಿಡದೆ ಪ್ರಶ್ನಿಸಿದರೆ ಎಲ್ಲರೂ ಹೋಲ್ ಸೇಲ್ ಅಮಾನತು.

ಹೀಗೆ ಸಂಸದರು ಅಮಾನತಾಗಿದ್ದಾಗಲೇ ಕ್ರಿಮಿನಲ್ ಕಾನೂನಿನಂತಹ ಅತ್ಯಂತ ಮಹತ್ವದ ಬಿಲ್ ಪಾಸ್! ಸುಗ್ರೀವಾಜ್ಞೆಗಳನ್ನು ವಿಶೇಷ ಸಂದರ್ಭದಲ್ಲಿ ಮಾತ್ರ ಬಳಸಬೇಕು. ಆದರೆ ಕೃಷಿ ಕಾನೂನುಗಳಿಂದ ಹಿಡಿದು ಎಲ್ಲ ಕಾನೂನುಗಳೂ ಸುಗ್ರಿವಾಜ್ಞೆಯ ಬಾಗಿಲಿನ ಮೂಲಕವೇ ಬರಲಾರಂಭಿಸಿದವು. ಆಧಾರ್ ಮಸೂದೆಯನ್ನು ಕೂಡಾ ಹಣಕಾಸು ಮಸೂದೆ (ಮನಿ ಬಿಲ್) ಎಂದೇ ಪರಿಗಣಿಸಿ ಚರ್ಚೆಯಿಲ್ಲದೆ ಪಾಸ್ ಮಾಡಲಾಯಿತು.

ಲೋಕಸಭೆಗೆ ಉಪ ಸಭಾಪತಿಯನ್ನು ನೇಮಕ ಮಾಡಲೇ ಇಲ್ಲ (ಈಗಲೂ ಮಾಡಿಲ್ಲ). ಎಲ್ಲ ಸಂಸದೀಯ ಸತ್ಪರಂಪರೆಗಳನ್ನೂ ಕಸದ ಬುಟ್ಟಿಗೆ ಎಸೆಯಲಾಯಿತು. ಪ್ರಧಾನ ಮಂತ್ರಿ ಮೋದಿಯವರು ಸಂಸತ್ ಡಿಬೇಟುಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಅವರು ಬರುತ್ತಿದ್ದುದು ಭಾಷಣ ಮಾಡಲು ಮಾತ್ರ. ಅವರ ಭಾಷಣಗಳಾದರೋ ಮೈದಾನದ ಚುನಾವಣಾ ಭಾಷಣದಂತಿರುತ್ತಿದ್ದವು. ವಿಪಕ್ಷಗಳು ಎತ್ತಿದ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ಕಾಂಗ್ರೆಸ್ ಮತ್ತು ನೆಹರೂ ಗೇಲಿಯ ಚೀಪ್ ಭಾಷಣ. ಸಿಎಎ, ಕಾಶ್ಮೀರ ವಿಶೇಷ ಸ್ಥಾನಮಾನ ರದ್ಧತಿ, ನೋಟು ನಿಷೇಧ, ಜಿ ಎಸ್ ಟಿ, ಕೃಷಿ ಮಸೂದೆ ಹೀಗೆ ದೇಶದ ಭವಿಷ್ಯಕ್ಕೆ ಅತ್ಯಂತ ನಿರ್ಣಾಯಕವಾದ ನಿರ್ಧಾರಗಳೂ ಯಾವುದೇ ತೆರನ ಪ್ರಜಾತಾಂತ್ರಿಕ ಚರ್ಚೆ ಇಲ್ಲದೆ ಆಗಿ ಹೋದವು.

ಲೋಕಸಭೆ

‘ಇಂಡಿಯಾ ಈಸ್ ಮದರ್ ಆಫ್ ಡೆಮಾಕ್ರಸಿ, ಡೆಮಾಕ್ರಸಿ ಈಸ್ ಇನ್ ಅವರ ಡಿ ಎನ್ ಎ’ ಎಂದು ಹೋದಲ್ಲಿ ಬಂದಲ್ಲಿ ಹೇಳುತ್ತಿದ್ದ ಮೋದಿಯವರು ಮಾಡಿದ್ದೆಲ್ಲವೂ ಡೆಮಾಕ್ರಸಿ ನಾಶದ ಕೆಲಸ; ಗವರ್ನರ್ ಗಳನ್ನು ಬಳಸಿಕೊಂಡು ವಿಪಕ್ಷಗಳ ಸರಕಾರ ಶಿಥಿಲಗೊಳಿಸಿದ್ದು, ಶಾಸಕರ ಖರೀದಿಯ ಮೂಲಕ ವಿಪಕ್ಷಗಳ ಸರಕಾರವನ್ನು ಉರುಳಿಸಿದ್ದು, ಸರಕಾರವನ್ನು ಟೀಕಿಸುವವರು ವಿದ್ವಾಂಸರಿರಲೀ, ಲೇಖಕರರಿರಲೀ, ಹೋರಾಟಗಾರರಿರಲೀ ಎಲ್ಲರೂ ಜೈಲಿಗೆ.. ಹೀಗೆ.

ಮೋದಿಯವರ ಇಂತಹ ಸರ್ವಾಧಿಕಾರಿ ನಡೆಗೆ ಕಾರಣವಾದುದು ಅವರಿಗೆ ಸಂಸತ್ ನಲ್ಲಿದ್ದ ಬ್ರೂಟ್ ಮೆಜಾರಿಟಿ. ಮೊದಲ ಅವಧಿಯಲ್ಲಿ 282 ಬಿಜೆಪಿ ಸಂಸದರಿದ್ದರೆ (ಬಹುಮತಕ್ಕೆ ಬೇಕಿರುವುದು 272), ಎರಡನೆ ಅವಧಿಯಲ್ಲಿ 303 ಬಿಜೆಪಿ ಸಂಸದರಿದ್ದರು. ಹಾಗಾಗಿ ಮಸೂದೆಗಳನ್ನು ಪಾಸ್ ಮಾಡಲು ಅವರಿಗೆ ಇತರ ಪಕ್ಷಗಳ ನೆರವಿನ ಅಗತ್ಯವೇ ಇರಲಿಲ್ಲ. ಲೋಕಸಭೆಯಲ್ಲಿ ತೀರಾ ಸುಲಭವಾಗಿ ಬಿಲ್ ಪಾಸ್ ಮಾಡಿಕೊಂಡರೆ, ರಾಜ್ಯ ಸಭೆಯಲ್ಲಿ ಬಹುಮತವಿಲ್ಲದಿದ್ದಾಗಲೂ ಅಡ್ಡದಾರಿಯಿಂದ ಬಿಲ್ ಪಾಸ್ ಮಾಡಿಕೊಂಡರು. ಒಟ್ಟಿನಲ್ಲಿ ‘My way or highway’ ಎಂಬ ಮಾದರಿಯ ಆಡಳಿತ.

ಕೊನೆಗೂ ಸರ್ವಾಧಿಕಾರದ ಓಟಕ್ಕೆ ತಡೆ ಬಿತ್ತು

ಈ ಸರ್ವಾಧಿಕಾರದ ನಾಗಾಲೋಟಕ್ಕೆ ಅನಿರೀಕ್ಷಿತ ಮತ್ತು ಅತ್ಯಗತ್ಯ ತಡೆ ಬಿದ್ದುದು 2024 ರಲ್ಲಿ. ‘ಅಬ್ ಕೀ ಬಾರ್ ಚಾರ್ ಸೌ ಪಾರ್’ ಎಂದು ಅಹಂಕಾರದಿಂದ ಮತ್ತು ಆತ್ಮವಿಶ್ವಾಸದಿಂದ ಹೊರಟಿದ್ದ ಮೋದಿಯವರಿಗೆ ದೇಶದ ಜನ ಮರೆಯಲಾಗದ ಪಾಠ ಕಲಿಸಿದರು. 303 ಇದ್ದ ಬಿಜೆಪಿ 239 ಕ್ಕೆ ಕುಸಿಯಿತು. ಸರಳ ಬಹುಮತವೂ ಇಲ್ಲದಾಯಿತು. ಅಧಿಕಾರ ನಡೆಸಲು ಮೈತ್ರಿ ಪಕ್ಷಗಳ ಅದರಲ್ಲೂ ವಿಶೇಷವಾಗಿ ನಿತೀಶ್ ಕುಮಾರ್ (ಜೆಡಿಯು) ಮತ್ತು ಚಂದ್ರಬಾಬು ನಾಯ್ಡು (ಟಿಡಿಪಿ) ಅವರ ಪಕ್ಷಗಳ ಬೆಂಬಲ ಅನಿವಾರ್ಯವಾಯಿತು. ಈ ಎರಡೂ ಪಕ್ಷಗಳು ಬಿಜೆಪಿಯಂತೆ ಮುಸ್ಲಿಂ ದ್ವೇಷಿ ಪಕ್ಷಗಳಲ್ಲ. ಹಾಗಾಗಿ ಮುಸ್ಲಿಂ ದ್ವೇಷ ಕೇಂದ್ರಿತ ಕೋಮು ನಿರ್ಧಾರಗಳಿಗೆ ಅವುಗಳ ಬೆಂಬಲ ಕಷ್ಟ. ಅಲ್ಲದೆ, ಬಿಜೆಪಿಯು ಭಾರತದ ಸಂವಿಧಾನ ನಾಶ ಪಡಿಸಲು ಹೊರಟಿದೆ ಮತ್ತು ಅದು ಹಿಂದುಳಿದವರ ಮೀಸಲಾತಿಯ ವಿರೋಧಿ ಎಂಬ ಮನೋಭಾವ ದಲಿತರಲ್ಲಿ ಬಂದುಬಿಟ್ಟಿದೆ. ಹಾಗಾಗಿಯೇ ಅದು ಉತ್ತರ ಪ್ರದೇಶದಲ್ಲಿ ಭಾರೀ ಹಿನ್ನಡೆ ಅನುಭವಿಸಬೇಕಾಯಿತು.

ಲೋಕಸಭೆಯಲ್ಲಿ ಸ್ವಂತ ಬಲವಿಲ್ಲದ ಕಾರಣ ಈಗ ಬಿಜೆಪಿಗೆ ತನ್ನ ಹಿಂದುತ್ವವಾದಿ ಅಜೆಂಡಾ ಮುಂದೆ ತಳ್ಳುವುದು ಕಷ್ಟವಾಗಿದೆ. ಬಿಜೆಪಿ ಮೊದಲ ಬಾರಿಗೆ ಎಷ್ಟು ದುರ್ಬಲವಾಗಿದೆ ಎನ್ನುವುದಕ್ಕೆ ಅದರ ಇತ್ತೀಚಿನ ಕೆಲವು ಯೂಟರ್ನ್ ನಿರ್ಧಾರಗಳು ಅತ್ಯುತ್ತಮ ಉದಾಹರಣೆಗಳು.

‘ಒಂದು ರಾಷ್ಟ್ರ ಒಂದು ಚುನಾವಣೆ’ಯ ಬಗ್ಗೆ ಮೋದಿಯವರು ಈಗ ಮಾತನಾಡುತ್ತಿಲ್ಲ. ‘ಸಮಾನ ನಾಗರಿಕ ಸಂಹಿತೆ (ಯುಸಿಸಿ)’ ಇನ್ನು ಬೆಳಕು ಕಾಣುವುದು ಅಸಾಧ್ಯ. ವಕ್ಫ್ ಸಂಬಂಧಿತ ಮಸೂದೆಯನ್ನು ಹಿಂದಿನ ಲೋಕಸಭೆಯಲ್ಲಾದರೆ ಬುಲ್ ಡೋಜ್ ಮಾಡಲಾಗುತ್ತಿತ್ತು. ಆದರೆ ಈಗ ಅದನ್ನು ಜೆಪಿಸಿಗೆ ಒಪ್ಪಿಸಲಾಗಿದೆ. ಅಂದರೆ ಅದರ ಕತೆ ಮುಗಿಯಿತು ಎಂದೇ ಅರ್ಥ. ಸರಕಾರವನ್ನು ಟೀಕಿಸುವ ಸ್ವತಂತ್ರ ಮಾಧ್ಯಮಗಳನ್ನು ಅದರಲ್ಲೂ ರವೀಶ್ ಕುಮಾರ್, ಧ್ರುವ ರಾಠಿ, ಅಜಿತ್ ಅಂಜುಂ, ದಿ ವೈರ್ ಮೊದಲಾದವರ ಬಾಯಿ ಮುಚ್ಚಿಸುವ ಉದ್ದೇಶದಿಂದ ತರಬಯಸಿದ್ದ ‘ಬ್ರಾಡ್ ಕಾಸ್ಟಿಂಗ್ ಸರ್ವಿಸಸ್ ರೆಗ್ಯುಲೇಶನ್ ಬಿಲ್ 2023’ ಅನ್ನು ಭಾರೀ ಪ್ರತಿರೋಧದ ತರುವಾಯ ಸರಕಾರ ಹಿಂದೆಗೆದುಕೊಂಡಿದೆ.

ನಿನ್ನೆ ಜಾಯಿಂಟ್ ಸೆಕ್ರೆಟರಿಯಂತಹ ಕೇಂದ್ರ ಸರಕಾರದ ಪ್ರಮುಖ ಹುದ್ದೆಗಳಿಗೆ ಲ್ಯಾಟರಲ್ ಎಂಟ್ರಿ ಅಥವಾ ಆಡು ಭಾಷೆಯಲ್ಲಿ ‘ಹೇಳುವುದಾದರೆ ಹಿಂಬಾಗಿಲಿನ ನೇಮಕಾತಿ’ಯ ನಿರ್ಧಾರವನ್ನು ಸರಕಾರ ತಡೆ ಹಿಡಿದಿದೆ (ಇಂತಹ ೪೫ ನೇಮಕಾತಿಗೆ ಯುಪಿಎಸ್ ಸಿ ಜಾಹೀರಾತು ಹೊರಡಿಸಿತ್ತು). ವಕ್ಫ್ ಕಾಯಿದೆಗೆ ನಿತೀಶ್ ಮತ್ತು ನಾಯ್ಡು ಬೆಂಬಲ ಪಡೆಯುವುದು ಕಷ್ಟವಾದರೆ, ಲ್ಯಾಟರಲ್ ಎಂಟ್ರಿಯು ಮೀಸಲಾತಿ ವಿರೋಧಿ, ಅರ್ಥಾತ್ ಹಿಂದುಳಿದ ಸಮುದಾಯಗಳ ವಿರೋಧಿಯಾದುದರಿಂದ ಸದ್ಯವೇ ಬರಲಿರುವ ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಗಂಟಲ ಮುಳ್ಳಾಗಲಿರುವುದು ನಿಸ್ಸಂಶಯ. ಅಲ್ಲದೆ,  ಬಿಜೆಪಿಯ ಮೈತ್ರಿ ಪಕ್ಷದ ಚಿರಾಗ್ ಪಾಸ್ವಾನ್ ಕೂಡಾ ಇದನ್ನು ತೀವ್ರವಾಗಿ ವಿರೋಧಿಸಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ಅದನ್ನು ತಡೆ ಹಿಡಿದಿದೆ.

ಲ್ಯಾಟರಲ್ ಎಂಟ್ರಿಯನ್ನು ಬಲವಾಗಿ ಪ್ರತಿಪಾದಿಸಿದ್ದು ನೀತಿ ಆಯೋಗ; 2017 ರಲ್ಲಿ. ಸಿವಿಲ್ ಸೇವೆಗಳಲ್ಲಿ ಭಾರೀ ಸುಧಾರಣೆಯ ಹೆಸರಿನಲ್ಲಿ ಅದನ್ನು ಘೋಷಿಸಿದ್ದು 2018 ರಲ್ಲಿ. 2019 ರಿಂದ ಲ್ಯಾಟರಲ್ ಎಂಟ್ರಿಯ ಮೂಲಕ ೬೩ ನೇಮಕಾತಿ ನಡೆದಿತ್ತು. ಈ ವರ್ಷ 45 ನೇಮಕಾತಿಯ ಆಲೋಚನೆ ಮಾಡಲಾಗಿತ್ತು. ಇಂತಹ ನೇಮಕಾತಿಗೆ ಯುಪಿಎಸ್ ಸಿ ಮೂಲಕ ಪಾಸಾಗಿ ಬರುವ ಅಗತ್ಯ ಇಲ್ಲ. ಈ ಯೋಜನೆಯನ್ನು ಸರಕಾರಕ್ಕೆ ದುರುಪಯೋಗಪಡಿಸಿಕೊಳ್ಳುವುದು ಬಲು ಸುಲಭ. ಇದೇ ಕಾರಣದಿಂದ ಆರ್ ಎಸ್ ಎಸ್ ಮಂದಿಯನ್ನು ಮತ್ತು ಕಾರ್ಪೋರೇಟ್ ವಲಯದ ಮಂದಿಯನ್ನು ಉನ್ನತ ಹುದ್ದೆಗಳಿಗೆ ತುಂಬಲಾಗುತ್ತಿದೆ ಎಂಬ ಆರೋಪವೂ ಇತ್ತು. ಈ ಯೋಜನೆಯಲ್ಲಿ ಮೀಸಲಾತಿಗೆ ಅವಕಾಶ ಇಲ್ಲದ ಕಾರಣ ಇದು ಸಂವಿಧಾನದ ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ವಿರುದ್ಧವೂ ಆಗಿತ್ತು. ಮೇಲ್ನೋಟಕ್ಕೆ ಮೀಸಲಾತಿಯನ್ನು ಬಹಿರಂಗವಾಗಿ ಮುಟ್ಟದೆಯೇ ಪರೋಕ್ಷವಾಗಿ ಅದನ್ನು ಇಲ್ಲದಂತೆ ಮಾಡುವ ಅನೇಕ ಕುತಂತ್ರಗಳಲ್ಲಿ ಇದೂ ಒಂದಾಗಿತ್ತು (ಖಾಸಗೀಕರಣ ಇನ್ನೊಂದು ದಾರಿ).

ಬ್ಯಾಕ್ ಫೂಟ್ ನಲ್ಲಿ ಬಿಜೆಪಿ

ಮೊದಲ ಬಾರಿಗೆ ಬಿಜೆಪಿಯು ಬ್ಯಾಕ್ ಫೂಟ್ ನಲ್ಲಿರುವುದು ಕಾಣಿಸುತ್ತಿದೆ. ಬಹುಮತದ ಬೆಂಬಲವಿಲ್ಲದ ಮೋದಿ ಮೊದಲ ಬಾರಿಗೆ ತೀರಾ ದುರ್ಬಲರಂತೆ ಕಾಣಿಸುತ್ತಿದ್ದಾರೆ. ಅವರ ಮುಖದಲ್ಲಿ ಎಂದಿನ ಅಹಂಕಾರ ಮತ್ತು ಆತ್ಮ ವಿಶ್ವಾಸ ಕಾಣಿಸುತ್ತಿಲ್ಲ. ತನಗೆ ಸಂಸತ್ ನಲ್ಲಿ ಮಾತನಾಡಲು ಅವಕಾಶ ಸಿಗುತ್ತಿಲ್ಲ ಎಂದು ಇತ್ತೀಚೆಗೆ ಅವರು ಅತ್ತಿದ್ದರು! ಉತ್ತರ ಪ್ರದೇಶದಲ್ಲಿ ನಲವತ್ತಕ್ಕೂ ಅಧಿಕ ಸ್ಥಾನ ಕಳೆದುಕೊಂಡುದು, ವಾರಣಾಸಿಯಲ್ಲಿ ತನ್ನ ಗೆಲುವಿನ ಅಂತರ ಕೇವಲ ಒಂದೂವರೆ ಲಕ್ಷ ಮತಗಳಾಗಿರುವುದು, ಸಾಲದೆಂಬಂತೆ ಶ್ರೀರಾಮನ ಅಯೋಧ್ಯೆಯಲ್ಲಿಯೇ ಬಿಜೆಪಿ ಸೋತುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಏನೇ ಇರಲೀ, ಲೋಕಸಭೆಯಲ್ಲಿ ಬಿಜೆಪಿ ದುರ್ಬಲ ಗೊಂಡಿರುವುದು, ವಿಪಕ್ಷ ಬಲಗೊಂಡಿರುವುದು ದೇಶದ ಪಾಲಿಗೆ ಒಳ್ಳೆಯ ಬೆಳವಣಿಗೆ. ಬ್ರೂಟ್ ಮೆಜಾರಿಟಿ ಯಾವತ್ತೂ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ. ಸರ್ವಾಧಿಕಾರಿ ಮನಸ್ಥಿತಿಯೊಂದಿಗೆ ‘ವನ್ ಮ್ಯಾನ್ ಗವರ್ನ್ ಮೆಂಟ್’ ನಂತೆ ಕೆಲಸ ಮಾಡುತ್ತಿದ್ದ ಮೋದಿಯವರು ಈಗ ತನ್ನ ಮೈತ್ರಿ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಒಂದು ಹೆಜ್ಜೆಯನ್ನೂ ಮುಂದೆ ಇರಿಸದಂತಾಗಿದೆ. ‘ರಾಹುಲ್ ಯಾರು?’ ಎಂದು ಹಗುರವಾಗಿ ಮಾತನಾಡಿದ್ದ ಮೋದಿಯವರು ಈಗ ರಾಹುಲ್ ರನ್ನು ವಿಪಕ್ಷ ಸ್ಥಾನದಲ್ಲಿ ನೋಡಬೇಕಾಗಿದೆ, ಅವರ ಟೀಕಾ ಮಾತುಗಳನ್ನು ಆಲಿಸಬೇಕಾಗಿದೆ. ‘ಬಾಲಕ್ ಬುದ್ಧಿ’ಯು ಅವರಿಗೆ ನಿತ್ಯವೂ ಮರೆಯಲಾಗದಂತಹ ಏಟು ಕೊಡುತ್ತಿದೆ.

ಮೋದಿ ಸರಕಾರವು ದೇಶದ ಸೆಕ್ಯುಲರ್ ಸ್ವರೂಪಕ್ಕೆ ಧಕ್ಕೆ ತರುವಂತಹ, ಮತ್ತು ದೇಶದ ಸಂವಿಧಾನವನ್ನು ಅಪ್ರಸ್ತುತಗೊಳಿಸುವಂತಹ ಹೆಜ್ಜೆಗಳನ್ನು ಇರಿಸದಂತಾಗಿದೆ. ಪ್ರಜಾತಂತ್ರ ಕೊಂಚ ಉಸಿರಾಡುವಂತಾಗಿದೆ. ಇದಕ್ಕೆಲ್ಲ ಕಾರಣ ಬಿಜೆಪಿಯು ಲೋಕಸಭೆಯಲ್ಲಿ 303 ರಿಂದ 239 ಕ್ಕೆ ಇಳಿದುದು. ‘ಚಾರ್ ಸೌ ಪಾರ್’ ಘೋಷಣೆಯೊಂದಿಗೆ ಹೊರಟಿದ್ದ, ‘ಅಭ್ಯರ್ಥಿ ನೋಡಬೇಡಿ, ನನ್ನನ್ನು ನೋಡಿ, ನೀವು ಮತ ಹಾಕುತ್ತಿರುವುದು ನನಗೆ’ ಎನ್ನುತ್ತಾ ತನ್ನ ಹೆಸರಿನಲ್ಲಿಯೇ ಚುನಾವಣೆ ಎದುರಿಸಿದ್ದ, ಚುನಾವಣೆಯ ಮೊದಲೇ ‘ಅಧಿಕಾರದ ನೂರು ದಿನಗಳ ಯೋಜನೆ’ ಹಾಕಿಕೊಂಡಿದ್ದ ಅಹಂಕಾರಿ ಮೋದಿಯವರ ಸೋಲು ಭಾರತದ ಪ್ರಜಾತಂತ್ರದ ಗೆಲುವಾಗಿದೆ, ಭಾರತದ ಜನಶಕ್ತಿಯ ಮತ್ತು ಸಾಮಾನ್ಯ ಜನರ ವಿವೇಕದ ದೃಷ್ಟಾಂತವಾಗಿದೆ.

ಶ್ರೀನಿವಾಸ ಕಾರ್ಕಳ

ಚಿಂತಕರು

More articles

Latest article