ಪ್ರಶ್ನೆಗಳಿಗೆ ಹೆದರುವ ನರೇಂದ್ರ ಮೋದಿ

Most read

ನರೇಂದ್ರ ಮೋದಿಯವರು ಪ್ರಜಾತಂತ್ರ ವ್ಯವಸ್ಥೆಗೆ ಸಲ್ಲದ ವ್ಯಕ್ತಿ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಪ್ರಜಾತಾಂತ್ರಿಕ ಪರಂಪರೆಯಲ್ಲಿ ಅವರಿಗೆ ಏನೇನೂ ನಂಬಿಕೆ ಇಲ್ಲ ಎನ್ನುವುದಕ್ಕೆ ಹತ್ತು ವರ್ಷಗಳಲ್ಲಿ ಅವರು ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸದಿರುವುದು ಮತ್ತು ಅವರು ಮುಂದೆಯೂ ಅಂತಹ ಒಂದು ಗೋಷ್ಠಿ ನಡೆಸುವ ಸಾಧ‍್ಯತೆ ಇರದಿರುವುದು ಅತ್ಯುತ್ತಮ ಉದಾಹರಣೆ ಶ್ರೀನಿವಾಸ ಕಾರ್ಕಳ

ಇಂದು ಬೆಳಿಗ್ಗೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಮಹತ್ತ್ವದ ಒಂದು ಪತ್ರಿಕಾಗೋಷ್ಠಿ ನಡೆಯಿತು. ಮಹತ್ತ್ವದ್ದು ಯಾಕೆಂದರೆ, ಇದು ಜಂಟಿ ಪತ್ರಿಕಾಗೋಷ್ಠಿಯಾಗಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ‍್ ಯಾದವ್ ಇಬ್ಬರೂ ಪಾಲ್ಗೊಂಡಿದ್ದರು. ಸದ್ಯ ನಡೆಯುತ್ತಿರುವ ಚುನಾವಣೆ, ಮೋದಿಯವರು ಹೇಳುತ್ತಿರುವ ಸುಳ್ಳುಗಳು, ಕಳೆದ ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಮೋದಿಯವರ ಬಳಿ ಜನರ ಜ್ವಲಂತ ಸಮಸ್ಯೆಗಳಿಗೆ ಉತ್ತರ ಇಲ್ಲದಿರುವುದು ಇತ್ಯಾದಿ ಅನೇಕ ವಿಷಯಗಳ ಬಗ್ಗೆ ಮಾತನಾಡಿದ ರಾಹುಲ್ ಮತ್ತು ಅಖಿಲೇಶ್, ಬಳಿಕ ಪತ್ರಕರ್ತರ ಅನೇಕ ಪ್ರಶ್ನೆಗಳನ್ನು ಉತ್ತರಿಸಿದರು. ಎನ್ ಡಿ ಎ ಮೈತ್ರಿಕೂಟದ ಅಭಿಯಾನವನ್ನು ಐದು ನ್ಯಾಯಗಳ ಮೂಲಕ ತಾವು ಹೇಗೆ ಸಮರ್ಥವಾಗಿ ಎದುರಿಸುತ್ತಿದ್ದೇವೆ ಎಂದು ರಾಹುಲ್ ಆತ್ಮವಿಶ್ವಾಸದಿಂದಲೇ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಹುಲ್‌ ಮತ್ತು ಅಖಿಲೇಶ್‌ ಯಾದವ್

ಈ ಪತ್ರಿಕಾಗೋಷ್ಠಿ ಇನ್ನೊಂದು ಕಾರಣಕ್ಕೂ ಮುಖ್ಯವಾಗಿತ್ತು. ಯಾಕೆಂದರೆ INDIA ಮೈತ್ರಿಕೂಟದ ಪಕ್ಷಗಳ ನಡುವಣ ಹೊಂದಾಣಿಕೆಯ ಬಗ್ಗೆ ಅನೇಕ ಊಹಾಪೋಹಗಳು ಮತ್ತು ಟೀಕೆಗಳು ನಾನಾ ವಲಯಗಳಿಂದ ಕೇಳಿಬರುತ್ತಿದ್ದವು. ಆದರೆ ಪಶ್ಚಿಮ ಬಂಗಾಳದಲ್ಲಿ ಹೊರತು ಪಡಿಸಿದರೆ, ತಮಿಳುನಾಡು, ಮಹಾರಾಷ್ಟ್ರ, ದಿಲ್ಲಿ, ಬಿಹಾರ, ಮಧ್ಯಪ್ರದೇಶ, ಉತ್ತರಪ್ರದೇಶ ಹೀಗೆ ಬಹುತೇಕ ಎಲ್ಲ ಕಡೆಯೂ ಇಂಡಿಯಾ ಮೈತ್ರಿಕೂಟದ ಹೊಂದಾಣಿಕೆ ಚೆನ್ನಾಗಿಯೇ ಇದೆ. ಅದು ಇಂದಿನ ಜಂಟಿ ಪತ್ರಿಕಾಗೋಷ್ಠಿಯ ಮೂಲಕ ಮತ್ತೊಮ್ಮೆ ಸಾಬೀತಾಯಿತು.

ರಾಹುಲ್ ನಡೆಸಿದ ನೂರಾರು ಪತ್ರಿಕಾಗೋಷ್ಠಿಗಳು

ಮತ್ತೆ ಪತ್ರಿಕಾಗೋಷ್ಠಿಯ ವಿಷಯಕ್ಕೆ ಬರುವುದಾದರೆ, ರಾಹುಲ್ ಗಾಂಧಿ ಈಗ ಕಾಂಗ್ರೆಸ್ ನ ಒಬ್ಬ ಸಂಸದ ಮತ್ತು ನಾಯಕ ಎನ್ನುವುದನ್ನು  ಹೊರತುಪಡಿಸಿದರೆ, ಕಾಂಗ್ರೆಸ್ ಅಧ್ಯಕ್ಷ ಇತ್ಯಾದಿ ಏನೂ ಅಲ್ಲ. ಆದರೆ ಭಾರತ್ ಜೋಡೋ ಯಾತ್ರೆ, ಭಾರತ್ ಜೋಡೋ ನ್ಯಾಯ ಯಾತ್ರೆ ಸಹಿತ ಅನೇಕ ಸಂದರ್ಭಗಳಲ್ಲಿ ನೂರಕ್ಕೂ ಅಧಿಕ ಬಾರಿ ಪತ್ರಿಕಾಗೋಷ್ಠಿ ನಡೆಸಿ ಅವರು ಪತ್ರಕರ್ತರ ಪ್ರಶ್ನೆಗಳನ್ನು ಉತ್ತರಿಸಿದ್ದಾರೆ. ಕಳೆದ ಹತ್ತು ವರ್ಷಗಳ ಪತ್ರಿಕಾಗೋಷ್ಠಿಗಳನ್ನು ಸೇರಿಸಿದರೆ ಇದು ನೂರು- ನೂರೈವತ್ತು ಮೀರಬಹುದು. ಮುಕ್ತ ಪತ್ರಿಕಾಗೋಷ್ಠಿಗಳಾಗಿದ್ದ ಇವುಗಳಲ್ಲಿ ರಾಹುಲ್ ಪತ್ರಕರ್ತರ ಪ್ರಶ್ನೆಗಳನ್ನು ನಗುಮೊಗದಿಂದಲೇ, ಸಮಾಧಾನದಿಂದ ಎದುರಿಸಿದ್ದಾರೆ, ಉತ್ತರಿಸಿದ್ದಾರೆ. ಆ ಮೂಲಕ ತನಗೆ ಪ್ರಜಾತಾಂತ್ರಿಕ ನಡೆವಳಿಕೆಯಲ್ಲಿ ಅದೆಷ್ಟು ನಂಬಿಕೆ ಇದೆ ಎನ್ನುವುದನ್ನು ತೋರಿಸಿಕೊಡುತ್ತಲೇ ಬಂದಿದ್ದಾರೆ.

ಗಾಝಿಯಾಬಾದ್‌ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು

ನರೇಂದ್ರ ಮೋದಿಯವರ ಪತ್ರಿಕಾಗೋಷ್ಠಿಗಳು

ಇದನ್ನೇ ನರೇಂದ್ರ ಮೋದಿಯವರಿಗೆ ಹೋಲಿಸಿದರೆ, ಕಳೆದ ಹತ್ತು ವರ್ಷಗಳಲ್ಲಿ ಮೋದಿಯವರು ಒಂದೇ ಒಂದು ಮುಕ್ತ ಪತ್ರಿಕಾಗೋಷ್ಠಿಯನ್ನು ನಡೆಸಿಲ್ಲ. ನರೇಂದ್ರ ಮೋದಿಯವರು ಪತ್ರಿಕಾ ಸಂದರ್ಶನ ನೀಡುವಾಗಲೂ ತಮ್ಮ ಪರ ಇರುವ, ಒಂದು ರೀತಿಯಲ್ಲಿ ಭಟ್ಟಂಗಿಯಂತಿರುವ ವಾರ್ತಾ ಸಂಸ್ಥೆಗಳು ಮತ್ತು ವಾರ್ತಾವಾಹಿನಿಗಳನ್ನು ಆಯ್ದುಕೊಳ್ಳುತ್ತಾರೆ. ಅಲ್ಲಿ ಅವರು (ಮೋದಿಯವರು) ನಿರ್ಧರಿಸಿದ ಪ್ರಶ್ನೆಗಳನ್ನೇ ಕೇಳಲಾಗುತ್ತದೆ. ಅವು scripted interviews ಆಗಿರುತ್ತವೆ. ಹಾಗಾಗಿ ಅಂತಹ ಸಂದರ್ಶನಗಳಿಂದ ಅಂತಿಮವಾಗಿ ಹೊರಬರುವುದು ಏನೂ ಇಲ್ಲ.

ಮನಮೋಹನ್ ಸಿಂಗ್ ನಡೆಸಿದ ಪತ್ರಿಕಾಗೋಷ್ಠಿಗಳು

ಇದಕ್ಕೆ ಭಿನ್ನವಾಗಿ ಈ ಹಿಂದಿನ ಪ್ರಧಾನಿ ಡಾ. ಮನ ಮೋಹನ್ ಸಿಂಗ್ ಅವರು ನಿಯಮಿತವಾಗಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದುದೇ ಅಲ್ಲದೆ, ವಿದೇಶ ಯಾತ್ರೆಗೆ ಹೋಗುವ ಸಂದರ್ಭದಲ್ಲಿ ವಿಮಾನದಲ್ಲಿ ತಮ್ಮ ಜತೆಗೇ ಪತ್ರಕರ್ತರನ್ನು ಕರೆದೊಯ್ಯುತ್ತಿದ್ದರು. ವಾಪಸ್ ಬರುವಾಗ, ವಿಮಾನದಲ್ಲಿಯೇ ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರ ಪ್ರಶ್ನೆಗಳನ್ನು ಉತ್ತರಿಸುತ್ತಿದ್ದರು. ಅತ್ಯಂತ ತೀಕ್ಷ್ಣ ಪ್ರಶ್ನೆಗಳನ್ನು ಕೇಳಿದಾಗಲೂ ಅವರು ವಿಚಲಿತರಾದದ್ದಿರಲಿಲ್ಲ. ಅವರ ಕೊನೆಯ ಅಂತಹ ಒಂದು ಸಂದರ್ಶನದಲ್ಲಿ ‘ನನ್ನನ್ನು ಚರಿತ್ರೆ ಅರ್ಥಮಾಡಿಕೊಳ್ಳುತ್ತದೆ, ಚರಿತ್ರೆಯು ತನ್ನ ಬಗ್ಗೆ ಕರುಣೆಯಿಂದ ವರ್ತಿಸುತ್ತದೆ’ ಎಂಬರ್ಥದ ಮಾತಾಡಿದ್ದರು. ಅದೊಂದು ಐತಿಹಾಸಿಕ ಪತ್ರಿಕಾಗೋಷ್ಠಿಯಾಗಿತ್ತು.

ಮೋದಿಯವರಿಗೆ ಪ್ರಜಾತಂತ್ರದಲ್ಲಿ ನಂಬಿಕೆಯಿಲ್ಲವೇ?

ANI ಗೆ ಮೋದಿ ನೀಡಿದ ಸಂದರ್ಶನ

ಭಾರತದಲ್ಲಿ  ಪತ್ರಿಕಾಗೋಷ್ಠಿಗಳನ್ನು ನಡೆಸಿ ಪತ್ರಕರ್ತರ ಪ್ರಶ್ನೆಗಳನ್ನು ಉತ್ತರಿಸದ  ಮಾಜಿ ಪ್ರಧಾನಿಗಳು ಒಬ್ಬರೂ ನಿಮಗೆ ಸಿಗಲಾರರು. ಆದರೆ, ಕಳೆದ ಹತ್ತು ವರ್ಷಗಳಲ್ಲಿ ಮೋದಿಯವರು ಜನರೊಡನೆ ಮಾತನಾಡಲು ಆಯ್ದುಕೊಂಡ ಮಾರ್ಗಗಳನ್ನು ಗಮನಿಸಿದರೆ, ಅವರಿಗೆ ಪತ್ರಿಕಾಗೋಷ್ಠಿಗಳಲ್ಲಿ ನಂಬಿಕೆ ಇಲ್ಲ. ಅವರಿಗೆ ಪ್ರಶ್ನೆಯನ್ನು ಎದುರಿಸುವ ಅವಕಾಶ ಇರದ ಏಕಮುಖ ಮಾರ್ಗಗಳಲ್ಲಿಯೇ ಆಸಕ್ತಿ ಇರುವುದನ್ನು ಕಾಣಬಹುದು.

ತುಂಬಾ ಪ್ರಸಿದ್ಧವಾದ ಕರಣ್ ಥಾಪರ್ ಸಂದರ್ಶನದಲ್ಲಿ ನೀರು ಕುಡಿದು, ‘ದೋಸ್ತಿ ಬನೀ ರಹೇ’ ಎಂದ ಪ್ರಕರಣದ ಬಳಿಕ ಅವರು ಕಟು ಪ್ರಶ್ನೆಗಳನ್ನು ಕೇಳುವ ಪತ್ರಕರ್ತರಿಗೆ ಸಂದರ್ಶನ ನೀಡಿದ ಉದಾಹರಣೆಯೇ ಇಲ್ಲ. ಕಳೆದ ಹತ್ತು ವರ್ಷಗಳಲ್ಲಿ ಅವರು ಸಾವಿರಾರು ಭಾಷಣ ಮಾಡಿದ್ದಾರೆ. ನೂರಾರು ರೇಡಿಯೋ ಮನ್ ಕಿ ಬಾತ್ ಮಾಡಿದ್ದಾರೆ. ಇವೆಲ್ಲವೂ ಏಕಮುಖವಾದ ಭಾಷಣಗಳು. ಇಲ್ಲಿ ಸಂವಾದಕ್ಕೆ ಪ್ರಶ್ನೆಗಳಿಗೆ ಅವಕಾಶ ಇಲ್ಲ. ತಮಗೆ ಹೆಚ್ಚಿನ ಓದಿನ ಬಲವಿಲ್ಲದ್ದು, ಸಂಸದರಾಗಿ ಕೆಲಸ ಮಾಡದೆ, ನೇರ ಪ್ರಧಾನಿಯಾದ ಕಾರಣ ದೇಶದ ರಾಜಕೀಯ, ಆಡಳಿತ, ಆರ್ಥಿಕತೆ, ಅಂತಾರಾಷ್ಟ್ರೀಯ ಜಿಯೋ ಪಾಲಿಟಿಕ್ಸ್ ಇತ್ಯಾದಿಗಳ ಬಗ್ಗೆ ಹೆಚ್ಚಿನ ಅರಿವಿಲ್ಲದ್ದು, ಅನೇಕ ಅತಿರೇಕದ ನಿರ್ಧಾರಗಳನ್ನು ಕೈಗೊಂಡು ಜನರ ಸಿಟ್ಟು ಎದುರಿಸಿರುವುದು ಇವೆಲ್ಲದರ ಕಾರಣವೇ ಅವರಿಗೆ ಪತ್ರಕರ್ತರ ಪ್ರಶ್ನೆಗಳನ್ನು ಎದುರಿಸಲು ಭಯವಿರಬಹುದೇ?

ಪತ್ರಿಕೆಗಳೇ ಪ್ರತಿಪಕ್ಷಗಳು

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪತ್ರಿಕೆಗಳು (ಮೀಡಿಯಾ) ಅನಧಿಕೃತ ಪ್ರತಿಪಕ್ಷಗಳಾಗಿರುತ್ತವೆ. ಸರಕಾರ ಹಾದಿ ತಪ್ಪದಂತೆ ನೋಡಿಕೊಳ್ಳುವಲ್ಲಿ ಅವುಗಳ ಪಾತ್ರ ದೊಡ್ಡದು. ಪತ್ರಕರ್ತರು ಕೇಳುವ ಪ್ರಶ್ನೆಯೆಂದರೆ ಅದು ನಿಜದಲ್ಲಿ ಜನರು ಕೇಳುವ ಪ್ರಶ್ನೆಗಳೇ ಆಗಿರುತ್ತವೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜೆಗಳ ಮತದಿಂದ ಅಧಿಕಾರದ ಕುರ್ಚಿಯೇರುವ ಪ್ರಭುಗಳು ಪ್ರಜೆಗಳಿಗೆ ಸದಾ ಉತ್ತರದಾಯಿಯಾಗಿರಬೇಕು. ಅವರ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರವನ್ನು ಕೊಟ್ಟು ಅನುಮಾನವನ್ನು ಪರಿಹರಿಸುತ್ತಿರಬೇಕು.

ತಾನು ಪ್ರಜೆಗಳಿಗೆ ಉತ್ತರದಾಯಿಯಲ್ಲ, ಅವರ ಪ್ರಶ್ನೆಗಳಿಗೆ ತಾನು ಉತ್ತರಿಸಬೇಕಾಗಿಲ್ಲ ಎಂದುಕೊಳ್ಳುವ ವ್ಯಕ್ತಿಗೆ ಪ್ರಜಾತಂತ್ರದಲ್ಲಿ ನಂಬಿಕೆ ಇಲ್ಲ ಎಂದೇ ಅರ್ಥ (ಸಂಸತ್ತಿನಲ್ಲಿಯೂ ಅವರು ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ ಪ್ರತಿಪಕ್ಷದ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ). ಪ್ರಜಾತಂತ್ರದಲ್ಲಿ ನಂಬಿಕೆ ಇಲ್ಲದ ವ್ಯಕ್ತಿ ಪ್ರಜಾತಂತ್ರಕ್ಕೆ ಸಲ್ಲುವ ವ್ಯಕ್ತಿಯೂ ಆಗಿರುವುದಿಲ್ಲ. ಈ ಅರ್ಥದಲ್ಲಿ ನರೇಂದ್ರ ಮೋದಿಯವರು ಪ್ರಜಾತಂತ್ರ ವ್ಯವಸ್ಥೆಗೆ ಸಲ್ಲದ ವ್ಯಕ್ತಿ. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಪ್ರಜಾತಾಂತ್ರಿಕ ಪರಂಪರೆಯಲ್ಲಿ ಅವರಿಗೆ ಏನೇನೂ ನಂಬಿಕೆ ಇಲ್ಲ ಎನ್ನುವುದಕ್ಕೆ ಹತ್ತು ವರ್ಷಗಳಲ್ಲಿ ಅವರು ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸದಿರುವುದು ಮತ್ತು ಅವರು ಮುಂದೆಯೂ ಅಂತಹ ಒಂದು ಗೋಷ್ಠಿ ನಡೆಸುವ ಸಾಧ‍್ಯತೆ ಇರದಿರುವುದು ಅತ್ಯುತ್ತಮ ಉದಾಹರಣೆ.


ಶ್ರೀನಿವಾಸ ಕಾರ್ಕಳ

ಸಾಮಾಜಿಕ ಚಿಂತಕರು

ಇದನ್ನೂ ಓದಿ- ʼಪಶ್ಚಾತ್ತಾಪʼ ಗ್ಯಾರಂಟಿಯೂ.. ಪ್ರಧಾನಿಗಳ ಸಮರ್ಥನೆಯೂ..

More articles

Latest article