ಬೆಂಗಳೂರು: ಕನ್ನಡಿಗರ ಹಿತಾಸಕ್ತಿಗೆ ಮಾರಕವಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆಯ ಪ್ರಸ್ತಾಪವನ್ನು ಕೈಬಿಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಂಗಳೂರು ನಗರದ ಆಡಳಿತ ನಿರ್ವಹಣೆಯ ದೃಷ್ಟಿಯಿಂದ ವಿಭಜನೆಯೊಂದೇ ಪರಿಹಾರವಲ್ಲ. ಆಡಳಿತ ವಿಕೇಂದ್ರೀಕರಣಕ್ಕೆ ಬೇರೆ ದಾರಿಗಳೂ ಇವೆ. ಈ ಕಾರಣದಿಂದ ಸರ್ಕಾರ ವಿಭಜನೆಯ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರು ಮಹಾನಗರ ಇತ್ತೀಚಿನ ದಿನಗಳಲ್ಲಿ ವಲಸಿಗರ ಸಂತೆಯಾಗಿ ಹೋಗಿದೆ. ಪ್ರತಿನಿತ್ಯ ಬೇರೆಬೇರೆ ರಾಜ್ಯಗಳಿಂದ ಜನರು ಗಂಟುಮೂಟೆ ಕಟ್ಟಿಕೊಂಡು ಬಂದು ಬೆಂಗಳೂರಿನಲ್ಲಿ ನೆಲೆಸುತ್ತಿದ್ದಾರೆ. ಬೆಂಗಳೂರಿನ ಭೌಗೋಳಿಕ, ಸಾಮಾಜಿಕ, ಸಾಂಸ್ಕೃತಿಕ ಚಹರೆಯನ್ನೇ ಈ ವಲಸಿಗರು ಬದಲಾಯಿಸುತ್ತಿದ್ದಾರೆ. ಬೆಂಗಳೂರಿನ ಮೂಲನಿವಾಸಿಗಳಾದ ಕನ್ನಡಿಗರೇ ಅತಂತ್ರ ಸ್ಥಿತಿಯಲ್ಲಿ ಬದುಕುವಂಥ ಸಂದರ್ಭವನ್ನು ಈ ವಲಸಿಗರು ಸೃಷ್ಟಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದು ನಗರದ ಸ್ವಾಸ್ಥ್ಯ, ಸಾಮರಸ್ಯಕ್ಕೆ ಧಕ್ಕೆ ತಂದು ಸಂಘರ್ಷವನ್ನು ನಿರ್ಮಿಸಿದರೆ ಆಶ್ಚರ್ಯಪಡಬೇಕಾಗಿಲ್ಲ. ಇಂಥ ಸಂದರ್ಭದಲ್ಲಿ ಬೆಂಗಳೂರನ್ನು ವಿಭಜಿಸಿ ಐದು ಪಾಲಿಕೆಗಳನ್ನಾಗಿ ಮಾಡಿದರೆ ವಲಸಿಗರು ಹೆಚ್ಚು ಇರುವ ಪಾಲಿಕೆಗಳನ್ನು ಇದೇ ಜನರು ನಿಯಂತ್ರಣಕ್ಕೆ ತಂದುಕೊಂಡರೆ ಕನ್ನಡಿಗರು ಎಲ್ಲಿಗೆ ಹೋಗಬೇಕು? ಬೆಳಗಾವಿ ಮಹಾನಗರಪಾಲಿಕೆಯ ಇತಿಹಾಸ ಸರ್ಕಾರಕ್ಕೆ ಗೊತ್ತಿಲ್ಲದೇ ಏನಿಲ್ಲ. ಬೆಂಗಳೂರಿನಲ್ಲೂ ಇಂಥ ಪಾಲಿಕೆಗಳು ಬೇಕೇ? ಎಂದು ಅವರು ಪ್ರಶ್ನಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತಕ್ಕೆ ಸಂಬಂಧಿಸಿದಂತೆ ಸರ್ಕಾರ ಈಗಾಗಲೇ ಎಂದು ವಲಯಗಳನ್ನು ರಚಿಸಿ, ವಿಕೇಂದ್ರೀಕರಣದ ಹೆಜ್ಜೆ ಇಟ್ಟಿದೆ. ಎಂಟೂ ವಲಯಗಳಿಗೆ ಐಎಎಸ್ ಅಧಿಕಾರಿಗಳನ್ನೇ ವಲಯ ಆಯುಕ್ತರನ್ನಾಗಿ ನೇಮಿಸಲಾಗಿದೆ. ಅಲ್ಲದೆ ಜಂಟಿ ಆಯುಕ್ತರನ್ನೂ ನೇಮಿಸಲಾಗಿದೆ. ಸರ್ಕಾರ ಮೊದಲು ಮಾಡಬೇಕಿರುವ ಕೆಲಸ ಈ ವಲಯಗಳಿಗೆ ಹೆಚ್ಚಿನ ಆರ್ಥಿಕ ಶಕ್ತಿಯನ್ನು ತುಂಬಿ, ಮೂಲಸೌಕರ್ಯಗಳನ್ನು ಹೆಚ್ಚಿಸಿ, ಹೆಚ್ಚಿನ ಸ್ವಾಯತ್ತತೆಯನ್ನು ಒದಗಿಸುವುದು. ಹೀಗಾದಾಗ ಮಾತ್ರ ವಿಕೇಂದ್ರೀಕರಣದ ಉದ್ದೇಶ ಈಡೇರುತ್ತದೆ. ಆಡಳಿತವೂ ಸುಗಮವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಏಷಿಯಾದಲ್ಲೇ ಅತ್ಯಂತ ಸಿರಿವಂತ ಮಹಾನಗರ ಪಾಲಿಕೆ ಎನಿಸಿಕೊಂಡಿರುವ ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯ ವಾರ್ಷಿಕ ಬಜೆಟ್ 50,000 ಕೋಟಿಯನ್ನು ದಾಟಿದೆ. ಪಾಲಿಕೆಯು ಇಟ್ಟಿರುವ ನಿಶ್ಚಿತ ಠೇವಣಿಯ ಮೊತ್ತ 83,000 ಕೋಟಿ. ದೇಶದ ಹಲವು ರಾಜ್ಯಗಳ ಬಜೆಟ್ ಪ್ರಮಾಣಕ್ಕಿಂತ ದೊಡ್ಡ ಬಜೆಟನ್ನು ಬಿಎಂಸಿ ನಿರ್ವಹಿಸುತ್ತದೆ. ಆಡಳಿತಾತ್ಮಕ ಸಮಸ್ಯೆಗಳನ್ನು ನಿರ್ವಹಿಸಲು ಅಲ್ಲಿ ಆಡಳಿತ ವಿಕೇಂದ್ರೀಕರಣವನ್ನು ಸಮರ್ಪಕವಾಗಿ ಜಾರಿಗೊಳಿಸಲಾಗಿದೆ. ಹೀಗಾಗಿ ಅಲ್ಲಿ ಪಾಲಿಕೆ ವಿಭಜನೆಯ ಮಾತು ಯಾರಿಂದಲೂ ಕೇಳಿಬರುತ್ತಿಲ್ಲ. ಹೀಗಿರುವಾಗ ಬೆಂಗಳೂರು ಪಾಲಿಕೆಯನ್ನು ವಿಭಜಿಸಬೇಕು ಎಂಬ ಮಾತು ಯಾಕೆ ಹೊರಬರುತ್ತಿದೆ? ಶೀತ ಬಂದಾಗ ಮೂಗು ಕೊಯ್ದುಕೊಳ್ಳುವುದೊಂದೇ ದಾರಿಯೇ? ಬೇರೆ ಉಪಾಯಗಳು ಇರುವುದಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಪಾಲಿಕೆ ವಿಭಜನೆಯು ನಿಶ್ಚಿತವಾಗಿ ಕನ್ನಡಿಗರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆಯೂ ಸಹ ಪಾಲಿಕೆ ವಿಭಜನೆಯ ಮಾತುಗಳು ಕೇಳಿಬಂದಾಗ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿತ್ತು. ಆಡಳಿತ ಸುಧಾರಣೆಯ ನಿಟ್ಟಿನಲ್ಲಿ ಸರ್ಕಾರದ ಕಾಳಜಿಯನ್ನು ನಾವು ಪ್ರಶ್ನಿಸುತ್ತಿಲ್ಲ. ಆದರೆ ಇದು ಕನ್ನಡಿಗರ ಪಾಲಿಗೆ ಸಮಸ್ಯಾತ್ಮಕವಾಗುವ ಹಿನ್ನೆಲೆಯಲ್ಲಿ ನಮ್ಮ ತಾತ್ತ್ವಿಕ ವಿರೋಧವಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯನ್ನು ವಿಭಜಿಸುವ ಯತ್ನವನ್ನು ಸರ್ಕಾರ ನಿಲ್ಲಿಸಿ, ವಲಯಗಳಿಗೆ ಹೆಚ್ಚಿನ ಶಕ್ತಿಯನ್ನು ತುಂಬಿ ಸುಗಮ ಆಡಳಿತಕ್ಕೆ ಒತ್ತು ನೀಡಬೇಕು ಎಂದು ನಾರಾಯಣಗೌಡ ಒತ್ತಾಯಿಸಿದ್ದಾರೆ.