ಬೆಂಗಳೂರು: ಕನ್ನಡಿಗರ ಹೆಮ್ಮೆಯ ಬ್ರಾಂಡ್ ನಂದಿನಿ NANDINI ಮತ್ತೆ ಎಕ್ಸ್ ನಲ್ಲಿ ಟ್ರೆಂಡ್ ಆಗುತ್ತಿದೆ. ನಂದಿನಿ ಬೆಳವಣಿಗೆ ವಿಷಯದಲ್ಲಿ ಅಪಸ್ವರ ಮಾತಾಡಿದ ಉದ್ಯಮಿ ಮೋಹನ್ ದಾಸ್ ಪೈಗೆ ಕನ್ನಡಿಗರು ಎಕ್ಸ್ ನಲ್ಲಿ ಬೆಂಡೆತ್ತುತ್ತಿದ್ದಾರೆ.
ಮುಂಬರುವ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಸ್ಕಾಟ್ ಲ್ಯಾಂಡ್ ಮತ್ತು ಐರ್ಲೆಂಡ್ ತಂಡಗಳನ್ನು ಕನ್ನಡಿಗರ ಅಚ್ಚುಮೆಚ್ಚಿನ ನಂದಿನಿ ಪ್ರಾಯೋಜಿಸುತ್ತಿದೆ. ನಂದಿನಿ ಬ್ರಾಂಡ್ ಬೆಳವಣಿಗೆ ಮತ್ತು ಅದನ್ನು ವಿಶ್ವಮಟ್ಟದಲ್ಲಿ ಪ್ರಸಿದ್ಧಿಗೊಳಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಆದರೆ ಉದ್ಯಮಿ ಮೋಹನ್ ದಾಸ್ ಪೈ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅನವಶ್ಯಕ ತಗಾದೆ ತೆಗೆದು ಈಗ ನೆಟ್ಟಿಗರಿಂದ ಮಂಗಳಾರತಿ ಮಾಡಿಸಿಕೊಳ್ಳುತ್ತಿದ್ದಾರೆ.
ʻʻಎಂತಹ ದೊಡ್ಡ ನಾಚಿಕೆಗೇಡಿನ ಸಂಗತಿ! ಅವರು ಕರ್ನಾಟಕದ ರೈತರಿಗೆ ಸೇರಿದ, ಕನ್ನಡಿಗರಾದ ಗ್ರಾಹಕರು ಪಾವತಿಸುವ ಹಣವನ್ನು ವಿದೇಶಿ ತಂಡಗಳಿಗೆ ಪ್ರಾಯೋಜಿಸಲು ಏಕೆ ಬಳಸುತ್ತಿದ್ದಾರೆ? ಅದು ಯಾವ ಮೌಲ್ಯವನ್ನು ನೀಡುತ್ತದೆ? ಬಡ ರೈತರಿಗೆ ಉತ್ತಮ ವೇತನ ನೀಡಿʼʼ ಎಂದು ಮೋಹನ ದಾಸ ಪೈ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ ಎಕ್ಸ್ ನಲ್ಲಿ ಬರೆದುಕೊಂಡಿದ್ದರು. ಆದರೆ ಈ ಪೋಸ್ಟ್ ಸ್ವಾಭಿಮಾನಿ ಕನ್ನಡಿಗರನ್ನು ಕೆರಳಿಸಿದೆ.
ಬಿಜೆಪಿ ಸರ್ಕಾರ ನಂದಿನಿಯನ್ನು ಸಾಯಿಸಿ ಗುಜರಾತಿ ಅಮೂಲ್ ಬೆಳೆಸಲು ಯತ್ನಿಸಿತು. ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಇದನ್ನು ಚುನಾವಣೆಯ ವಿಷಯ ಮಾಡಿತು. ಕನ್ನಡಿಗರು ಇದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡಿ ಬಿಜೆಪಿಯನ್ನು ಸೋಲಿಸಿದರು. ಈಗ ನಂದಿನಿಯನ್ನು ಕಾಂಗ್ರೆಸ್ ಸರ್ಕಾರ ಎಷ್ಟು ಬಲಪಡಿಸಿದೆಯೆಂದರೆ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಸ್ಕಾಟ್ ಲ್ಯಾಂಡ್ ಮತ್ತು ಐರ್ಲೆಂಡ್ ತಂಡಗಳನ್ನು ಪ್ರಾಯೋಜಿಸುತ್ತಿದೆ ಎಂದು ಶಾಂತನು ಎಂಬುವವರು ಬರೆದಿದ್ದಾರೆ.
ನಂದಿನಿ ಬ್ರಾಂಡಿಂಗ್ ಮಾಡಿಕೊಳ್ಳುತ್ತಿರುವುದಕ್ಕೆ, ಪ್ರಾಯೋಜಿಸುತ್ತಿರುವುದಕ್ಕೆ ಸಂತೋಷ ಪಡಿ. ನಂದಿನಿಯನ್ನು ಗುಜ್ಜುಗಳಿಗೆ ಮಾರಾಟ ಮಾಡುವುದಕ್ಕಿಂತ ಇದು ತುಂಬಾ ಒಳ್ಳೆಯದು. ರೈತರಿಗೆ ಸರಿಯಾದ ಹಣ ಸಂದಾಯವಾಗುತ್ತಿಲ್ಲ ಎಂದಾದರೆ ಅದಕ್ಕೆ ಬೇರೆ ಥ್ರೆಡ್ ನಲ್ಲಿ ಬರೆಯಿರಿ, ರೈತರನ್ನು ಉಳಿಸಿ ಎಂದು ಪ್ರತಿಭಟನೆ ಮಾಡಿ. ನಾವೂ ಬೆಂಬಲ ನೀಡುತ್ತೇವೆ. ಆದರೆ ನಿಮ್ಮ ಉದ್ದೇಶ ಅದಲ್ಲ. ಹೀಗಾಗಿ ನಿಮ್ಮ ಅಭಿಪ್ರಾಯವನ್ನು ಬಿಸಾಡಿ ತೊಲಗಿ ಎಂದು ಸುಷ್ಮಾ ಅಯ್ಯಂಗಾರ್ ಅವರು ಬರೆದಿದ್ದಾರೆ. ಇದೇ ಸಂದರ್ಭದಲ್ಲಿ ಅಮೂಲ್ ಪ್ರಗತಿಯ ಕುರಿತು ಇದೇ ಮೋಹನ್ ದಾಸ್ ಪೈ ಹಿಂದೆ ಬರೆದ ಟ್ವೀಟ್ ಗಳ ಸ್ಕ್ರೀನ್ ಶಾಟ್ ಗಳನ್ನು ಅವರು ಪೋಸ್ಟ್ ಮಾಡಿದ್ದಾರೆ.
ನಂದಿನಿ ಪ್ರಾಯೋಜಿಸುವುದು ತಪ್ಪಾದರೆ ಅಮೂಲ್ ತಾಲಿಬಾನ್ ಆಡಳಿತದ ಅಫಘಾನಿಸ್ತಾನ ತಂಡವನ್ನು ಪ್ರಯೋಜಿಸುತ್ತಿರುವುದು ಎಷ್ಟು ಸರಿ? ಅಮೂಲ್ ಆರಾಧಕರಾದ ಮೋಹನ್ ದಾಸ್ ಪೈ ಇದರ ಕುರಿತು ಯಾಕೆ ಮಾತನಾಡಿಲ್ಲ? ಅಮೂಲ್ ಕ್ರಿಕೆಟ್ ತಂಡವನ್ನು ಪ್ರಾಯೋಜಿಸಿದರೆ ರೈತರಿಗೆ ತೊಂದರೆ ಆಗುವುದಿಲ್ಲವೇ ಎಂದು ಹಲವರು ಪ್ರಶ್ನಿಸಿದ್ದಾರೆ.
ಬಸವರಾಜ ಬೊಮ್ಮಾಯಿ ಅವರ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಗುಜರಾತ್ ನ ಅಮೂಲ್ ಹಾಲು ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದರ ಕುರಿತು ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ವಿರೋಧ ಕಂಡುಬಂದಿತ್ತು. ನಂದಿನಿಯನ್ನು ಸರ್ವನಾಶ ಮಾಡಿ, ರಾಜ್ಯದ ರೈತರನ್ನು ಗುಜರಾತಿಗಳ ಗುಲಾಮರನ್ನಾಗಿ ಮಾಡುವ ಸಂಚು ನಡೆಸಿದೆ ಎಂದು ಕನ್ನಡಿಗರು ಧ್ವನಿ ಎತ್ತಿದ್ದರು. ನಂದಿನಿ ರಕ್ಷಿಸಿ #savenandini ಟ್ರೆಂಡ್ ಆಗಿತ್ತು. ಚುನಾವಣೆಯ ಸಂದರ್ಭದಲ್ಲಿ ಜಾಣತನದಿಂದ ಈ ವಿಷಯವನ್ನು ಬಳಸಿಕೊಂಡ ಕಾಂಗ್ರೆಸ್ ಪಕ್ಷ ಬಿಜೆಪಿ ವಿರುದ್ಧ ಚುನಾವಣಾ ಅಸ್ತ್ರವನ್ನಾಗಿ ಇದನ್ನು ಬಳಸಿಕೊಂಡಿತ್ತು.