ಇದೇ ಜೂನ್ 2ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಆರಂಭವಾಗಲಿರುವ 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದ ಆಟಗಾರರ ಜೆರ್ಸಿಯಲ್ಲಿ ಕನ್ನಡ ಭಾಷೆ ನಂದಿನಿ ಹಾಲಿನ ಬ್ರ್ಯಾಂಡ್ ಪ್ರದರ್ಶಿಸಲಾಗುತ್ತಿದೆ.
2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್‌ನ ಆಟಗಾರರು ತಮ್ಮ ತೋಳಿನ ಮುಂಭಾಗ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ನಂದಿನಿಯ ಲಾಂಛನವಿರುವ ಜೆರ್ಸಿಯನ್ನು ಧರಿಸಿರುವುದು ಕಂಡುಬರುತ್ತದೆ.
ಇದನ್ನು ಅಧಿಕೃತವಾಗಿ ಟ್ವೀಟ್ ಮಾಡುವ ಮೂಲಕ ಘೋಷಿಸಿರುವ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲೇಷಿಯಾ, ವಿಯೆಟ್ನಾಂ, ಸಿಂಗಾಪುರ, ಅಮೇರಿಕಾ, ದುಬೈ, ಯುಎಇ ಮುಂತಾದ ರಾಷ್ಟ್ರಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆ ಈಗ T20 ವಿಶ್ವಕಪ್ ಪಂದ್ಯಕೂಟದಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವ ಪಡೆದಿದೆ. ರಾಜ್ಯದ ಉತ್ಕೃಷ್ಟ ಗುಣಮಟ್ಟದ ಹಾಲಿನ ಉತ್ಪನ್ನಗಳು ಮತ್ತು ನಾಡಿನ ರೈತರ ಶ್ರಮವೆರಡನ್ನೂ ವಿಶ್ವಕ್ಕೆ ಪರಿಚಯಿಸುವ ಸಂಕಲ್ಪ ನಮ್ಮದು. ನಂದಿನಿಯನ್ನು ಜಾಗತಿಕ ಬ್ರಾಂಡ್ ಆಗಿ ರೂಪಿಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ. ಈ ಬಾರಿ ವಿಶ್ವಕಪ್‌ನಲ್ಲಿ ರಾರಾಜಿಸಲಿದೆ ನಂದಿನಿ, ಕಂಗೊಳಿಸಲಿದೆ ಕನ್ನಡ ಎಂದು ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೆಎಂಎಫ್ ಅಧ್ಯಕ್ಷ ಭೀಮ ನಾಯ್ಕ್ “2024ರ ಟಿ-20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳಿಗೆ ರಾಜ್ಯದ ನಂದಿನಿ ಬ್ರ್ಯಾಂಡ್ ಪ್ರಾಯೋಜಕತ್ವ ವಹಿಸಲಿದೆ. ಆ ತಂಡಗಳ ಆಟಗಾರರು ಪಂದ್ಯದ ವೇಳೆ ನಮ್ಮ ನಂದಿನಿ ಬ್ರ್ಯಾಂಡ್ ಪ್ರದರ್ಶಿಸಲಿದ್ದಾರೆ,” ಎಂದು ತಿಳಿಸಿದರು.
”ನಂದಿನಿ ಉತ್ಪನ್ನಗಳ ಪ್ರಚಾರಕ್ಕಾಗಿ ಕ್ರಿಕೆಟ್ ತಂಡಗಳ ಪ್ರಾಯೋಜಕತ್ವ ವಹಿಸುತ್ತಿದ್ದೇವೆ. ನಂದಿನಿಯನ್ನು ಜಾಗತಿಕ ಬ್ರ್ಯಾಂಡ್ ಆಗಿ ಪರಿವರ್ತಿಸಲು ಈ ನಿರ್ಧಾರ ಕೈಗೊಂಡಿದ್ದೇವೆ. ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ಟಿ-20 ವಿಶ್ವಕಪ್ ಟೂರ್ನಿ ನಡೆಯಲಿದ್ದು, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಆಟಗಾರರು ನಂದಿನಿ ಹೆಸರು ಹಾಗೂ ಲೋಗೋ ಇರುವ ಜೆರ್ಸಿ ಧರಿಸಿ, ಪ್ರಚಾರ ನೀಡಲಿದ್ದಾರೆ,” ಎಂದು ಹೇಳಿದರು.