ಬೆಂಗಳೂರು ಮೂಲದ ಸಮುದಾಯದ ನೇತೃತ್ವದ ಮೊಬಿಲಿಟಿ ಅಪ್ಲಿಕೇಶನ್ನಾದ `ನಮ್ಮ ಯಾತ್ರಿ’ (Namma Yatri) ಅಕ್ಟೋಬರ್ 10ರಿಂದ ಕಲ್ಯಾಣ ಕರ್ನಾಟಕ (Kalyana Karnataka) ಪ್ರದೇಶದಲ್ಲಿ ತನ್ನ ಕಾರ್ಯಾಚರಣೆಯನ್ನು ಅಧಿಕೃತವಾಗಿ ಪ್ರಾರಂಭಿಸಿತು.
ಬೆಂಗಳೂರು, ಮೈಸೂರು ಮತ್ತು ತುಮಕೂರಿನಲ್ಲಿ ಕಾರ್ಯನಿರ್ವಹಿಸಿದ ನಂತರ, ನಮ್ಮ ಯಾತ್ರಿ ಈಗ ತನ್ನ ಸೇವೆಗಳನ್ನು ಕಲಬುರಗಿಗೆ ವಿಸ್ತರಿಸಿತು, ಜೊತೆಗೆ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಕಾರ್ಯಾಚರಣೆಯನ್ನು ಫ್ಲ್ಯಾಗ್‌ಆಫ್ ಮಾಡುವ ಮೂಲಕ ಪ್ರಾರಂಭಿಸಿದ್ದಾರೆ.
ಕಲಬುರಗಿಯಲ್ಲಿ ಒಂದು ತಿಂಗಳ ಅವಧಿಯ ಪ್ರಯೋಗ ಮಾಡಿದ್ದು, ತಿಂಗಳೊಂದರಲ್ಲೇ ಸುಮಾರು 5,000 ಟ್ರಿಪ್‌ಗಳು ಪೂರ್ಣಗೊಂಡಿವೆ. ಪ್ರಸ್ತುತ, ಸರಿಸುಮಾರು 600 ಚಾಲಕರು ಕಲಬುರಗಿಯಲ್ಲಿ ನಮ್ಮ ಯಾತ್ರಿಯನ್ನು ಸಕ್ರಿಯವಾಗಿ ಬಳಸುತ್ತಿದ್ದಾರೆ. ಈ ಪ್ರಾಯೋಗದ ನಂತರ ಅಕ್ಟೋಬರ್ 10 ರಂದು ಅಧಿಕೃತವಾಗಿ ಚಾಲನೆ ಸಿಕ್ಕಿದೆ.
ಕಲಬುರಗಿಯಲ್ಲಿ ನಮ್ಮ ಯಾತ್ರಿ ಆರಂಭವಾದ ಬೆನ್ನಲ್ಲೇ ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಇತರ ಭಾಗಗಳಲ್ಲಿಯೂ ಚಾಲಕ ಸಮುದಾಯಗಳು ಶೀಘ್ರವೇ ಸೇವೆ ಆರಂಭಿಸಲು ಯೋಜಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ, ತುಮಕೂರಿನ ಚಾಲಕರು ನಮ್ಮ ಯಾತ್ರಿ ಸೇವೆಗಳನ್ನು ಪ್ರಾರಂಭಿಸಿದರು. 1.6 ಲಕ್ಷಕ್ಕೂ ಹೆಚ್ಚು ಟ್ರಿಪ್‌ಗಳನ್ನು ಪೂರ್ಣಗೊಳಿಸಿ 1 ಕೋಟಿಗೂ ಹೆಚ್ಚು ದುಡಿದಿದ್ದಾರೆ. ಮೂರು ನಗರದಲ್ಲಿ ಸುಮಾರು 2.2 ಲಕ್ಷ ಚಾಲಕರು ಇದ್ದು, 45 ಲಕ್ಷಕ್ಕೂ ಹೆಚ್ಚು ಗ್ರಾಹಕರ ಸಮುದಾಯದೊಂದಿಗೆ, ನಮ್ಮ ಯಾತ್ರಿ ಸುಮಾರು 1.4 ಲಕ್ಷ ದೈನಂದಿನ ಸೇವೆಯನ್ನು ನೀಡುತ್ತಿದ್ದಾರೆ.
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕರ್ನಾಟಕ ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಕಲ್ಯಾಣ ಕರ್ನಾಟಕ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬೆಳೆಯುತ್ತಿರುವಾಗ, ಕೈಗೆಟುಕುವ ಮತ್ತು ಪರಿಣಾಮಕಾರಿ ಸಾರಿಗೆ ಅಗತ್ಯವು ನಿರ್ಣಾಯಕವಾಗಿದೆ. ನಮ್ಮ ಯಾತ್ರಿ ಈ ಪ್ರದೇಶದಲ್ಲಿ ಕಾರ್ಯಾಚರಣೆ ಆರಂಭಿಸಿದ್ದಕ್ಕಾಗಿ ನಾನು ಶ್ಲಾಘಿಸುತ್ತೇನೆ ಎಂದು ಹೇಳಿದ್ದಾರೆ.