ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ “ನಮ್ಮ ಮೋದಿ” ಎಂಬ ಪುಟದಲ್ಲಿ ಎಐ ತಂತ್ರಜ್ಞಾನ ಬಳಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಕಿಸ್ತಾನ ಬಾವುಟ ಹಿಡಿದು ನೃತ್ಯ ಮಾಡುತ್ತಿರುವ ರೀತಿಯಲ್ಲಿ ನಕಲಿ ವಿಡಿಯೋ ಸೃಷ್ಟಿಸಿ ಪೋಸ್ಟ್ ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ಅರುಣ್ ಫುರ್ಟಾಡೊ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಇನ್ ಸ್ಟ್ರಾಗ್ರಾಮ್ ಸಾಮಾಜಿಕ ಮಾಧ್ಯಮದಲ್ಲಿ “ನಮ್ಮ ಮೋದಿ” ಎಂಬ ಪುಟದಲ್ಲಿ, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಉಪಯೋಗಿಸಿ ರಾಜ್ಯದ ಮಾನ್ಯ ಮುಖ್ಯಮಂತ್ರಿಯವರು ಪಾಕಿಸ್ತಾನ ಬಾವುಟ ಹಿಡಿದು ನೃತ್ಯ ಮಾಡುತ್ತಿರುವ ರೀತಿಯಲ್ಲಿ, ನಕಲಿ ವಿಡಿಯೋ ಸೃಷ್ಟಿಸಿ, ಪೋಸ್ಟ್ ಮಾಡಿ ವೈರಲ್ ಮಾಡಲಾಗಿರುತ್ತದೆ. ರಾಜ್ಯದ ಮುಖ್ಯಮಂತ್ರಿಯವರ ಕೈಯಲಿ ಶತ್ರು ರಾಷ್ಟ್ರದ ಧ್ವಜವನ್ನು ನೀಡಿ ನೃತ್ಯ ಮಾಡುವಂತೆ ನಕಲಿ ವಿಡಿಯೋವನ್ನು ಸೃಷ್ಟಿಸಿ ಇನ್ ಸ್ಟ್ರಾಗ್ರಾಮ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವವರನ್ನು ಪತ್ತೆಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ವಿವರಿಸಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ಬಿಜೆಪಿಯ ಐಟಿ ಸೆಲ್ ಸೃಷ್ಟಿಸಿರಬಹುದು ಎಂದು ಶಂಕಿಸಲಾಗಿದೆ. ಒಂದು ರಾಜ್ಯದ ಮುಖ್ಯಮಂತ್ರಿಯ ಕೈಯಲ್ಲಿ ವೈರಿ ದೇಶದ ಬಾವುಟ ಕೊಟ್ಟು ನರ್ತಿಸುತ್ತಿರುವ ರೀತಿಯಲ್ಲಿ ಎಐ ತಂತ್ರಜ್ಞಾನ ಬಳಸಿ ವಿಡಿಯೋ ಮಾಡುವುದು ಅದರಲ್ಲೂ ಕಾಶ್ಮೀರದಲ್ಲಿ ಭಯೋತ್ಪಾದನೆಯ ಕೃತ್ಯ ನಡೆದಿರುವ ಸಂದರ್ಭದಲ್ಲಿ ಇಂತಹ ವಿಕೃತಿ ತೋರಿರುವುದು ತೀವ್ರ ಖಂಡನೆಗೆ ಕಾರಣವಾಗಿದೆ. ಸುಮಾರು 2 ಲಕ್ಷ ಫಾಲೋಯರ್ಸ್ ಇರುವ ಈ “ನಮ್ಮ ಮೋದಿ” ಪುಟದಲ್ಲಿ ಹಾಕಿರುವ ಈ ವಿಡಿಯೋವನ್ನು 2000 ಜನರು ಹಂಚಿಕೊಂಡಿದ್ದು 5600 ಜನರು ಲೈಕ್ ಮಾಡಿದ್ದಾರೆ. ಇದಕ್ಕೆ ಬಂದಿರುವ 387 ಕಮೆಂಟುಗಳಲ್ಲಿ ಹೆಚ್ಚಿನವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ.
ಕಾಶ್ಮೀರದಲ್ಲಿ ಭಯೋತ್ಪಾದಕ ಘಟನೆ ನಡೆದ ಕೂಡಲೇ ಅತ್ಯಂತ ತ್ವರಿತಗತಿಯಲ್ಲಿ ಸ್ಪಂದಿಸಿ, ಅಲ್ಲಿ ಸಿಲುಕಿಕೊಂಡಿರುವ ಪ್ರವಾಸಿಗರ ರಕ್ಷಣೆಗೆ ಕೂಡಲೇ ಒಬ್ಬ ಸಚಿವರನ್ನೂ ಸೇರಿದಂತೆ ಹಲವು ಅಧಿಕಾರಿಗಳನ್ನು ಕಳಿಸಿ ಎಲ್ಲಾ ಪ್ರವಾಸಿಗರು ಸುರಕ್ಷಿತವಾಗಿ ಬೆಂಗಳೂರು ತಲುಪುವಂತೆ ಮಾಡಿದ್ದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಇದೇ ಸಂದರ್ಭದಲ್ಲಿ ಇಂತಹ ಒಂದು ಮಾರಣಹೋಮಕ್ಕೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯದ ಹೊಣೆಯನ್ನು ಮೋದಿ ಸರ್ಕಾರ ಹೊರುವಂತೆ ಸಿದ್ದರಾಮಯ್ಯ ಆಗ್ರಹಪಡಿಸಿದ್ದರು. ಇದನ್ನು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ. ಹೀಗಿರುವಾಗ ಸಿದ್ದರಾಮಯ್ಯ ಅವರನ್ನು ಇಷ್ಟು ವಿಕೃತ ರೀತಿಯಲ್ಲಿ ಬಿಂಬಿಸುವ ಉದ್ದೇಶವೇನು?
ರಾಜ್ಯದ ಮುಖ್ಯಮಂತ್ರಿಗಳನ್ನೇ ಗುರಿಪಡಿಸಿ ಹೀಗೆ ವಿಕೃತ ಫೇಕ್ ವಿಡಿಯೋಗಳನ್ನು ನಡೆಸುತ್ತಿರುವವರ ಮೇಲೆ ಯಾವುದೇ ಕಾನೂನು ಕ್ರಮ ಯಾಕಿಲ್ಲ? ಸರ್ಕಾರದ ಪೊಲೀಸ್ ಇಲಾಖೆ, ಸೈಬರ್ ಅಪರಾಧ ಇಲಾಖೆಗಳು ನಿದ್ದೆ ಮಾಡುತ್ತಿವೆಯೇ ಎಂಬ ಪ್ರಶ್ನೆಯನ್ನೂ ಸಾರ್ವಜನಿಕರು ಕೇಳುತ್ತಿದ್ದಾರೆ.