ಹೊಸಪೇಟೆ: ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್, ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ (ಕುಂ.ವೀ.) ಮತ್ತು ಹಿಂದೂಸ್ತಾನಿ ಗಾಯಕ ಪಂಡಿತ್ ಎಂ.ವೆಂಕಟೇಶ್ ಕುಮಾರ್ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯ ನೀಡುವ ‘ನಾಡೋಜ’ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ವಿಶ್ವವಿದ್ಯಾಲಯದ 33ನೇ ನುಡಿಹಬ್ಬ (ಘಟಿಕೋತ್ಸವ) ಶುಕ್ರವಾರ ಸಂಜೆ ವಿದ್ಯಾರಣ್ಯ ಕ್ಯಾಂಪಸ್‌ನ ‘ನವರಂಗ’ ಬಯಲು ರಂಗಮಂದಿರದಲ್ಲಿ ನಡೆಯಲಿದ್ದು, ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ನಾಡೋಜ ಪದವಿ ಪ್ರದಾನ ಮಾಡುವರು ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರಾದ ಕುಂ.ವೀ. ಅವರಿಗೆ ಕಳೆದ ವರ್ಷವೇ ನಾಡೋಜ ಗೌರವ ನೀಡಲು ಶಿಫಾರಸು ಮಾಡಲಾಗಿತ್ತು. ಈ ವರ್ಷ ಅದಕ್ಕೆ ಸಮ್ಮತಿ ಸಿಕ್ಕಿದೆ. ಶಿವರಾಜ ಪಾಟೀಲ್ ರಾಯಚೂರು ಜಿಲ್ಲೆಯವರು ಹಾಗೂ ವೆಂಕಟೇಶ್ ಕುಮಾರ್ ಅವರು ಸಂಡೂರು ಮೂಲದವರು. ಮೂರು ವೈವಿಧ್ಯಮಯ ಕ್ಷೇತ್ರಗಳ ಸಾಧಕರನ್ನು ಗುರುತಿಸಿದ ಹೆಮ್ಮೆ ವಿಶ್ವವಿದ್ಯಾಲಯಕ್ಕೆ ಇದೆ. ಇದುವರೆಗೂ 98 ಮಂದಿ ನಾಡೋಜ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಅವರು ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ರಾಜಾಸಾಬ್ ಎ.ಎಚ್. ಘಟಿಕೋತ್ಸವ ಭಾಷಣ ಮಾಡಿದರೆ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಡಿ.ಲಿಟ್ ಮತ್ತು ಪಿಎಚ್.ಡಿ. ಪದವಿ ಪ್ರದಾನ ಮಾಡುವರು ಎಂದು ತಿಳಿಸಿದರು.
198 ಮಂದಿಗೆ ಪಿಎಚ್.ಡಿ: ನುಡಿಹಬ್ಬದಲ್ಲಿ 198 ಮಂದಿಗೆ ಪಿಎಚ್.ಡಿ.ಪದವಿ ಪ್ರದಾನ ಮಾಡಲಾಗುತ್ತದೆ. ದೇದಾಸಿಯರ ಬದುಕಿನ ಬಗ್ಗೆ ಅಧ್ಯಯನ ನಡೆಸಿ ಸ್ವತಃ ದೇವದಾಸಿಯ ಪುತ್ರನೇ ಪಿಎಚ್.ಡಿ. ಪಡೆದಿರುವುದು ವಿಶೇಷವಾಗಿದೆ. ನಾಲ್ವರು ಅಂಗವಿಕಲರು ಸಹ ಈ ಸಾಧನೆ ಮಾಡಿದ್ದಾರೆ. ಗ್ರಾಮೀಣ ಭಾಗದ, ತಳಸಮುದಾಯದ ಹಲವರು ಉನ್ನತ ಶಿಕ್ಷಣ, ಸಂಶೋಧನೆಯ ಕನಸು ಕಂಡು ಇಲ್ಲಿ ಸಫಲರಾಗಿದ್ದಾರೆ ಎಂದು ಕುಲಪತಿ ತಿಳಿಸಿದರು.
7 ಮಂದಿಗೆ ಡಿ.ಲಿಟ್: ಇಬ್ಬರು ಯಕ್ಷಗಾನ ಕಲಾವಿದರಾದ ತಾರಾನಾಥ ವರ್ಕಾಡಿ, ಸುರೇಂದ್ರ ಪಣಿಯೂರು, ಕೃಷಿಕರಾದ ಜಿ.ಪುರುಷೋತ್ತಮ ಗೌಡ ಅವರು ಸಲ್ಲಿಸಿದ ಮಹಾಪ್ರಬಂಧವನ್ನು ಮನ್ನಿಸಿ ಡಿ.ಲಿಟ್ ನೀಡಲಾಗುವುದು. ಇದರ ಜತೆಗೆ ವಿವಿಧ ವಿಷಯಗಳಲ್ಲಿ ಜ್ಯೋತಿ ಎಂ., ಕೆ.ಆರ್.ವಿದ್ಯಾಧರ, ಮುಕ್ತಾ ಬಿ.ಕಾಗಲಿ, ರೂಪಾ ಅಯ್ಯರ್ ಅವರು ಸಿದ್ಧಪಡಿಸಿದ ಪ್ರಬಂಧಗಳನ್ನು ಮನ್ನಿಸಿ ಡಿ.ಲಿಟ್ ಪದವಿ ನೀಡಲಾಗುವುದು ಎಂದು ಹೇಳಿದರು.