ಧರ್ಮ, ಜಾತಿ ಹಣ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ತಮ್ಮ ವ್ಯಕ್ತಿತ್ವವನ್ನು ಬೆಳೆಸಿ ಕೊಳ್ಳುವ ಪ್ರಯತ್ನವನ್ನು ಈ ಹಿಂದಿನ ಪ್ರಧಾನಿಗಳು ಮಾಡಲಿಲ್ಲ. ಮೋದಿಯವರು ಇದೆಲ್ಲವನ್ನು ಬಳಸಿಕೊಂಡು ನಾಯಕತ್ವದ ಮಿಥ್ಯೆಯನ್ನು ಸೃಷ್ಟಿಸಿ ಅವರನ್ನು ಬಿಟ್ಟರೆ ಬೇರೆ ನಾಯಕರಿಲ್ಲ ಎಂಬ ಭ್ರಮೆಯನ್ನು ಸೃಷ್ಟಿಸಿದ್ದಾರೆ-ಡಾ. ಗಣನಾಥ ಎಕ್ಕಾರು, ಜಾನಪದ ವಿದ್ವಾಂಸರು
ಕಳೆದ ಕೆಲವು ವರ್ಷಗಳಿಂದ ಅಲ್ಲಲ್ಲಿ ಈ ಮಾತನ್ನು ನೀವು ಕೇಳಿರಬಹುದು. ಮೋದಿ ಬಿಟ್ಟರೆ ಸಮರ್ಥ ನಾಯಕರು ಯಾರಿದ್ದಾರೆ?. ಮೋದಿಗೆ ಬದಲಿ ನಾಯಕ ಇದ್ದಾನೆಯೆ? ವಿರೋಧ ಪಕ್ಷದಲ್ಲಿ ನಾಯಕತ್ವದ ಕೊರತೆ ಇದೆ. ಮೋದಿಗೆ ಸರಿಸಾಟಿಯಾಗಬಲ್ಲ ನಾಯಕ ಯಾರಿದ್ದಾರೆ? ವಾಸ್ತವವಾಗಿ ಇದು ಒಂದು ಸುಳ್ಳು ಗೃಹಿಕೆ, ಮಿಥ್ಯೆ ಎನ್ನದೆ ವಿಧಿಯಿಲ್ಲ. ನಿಜವಾಗಿಯೂ ಮೋದಿಯವರು ಸಮರ್ಥ ನಾಯಕತ್ವವನ್ನು ನೀಡಿದ್ದಾರೆಯೆ? ಇಡೀ ದೇಶದ 160 ಕೋಟಿ ಪ್ರಜೆಗಳಲ್ಲಿ ಇನ್ನೊಬ್ಬ ಸಮರ್ಥ ನಾಯಕನನ್ನು ಹುಡುಕಲು ಸಾಧ್ಯವಿಲ್ಲವೆ? ಎಂಬ ಪ್ರಶ್ನೆಗೆ ಖಂಡಿತಾ ಸಾಧ್ಯ ಎಂಬ ಉತ್ತರವನ್ನು ಕಂಡುಕೊಳ್ಳ ಬಹುದಾಗಿದೆ.
ಈ ಬಗ್ಗೆ ಭಾರತದ ಸ್ವಾತಂತ್ರ್ಯೋತ್ತರ ರಾಜಕೀಯ ಇತಿಹಾಸವನ್ನು ಗಮನಿಸಿದರೆ ಉತ್ತರ ದೊರೆಯುತ್ತದೆ. ಜವಾಹರಲಾಲ್ ನೆಹರು ಮೇ 27 1964 ರಲ್ಲಿ ನಿಧನರಾದಾಗ ಮುಂದಿನ ನಾಯಕ ಯಾರು? ಎಂಬ ಪ್ರಶ್ನೆ ಕಾಡಿತ್ತು. ಆದರೆ ಲಾಲ್ ಬಹದ್ದೂರು ಶಾಸ್ತ್ರಿ ಅವರು ಸಮರ್ಥ ನಾಯಕತ್ವವನ್ನು ನೀಡಿದರು. 1965 ರಲ್ಲಿ ಪಾಕಿಸ್ಥಾನದ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದಲ್ಲದೆ “ಜೈ ಜವಾನ್ ಜೈ ಕಿಸಾನ್” ಘೋಷಣೆಯ ಮೂಲಕ ದೇಶ ಕಾಯುವ ಸೈನಿಕ ಮತ್ತು ಅನ್ನ ನೀಡುವ ರೈತರ ಬಗೆಗಿನ ಕಾಳಜಿಯಿಂದ ಕೆಲಸ ಮಾಡಿ ನೆಹರು ಪರಂಪರೆಯನ್ನು ಮುಂದುವರಿಸಿದರು. 1966 ರಲ್ಲಿ ಶಾಸ್ತ್ರೀಜಿಯವರ ನಿಧನದ ಬಳಿಕ ಮತ್ತೆ ನಾಯಕತ್ವದ ಪ್ರಶ್ನೆ ಎದುರಾಯಿತು. ಇದಕ್ಕೆ ದೊರೆತ ಉತ್ತರ ಶ್ರೀಮತಿ ಇಂದಿರಾ ಗಾಂಧಿ.
ಭಾರತದ ರಾಜಕೀಯ ಇತಿಹಾಸದಲ್ಲಿ ಇಂದಿರಾಗಾಂಧಿಯವರು ಮರೆಯಲಾರದ ವ್ಯಕ್ತಿತ್ವ. ಶಾಸ್ತ್ರೀಜಿಯವರ ಸಂಪುಟದಲ್ಲಿ 1964 ರಿಂದ 66ರ ವರೆಗೆ ವಾರ್ತಾ ಮತ್ತು ಪ್ರಸಾರ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿದ ಇಂದಿರಾಗಾಂಧಿಯವರು 1966 ರಲ್ಲಿ ಸರ್ವಸಮ್ಮತವಾಗಿ ಪ್ರಧಾನಿ ಹುದ್ದೆ ಅಲಂಕರಿಸಿದರು. ಸ್ವಾತಂತ್ರ್ಯ ಬಂದು 19 ವರ್ಷಗಳಲ್ಲಿ ಮಹಿಳೆಯೊಬ್ಬಳು ದೇಶದ ಪ್ರಧಾನಿಯಾಗಿರುವುದು ಭಾರತದ ರಾಜಕೀಯ ಚರಿತ್ರೆಯ ಹೆಮ್ಮೆಯಾಗಿದೆ. ಬ್ಯಾಂಕ್ ರಾಷ್ಟ್ರೀಕರಣ, ಹಸಿರು ಕ್ರಾಂತಿ, ಪರಮಾಣು ಯೋಜನೆ, ರಾಜಧನ ರದ್ದು, ಭೂಸುಧಾರಣೆ ಮೊದಲಾದ ಕ್ರಾಂತಿಕಾರಿಕ ಅಭಿವೃದ್ಧಿ ಕಾರ್ಯದ ರೂವಾರಿಯಾಗಿದ್ದರು. 1971 ರಲ್ಲಿ ಬಾಂಗ್ಲಾ ವಿಮೋಚನೆಯ ಪಾಕ್ ಜತೆಗಿನ ಯುದ್ಧದಲ್ಲಿ ಜಗತ್ತೆ ಬೆರಗಾಗುವಂತೆ ಕಾರ್ಯ ನಿರ್ವಹಿಸಿ ಜಯಶೀಲರಾದರು. ಸ್ವತ: ಮಾಜಿ ಪ್ರಧಾನಿ ವಾಜಪೇಯಿಯವರಿಂದ ದುರ್ಗಾಮಾತೆ ಎಂಬ ಪ್ರಶಂಸೆಗೆ ಪಾತ್ರರಾದರು. 197೫ ರಲ್ಲಿ ಅವರು ಜಾರಿಗೆ ತಂದ ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಕರಾಳ ಚರಿತ್ರೆ. ಆದರೆ 1980 ರಲ್ಲಿ ಮತ್ತೆ ಪ್ರಧಾನಿಯಾಗಿ ಆಯ್ಕೆಯಾದುದು ಅವರ ಸಮರ್ಥ ನಾಯಕತ್ವಕ್ಕೆ ಸಾಕ್ಷಿ. ದೇಸಾಯಿಯವರ ನಾಯಕತ್ವ ದೇಶವನ್ನು ಸಮರ್ಥವಾಗಿ ಮುನ್ನಡೆಸಿತ್ತು.
1984 ರಲ್ಲಿ ಇಂದಿರಾ ಗಾಂಧಿಯವರು ತಮ್ಮ ರಕ್ಷಣಾ ಸಿಬ್ಬಂದಿಯ ಗುಂಡಿಗೆ ಬಲಿಯಾದಾಗ ಮತ್ತೆ ನಾಯಕತ್ವದ ಪ್ರಶ್ನೆ ತಲೆದೋರಿತು. ಸ್ವಲ್ಪ ಸಮಯ ಚೌಧರಿ ಚರಣ್ ಸಿಂಗರು ಪ್ರಧಾನಿಯಾದರು. ಪೈಲೆಟ್ ಆಗಿದ್ದ ರಾಜೀವ ಗಾಂಧಿಯವರು ರಾಜಕೀಯ ಪ್ರವೇಶಿಸಿ ಸಮರ್ಥ ನಾಯಕತ್ವ ನೀಡಿದರು. ಇಂದಿನ ವೈಜ್ಞಾನಿಕ ಕ್ರಾಂತಿ ರೂವಾರಿ ಎಂದು ಪ್ರಶಂಸೆಗೆ ಪಾತ್ರರಾದ ರಾಜೀವರು ಶ್ರೀಲಂಕಾದ ಆಂತರಿಕೆ ಕ್ಷೋಭೆಯನ್ನು ಹತ್ತಿಕ್ಕುವುದರಲ್ಲಿ ಯಶಸ್ವಿಯಾದರು. ಅದಕ್ಕಾಗಿ ಅವರು ಪ್ರಾಣಾರ್ಪಣೆ ಮಾಡಬೇಕಾಯಿತು. ಬಳಿಕ ವಿ.ಪಿ. ಸಿಂಗ್ ಚಂದ್ರಶೇಖರ್ ಉತ್ತಮ ನಾಯಕರಾಗಿದ್ದರು.
ಕಾಂಗ್ರೇಸ್ಸಿನಲ್ಲಿ ವಂಶ ಪಾರಂಪರ್ಯ ಬಿಟ್ಟರೆ ಬೇರೆ ನಾಯಕರಿಲ್ಲ ಎಂಬ ಕಲ್ಪನೆಯನ್ನು ತೊಡೆದು ಹಾಕಿದವರು ಪಿ.ವಿ.ನರಸಿಂಹ ರಾವ್ ಮತ್ತು ಮನ ಮೋಹನ್ ಸಿಂಗ್. ಪಿ.ವಿ. ನರಸಿಂಹ ರಾವ್ ರವರು ನೆಹರೂ ವಂಶದವರಲ್ಲದ ಮೊದಲ ಪ್ರಧಾನಿಯಾಗಿ ದೇಶವನ್ನು ಸಮರ್ಥವಾಗಿ ಮುನ್ನಡೆಸಿದರು. ಅವರ ಬಳಿಕ ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿಯವರು ಎರಡು ಬಾರಿ ಪ್ರಧಾನಿಯಾಗಿ ನಮ್ಮ ಸಂವಿಧಾನದ ಜಾತ್ಯಾತೀತ ಮತ್ತು ಸಾಮರಸ್ಯದ ಪರಂಪರೆಗೆ ಬದ್ಧರಾಗಿ ಸಮರ್ಥ ನಾಯಕತ್ವವನ್ನು ನೀಡಿದರು. ಯಾರೂ ಯೋಚಿಸದ ರೀತಿಯಲ್ಲಿ ನಮ್ಮ ರೈತಾಪಿ ಪರಂಪರೆಯಿಂದ ಬಂದ ದೇವೇಗೌಡರು ಪ್ರಧಾನಿಯಾದುದು ಪ್ರಜಾಪ್ರಭುತ್ವದ ಸೋಜಿಗಗಳಲ್ಲಿ ಒಂದಾಗಿದೆ. ಆದರೆ ಈ ಒಂದು ವರ್ಷದ ಆಡಳಿತವೂ ಪ್ರಶಂಸೆಗೆ ಪಾತ್ರವಾಗಿತ್ತು.
ಹೊಸ ಆರ್ಥಿಕ ನೀತಿಯನ್ನು ಜಾರಿಗೆ ತಂದ ಹೆಗ್ಗಳಿಕೆಯ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಅಚಾನಕ್ಕಾಗಿ ನಾಯಕನಾಗಿ ಮೂಡಿ ಬಂದು ಪ್ರಧಾನಿಯಾದರು. ಹಣಕಾಸು ಸಚಿವರಾಗಿ ತನ್ನ ಛಾಪು ಮೂಡಿಸಿದ ಅವರು ಅದುವರೆಗೆ ನೇರ ಚುನಾವಣೆಯನ್ನು ಎದುರಿಸಿ ಪ್ರಧಾನಿಯಾದರು. ಆಗ ಬಿ.ಜೆ.ಪಿ ವಿರೋಧಿಸುತ್ತಿದ್ದ ಆಧಾರ್ ಕಾರ್ಡ್ ಜಿ.ಎಸ್.ಟಿ. ಇತ್ಯಾದಿಗಳು ಸಿಂಗ್ ಅವರ ಪರಿಕಲ್ಪನೆಗಳು. ಭಾರತದ ಆರ್ಥಿಕ ಅಭಿವೃದ್ಧಿಗೆ ಅವರ ಒಳನೋಟಗಳು ಮಹತ್ತರ ಪರಿಣಾಮವನ್ನು ಬೀರಿವೆ. ಆರ್ಥಿಕ ಉದಾರೀಕರಣದ ಕೆಲವು ಮಹತ್ವದ ಸುಧಾರಣೆಗಳಿಗೆ ಅವರ ನಾಯಕತ್ವ ದಾರಿ ಮಾಡಿ ಕೊಟ್ಟಿತು.
ಹೀಗೆ, 75 ವರ್ಷಗಳ ಭಾರತೀಯ ಪ್ರಧಾನ ಪಾತ್ರಗಳ ಇತಿಹಾಸವನ್ನು ಗಮನಿಸಿದರೆ ನಾಯಕತ್ವದ ಸಮಸ್ಯೆ ಎಲ್ಲೂ ಕಾಣಿಸುವುದಿಲ್ಲ. ಸಂದರ್ಭದ ಅಗತ್ಯಕ್ಕೆ ತಕ್ಕಂತೆ ನಾಯಕನು ಉದಯಿಸುತ್ತಾನೆ ಎಂಬ ಮಾತಿಗೆ ಪುಷ್ಠಿ ಕೊಡುವ ರೀತಿಯಲ್ಲಿ ತೆರೆಮರೆಯಲ್ಲಿದ್ದ ಹಲವು ನಾಯಕರು ಪ್ರಧಾನ ಮಂತ್ರಿಗಳಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ ಇತಿಹಾಸವಿದೆ. ಪ್ರಧಾನ ಮಂತ್ರಿ ಏಕಾಂಗಿಯಲ್ಲ. ಸಚಿವ ಸಂಪುಟ, ಸಂಪುಟ ಕಾರ್ಯದರ್ಶಿಗಳು ಮತ್ತು ನಾಗರೀಕ ಸೇವಾ ನೌಕರರ ದೊಡ್ಡ ಪಡೆಯೇ ಇದೆ. ಅವರ ಸಹಾಯ ಪಡೆದು ಉತ್ತಮ ಆಡಳಿತ ನೀಡುವುದು ಸಮರ್ಥ ನಾಯಕನ ಕಾರ್ಯ. ಅದನ್ನು ಹಿಂದಿನ ಪ್ರಧಾನಿಗಳು ಚೆನ್ನಾಗಿ ನಿರ್ವಹಿಸಿದ್ದಾರೆ. ಧರ್ಮ, ಜಾತಿ ಹಣ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ತಮ್ಮ ವ್ಯಕ್ತಿತ್ವವನ್ನು ಬೆಳೆಸಿ ಕೊಳ್ಳುವ ಪ್ರಯತ್ನವನ್ನು ಅವರು ಮಾಡಲಿಲ್ಲ. ಮೋದಿಯವರು ಇದೆಲ್ಲವನ್ನು ಬಳಸಿಕೊಂಡು ನಾಯಕತ್ವದ ಮಿಥ್ಯೆಯನ್ನು ಸೃಷ್ಟಿಸಿ ಅವರನ್ನು ಬಿಟ್ಟರೆ ಬೇರೆ ನಾಯಕರಿಲ್ಲ ಎಂಬ ಭ್ರಮೆಯನ್ನು ಸೃಷ್ಟಿಸಿದ್ದಾರೆ. ಹಾಗಾದರೆ ಮೋದಿ ನಂತರ ಬಿಜೆಪಿಯ ನಾಯಕತ್ವ ಬಿಕ್ಕಟ್ಟನ್ನು ಎದುರಿಸುತ್ತದೆಯೇ ಎಂದು ಪ್ರಶ್ನಿಸ ಬೇಕಾಗುತ್ತದೆ. 160 ಕೋಟಿ ಜನರಲ್ಲಿ ಉತ್ತಮ ನಾಯಕರು ಮೂಡಿ ಬರುತ್ತಾರೆ. ಅದನ್ನು ಕಾಲವೇ ನಿರ್ಧರಿಸುತ್ತದೆ.
ಡಾ. ಗಣನಾಥ ಎಕ್ಕಾರು
ಜಾನಪದ ವಿದ್ವಾಂಸರು
ಇದನ್ನೂ ಓದಿ-ಹೇಗಿದ್ದ ಕರಾವಳಿ ಹೇಗಾಗಿ ಹೋಯಿತು!ಈಗಲಾದರೂ ಎಚ್ಚೆತ್ತುಕೊಳ್ಳಿ