ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಜಯ, ಬಿಜೆಪಿಗೆ ಮುಖಭಂಗ: ಸಚಿವ ದಿನೇಶ ಗುಂಡೂರಾವ್‌

Most read

ಹುಬ್ಬಳ್ಳಿ: ಮೈಸೂರು ನಗರಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ಬಿಜೆಪಿಗೆ ಮುಖಭಂಗವಾಗಿದ್ದು, ಜಾರಿ ನಿರ್ದೇಶನಾಲಯ (ಇಡಿ)ದ ಕಾರ್ಯವೈಖರಿ ಕುರಿತು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು ಆ ಪಕ್ಷದ ಮುಖಂಡರಿಗೆ ನಾಚಿಕೆಯಾಗಬೇಕು ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಟೀಕಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇ.ಡಿ ಯಾವ ರೀತಿ ದುರುಪಯೋಗವಾಗುತ್ತಿದೆ ಎನ್ನುವುದು ಮುಡಾ ಪ್ರಕರಣದಲ್ಲಿ ಸ್ಪಷ್ಟವಾಗಿ ಸಾಬೀತಾಗಿದೆ. ಇಡಿ, ಐಟಿ, ಸಿಬಿಐ ನಂತಹ ಸ್ವಾಯತ್ತ ಸಂಸ್ಥೆಗಳನ್ನು ಬಿಜೆಪಿ ತನ್ನ ಅಂಗಸಂಸ್ಥೆಗಳನ್ನಾಗಿ ಮಾಡಿಕೊಂಡು ಅವುಗಳನ್ನು ದುರ್ಬಲಗೊಳಿಸುತ್ತಿದೆ. ಅವರಿಗೆ ನೈತಿಕತೆ ಎನ್ನುವುದೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಧರ್ಮಸ್ಥಳದಲ್ಲಿ ಅನೇಕ ಶವಗಳನ್ನು ಹೂತು ಹಾಕಲಾಗಿದೆ ಎಂದು ಅನಾಮಧೇಯ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಈ ದೂರುಗಳನ್ನು ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ವಿವಿಧ ಸಂಘ ಸಂಸ್ಥೆಗಳು ಒತ್ತಾಯಿಸಿದ್ದವು. ಆ ನಿಟ್ಟಿನಲ್ಲಿ ಸರ್ಕಾರ ಎಸ್ ಐ ಟಿ ರಚನೆ ಮಾಡಿದೆ. ಶವಗಳನ್ನು ಹೂತು ಹಾಕಿರುವುದು ನಿಜವೋ ಸುಳ್ಳೋ ಎಂದು ಗೊತ್ತಿಲ್ಲ. ಈ ವಿಷಯದಲ್ಲಿ ಗೊಂದಲ ಸೃಷ್ಠಿಯಾಗಿತ್ತು‌. ಸಾರ್ವಜನಿಕರೂ ಗಾಬರಿಗೊಂಡಿದ್ದರು. ಆ ಸಂಶಯಗಳನ್ನು ನಿವಾರಿಸುವ ದೃಷ್ಟಿಯಿಂದ ಸಮರ್ಥ  ಅಧಿಕಾರಿ ನೇತೃತ್ವದಲ್ಲಿ ಎಸ್ ಐ ಟಿ ರಚಿಸಲಾಗಿದೆ. ಇದು ರಾಜಕೀಯ ಪ್ರೇರಿತ ಎಂಬ ಬಿಜೆಪಿ ಮುಖಂಡರ ಹೇಳಿಕೆ ಖಂಡನೀಯ ಎಂದರು.

ತೆರಿಗೆ ಪಾವತಿ ಸಂಬಂಧ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ವ್ಯಾಪಾರಿಗಳಿಗೆ ನೋಟಿಸ್ ನೀಡಿದ್ದಾರೆ. ಈ ವಿಷಯದಲ್ಲಿ  ಬಿಜೆಪಿಯವರು ಮೂಗು ತೂರಿಸುತ್ತಿದ್ದಾರೆ. ಅವರನ್ನು ಏಜೆನ್ಸಿಯಾಗಿ ನೇಮಕ ಮಾಡಲಾಗಿದೆಯೇ, ಬಿಜೆಪಿಯವರಿಗೆ ತಿಳಿವಳಿಕೆ ಕೊರತೆ ಇದೆ ಎಂದು ಹೇಳಿದರು. ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗೆ ವಿಷಪ್ರಾಶನ ಮಾಡಲಾಗಿದೆ ಎಂಬ ಶಾಸಕ ಅರವಿಂದ ಬೆಲ್ಲದ ಅವರ ಆರೋಪಕ್ಕೆ ಉತ್ತರಿಸಿ, ಯಾರು ವಿಷಪ್ರಾಶನ ಮಾಡಿಸಿದ್ದಾರೆ, ಅದರ ಹಿಂದೆ ಯಾರಿದ್ದಾರೆ ಎಂಬ ದಾಖಲೆಯನ್ನು‌ ಬೆಲ್ಲದ ಅವರು ಪೊಲೀಸರಿಗೆ ನೀಡಬೇಕು. ಆಗ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

More articles

Latest article