ಮೈಸೂರು ಶೂಟೌಟ್; ‌ ಉದ್ಯಮಿ ದೋಚಿದ್ದ ಆರೋಪಿ ಕಾಲಿಗೆ ಗುಂಡೇಟು

Most read

ಮೈಸೂರು: ದರೋಡೆ ಪ್ರಕರಣವೊಂದರಲ್ಲಿ ಶಾಮೀಲಾಗಿದ್ದ ಆರೋಪಿಯೊಬ್ಬ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿರುವ ಘಟನೆ ಮೈಸೂರು ಹೊರವಲಯದಲ್ಲಿ ನಡೆದಿದೆ. ಮಹಜರ್ ನಡೆಸುವ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕಾರಣ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿ ನಡೆಸಿದ ದಾಳಿಯಲ್ಲಿ ಸಬ್ ಇನ್ಸ್​​ ಪೆಕ್ಟರ್ ಮತ್ತು ಪೇದೆಯೊಬ್ಬರಿಗೆ ಗಾಯವಾಗಿದೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರ ಗ್ರಾಮದ ಹತ್ತಿರ ಈ ಘಟನೆ ನಡೆದಿದೆ. ಕೇರಳ ಮೂಲದ ಆರೋಪಿ ಆದರ್ಶ್ ​ಗೆ ಗುಂಡೇಟು ಬಿದ್ದಿದೆ. ಘಟನೆಯಲ್ಲಿ ಜಯಪುರ ಠಾಣೆ ಎ ಎಸ್​ಐ ಪ್ರಕಾಶ್ ಹಾಗೂ ಸಿಬ್ಬಂದಿ ಗಾಯಗೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಾರೋಹಳ್ಳಿ ಬಳಿ ಹಾಡ ಹಗಲೇ ಕೇರಳ ಮೂಲದ ಉದ್ಯಮಿಯೊಬ್ಬರನ್ನು ಅಡ್ಡಗಟ್ಟಿ ದರೋಡೆ ನಡೆಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 3 ಆರೋಪಿಗಳನ್ನು ಬಂಧಿಸಲಾಗಿತ್ತು. ಕೆಲವು ದಿನ ಹಿಂದೆ ಮತ್ತೊಬ್ಬ ಆರೋಪಿ ಆದರ್ಶ್ ಸೇರಿ ಇಬ್ಬರನ್ನು ಬಂಧಿಸಲಾಗಿತ್ತು. ದರೋಡೆ ನಡೆದ ಸ್ಥಳದಲ್ಲಿ ಪೊಲೀಸರಿಗೆ ಕ್ವಾಲಿಸ್ ಕಾರು ದೊರೆತಿತ್ತು. ಇದರ ಮಾಲೀಕ ಆದರ್ಶ್ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಎರಡು ದಿನಗಳ ಹಿಂದೆ ಆದರ್ಶ್ ನನ್ನು ಬಂಧಿಸಲಾಗಿತ್ತು. ಮೈಸೂರಿಗೆ ಕರೆ ತಂದ ಪೊಲೀಸರು ಈತನ ಕಾರು ದೊರೆತ ಸ್ಥಳಕ್ಕೆ ಮಹಜರ್‌ ಗಾಗಿ ಕರೆದುಕೊಂಡು ಹೋಗಿದ್ದರು.

ಕಾರು ಪತ್ತೆಯಾದ ಸ್ಥಳವನ್ನು ಆದರ್ಶ್ ಗುರುತಿಸಿದ್ದಾನೆ. ನಂತರ ಮೂತ್ರವಿಸರ್ಜನೆ ನೆಪವೊಡ್ಡಿ ರಸ್ತೆ ಬದಿಯಲ್ಲಿ ನಿಂತಿದ್ದಾನೆ. ಅಲ್ಲಿ ಬಿದ್ದಿದ್ದ  ಬಿಯರ್ ಬಾಟಲಿಯನ್ನು ಒಡೆದು ಸಬ್ ಇನ್ಸ್​ಪೆಕ್ಟರ್ ಪ್ರಕಾಶ್ ಹಾಗೂ ಸಿಬ್ಬಂದಿ ಹರೀಶ್ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಶರಣಾಗುವಂತೆ ಮನವಿ ಮಾಡಿದರೂ ಆತ ಕೇಳಿಲ್ಲ. ನಿರಂತರ ದಾಳಿ ಮುಂದುವರಿಸಿದ್ದಾನೆ. ಈ ವೇಳೆ ಬೈಲುಕುಪ್ಪೆ ಇನ್ಸ್​​ಪೆಕ್ಟರ್ ದೀಪಕ್ ಆತ್ಮರಕ್ಷಣೆಗಾಗಿ ಪಿಸ್ತೂಲ್​ನಿಂದ ಆದರ್ಶ್ ಮೇಲೆ ಗುಂಡು ಹಾರಿಸಿದ್ದಾರೆ. ಆದರ್ಶ್ ಎಡಗಾಲಿಗೆ ಗುಂಡು ತಗುಲಿದೆ. ಗಾಯಗೊಂಡ ಸಬ್ ಇನ್ಸ್​​ಪೆಕ್ಟರ್ ಪ್ರಕಾಶ್ ಹಾಗೂ ಹರೀಶ್ ಅವರನ್ನು ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಆದರ್ಶ್​ ನನ್ನು ಮೇಟಗಳ್ಳಿಯಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

More articles

Latest article