ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಚೇರಿ ಮೇಲೆ ಶುಕ್ರವಾರ ಬೆಳಿಗ್ಗೆ 10.50ರ ವೇಳೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಜಾರಿ ನಿರ್ದೇಶನಾಲಯದ 12 ಮಂದಿ ಅಧಿಕಾರಿಗಳ ತಂಡವು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಕಚೇರಿಯಲ್ಲಿ ಮುಡಾ ಆಯುಕ್ತರು, ಅಧಿಕಾರಿಗಳ ವಿಚಾರಣೆ ನಡೆಸುತ್ತಿದ್ದಾರೆ.
20ಕ್ಕೂ ಹೆಚ್ಚು ಸಿಆರ್ ಪಿಎಫ್ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮುಡಾದಲ್ಲಿ 50:50 ಅನುಪಾತದಡಿ ನಿವೇಶನ ಹಂಚಿಕೆಯಲ್ಲಿ ಬಹುಕೋಟಿ ಹಗರಣ ನಡೆದಿದೆ ಎಂಬ ಆಪಾದನೆ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿತ್ತು.ಇಂದು ಮುಡಾ ಕಚೇರಿ ಮೇಲೆ ದಿಢೀರ್ ದಾಳಿ ನಡೆಸಲಾಗಿದೆ. ಮುಡಾ ಆಯುಕ್ತ ರಘುನಂದನ್ ಅವರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮುಡಾ ಅವ್ಯವಹಾರ ಕುರಿತು ಆರ್ ಟಿ ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇಡಿ ಗೆ ದೂರು ಸಲ್ಲಿಸಿದ್ದರು.
ಇಡಿ ದಾಳಿಯನ್ನು ಕಾಂಗ್ರೆಸ್ ವಿರೋಧಿಸಿದೆ. ಇಡಿ ಇಂದು ಮತ್ತು ನಾಳೆ ಎರಡು ದಿನ ಪರಿಶೀಲನೆ ನಡೆಸಲಿದೆ. ಮೂರು ಬಾರಿ ನೋಟಿಸ್ ನೀಡಿದ್ದರೂ ಮುಡಾ ದಾಖಲೆಗಳನ್ನು ನೀಡಿರಲಿಲ್ಲ. ಹಾಗಾಗಿ ದಾಳಿ ನಡೆಸಿದೆ. ಆದರೆ ಈವರೆಗೂ ಇಡಿ ಅಧಿಕಾರಿಗಳು ಯಾವುದೇ ಮಾಹಿತಿ ಕೇಳಿಲ್ಲ. ಇಡಿ ಅಧಿಕಾರಿಗಳು ಯಾವುದೇ ದಾಖಲೆ ಕೇಳಿದ್ರೂ ಕೊಡ್ತೇವೆ. 2 ದಿನ ಪರಿಶೀಲನೆ ಮಾಡುವುದಾಗಿ ಇಡಿ ಅಧಿಕಾರಿಗಳು ಹೇಳ್ತಿದ್ದಾರೆ. ಮೈಸೂರಿನಲ್ಲಿ ಮುಡಾ ಕಾರ್ಯದರ್ಶಿ ಪ್ರಸನ್ನಕುಮಾರ್ ಹೇಳಿದ್ದಾರೆ. ಇಡಿ ಮೈಸೂರು ತಹಶೀಲ್ದಾರ್ ರಿಂದ ದಾಖಲೆ ಕೇಳಿದೆ. ಈಗಾಗಲೇ ಇಡಿಗೆ ಕೆಲವು ದಾಖಲೆಗಳು ರವಾನೆಯಾಗಿವೆ.