ವಿಶ್ವವಿಖ್ಯಾತ ಮೈಸೂರು ದಸರಾವನ್ನು ಸಾಹಿತಿ ಹಂ.ಪ.ನಾಗರಾಜಯ್ಯ ಉದ್ಘಾಟನೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ದಸರಾ ಉದ್ಘಾಟಕರಾಗಿ ಸಾಹಿತಿ ಹಂ.ಪ.ನಾಗರಾಜಯ್ಯ ಅವರನ್ನು ರಾಜ್ಯ ಸರ್ಕಾರ ನೇಮಿಸಿದ್ದು, ಅಕ್ಟೋಬರ್ 3ರಂದು ಮೈಸೂರಿನಲ್ಲಿ ನಡೆಯುವ ದಸರಾ ಉದ್ಘಾಟನೆಯನ್ನು ಮಾಡಲಿದ್ದಾರೆ.
ಹಿರಿಯ ಸಾಹಿತಿ ಹಾಗೂ ಭಾಷಾ ಸಂಶೋಧಕ, ಸಂಘಟಕ, ಕನ್ನಡ ಸಾಹಿತಿ ಪರಿಷತ್ ಅಧ್ಯಕ್ಷರೂ ಆಗಿದ್ದ ಹಂಪನಾಗರಾಜಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಹಿಂದಿನ ವರ್ಷ ನಿರ್ದೇಶಕ ಹಂಸಲೇಖ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಬಾರಿ ಹಂಪನಾ ಹೆಸರು ಅಂತಿಮಗೊಂಡಿದ್ದು, ಮೈಸೂರಿನಲ್ಲಿ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಈ ಹೆಸರನ್ನು ಪ್ರಕಟಿಸಿದ್ದಾರೆ.
ಹಂಪನಾ ಎಂದೇ ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಹಂಪನಾ ಅವರ ಪೂರ್ಣ ಹೆಸರು ಹಂಪಸಂದ್ರ ಪದ್ಮನಾಭಯ್ಯ ನಾಗರಾಜಯ್ಯ ಜನನ 1936ರ ಅಕ್ಟೋಬರ್ 07. ಈಗಿನ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕು ಹಂಪಸಂದ್ರ ಅವರ ಹುಟ್ಟೂರು. ತಂದೆ ಪದ್ಮನಾಭಯ್ಯ ಮತ್ತು ತಾಯಿ ಪದ್ಮಾವತಮ್ಮ.
ಓದಿದ್ದು ಗೌರಿಬಿದನೂರು, ಮಧುಗಿರಿಯಲ್ಲಿ. ನಂತರ ತುಮಕೂರಿನಲ್ಲಿ ಇಂಟರ್ ಮೀಡಿಯೆಟ್. ಮೈಸೂರು ಮಹಾರಾಜ ಕಾಲೇಜನಲ್ಲಿ ಪದವಿ. ಮೈಸೂರಲ್ಲೇ ಎಂಎ ವ್ಯಾಸಂಗ ಪೂರ್ಣಗೊಳಿಸಿದ್ದಾರೆ.
ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭವಾಗಿದ್ದೂ ಕೂಡ ಮೈಸೂರಿನಲ್ಲಿಯೇ. ಮಹಾರಾಣಿ ಕಾಲೇಜಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.