ನನ್ನ ಬಂಡೆ, ನನ್ನ ಆಸ್ತಿ, ನನ್ನ ಜಮೀನು: ನಿಮ್ಮದೇನು‌ ಸಮಸ್ಯೆ?: ಕುಮಾರಸ್ವಾಮಿಗೆ ಡಿಕೆಶಿ ತಿರುಗೇಟು

Most read

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ನನಗೆ ವೈಯುಕ್ತಿಕವಾಗಿ ಬಹಳ‌ ಗೌರವ ಇದೆ. ಈಗಲೂ‌ ಗೌರವ ಇದೆ, ಮುಂದೆಯೂ ಇರುತ್ತೆ. ಆದರೆ ಬಂಡೆ, ಕಲ್ಲು ,ಚೂರಿ ವಿಷ ಕೊಟ್ರು ಅನ್ನೋದು ಇವೆಲ್ಲಾ ಯಾಕೆ? ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮಂತವರನ್ನ ಕಳೆದುಕೊಳ್ಳೋದು ಕೇವಲ ನನ್ನನ್ನು ಕಳೆದುಕೊಂಡಂತೆ ಅಲ್ಲ, ಇಡೀ ಸಮಯುದಾಯವನ್ನು ಕಳೆದುಕೊಂಡಂತೆ ಎಂದು ಮಾರ್ಮಿಕವಾಗಿ ಚುಚ್ಚಿದರು.

ನನ್ನ ಬಗ್ಗೆ ಅವರು ಏನೇ ಅಂದರೂ ಸಮುದಾಯಕ್ಕಾಗಿ ಗೌರವ ಕೊಟ್ಟಿದ್ದೆ. ಅವರು ಏನು ಅಂದರೂ ತಡೆದುಕೊಂಡಿದ್ದೆ. ಆದರೆ ವೈಯುಕ್ತಿಕ ದಾಳಿ ಮಾಡುತ್ತಿದ್ದಾರೆ. ಹೌದು ನನ್ನ ಬಂಡೆ, ನನ್ನ ಆಸ್ತಿ, ನನ್ನ ಜಮೀನು. ಯಾವುದೋ ಹೆಣ್ಮಕ್ಕಳ ಜಮೀನು ಬರೆಸಿಕೊಂಡೆ ಅಂದ್ರು. ಯಾವ ಹೆಣ್ಮಕ್ಕಳು, ಯಾವ ಜಮೀನು. ನನ್ನ ಜಮೀನಿನಲ್ಲಿ ಇರುವ ಬಂಡೆ ಒಡೆದು ನಾನು ಬದುಕಿಕೊಂಡಿದ್ದೇನೆ. ಕುಮಾರಸ್ವಾಮಿ ನನ್ನ ಸವಾಲು ಸ್ವೀಕಾರ ಮಾಡೋಕೆ ಆಗಲ್ಲ ಅಂದ್ರೆ ಬಿಟ್ಟು ಬಿಡೋಣ. ಚುನಾವಣೆ ಆದ ಮೇಲೆ ಮುಂದೆ ಅಸೆಂಬ್ಲಿಯಲ್ಲಿ ನೋಡೋಣ ಎಂದು ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

ಕುಮಾರಸ್ವಾಮಿಯವರಿಗೆ ಹೆಣ್ಮಕ್ಕಳ ಬಗ್ಗೆ ಮಾತನಾಡೋಕೆ ಹೇಳಿದೋರು ಯಾರು? ಜನರಿಗೆ ಆಗಿರುವ ಮಾನಸಿಕ ನೋವು ತೆಗೆದುಹಾಕಲು ಆಗಲ್ಲ. ಒಂದ್ಸಲ ಮಾತನಾಡಿದ್ಮೇಲೆ ಹೋಯ್ತು. ಇದು ರಾಜ್ಯದ ವಿಚಾರ, ಹೆಣ್ಮಕ್ಕಳ ಸ್ವಾಭಿಮಾನದ ವಿಚಾರ ಎಂದು ಅವರು ನುಡಿದರು.

ಬಿಜೆಪಿ ದಿನೇ ದಿನೇ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಬಿಜೆಪಿಯವ್ರು ಎಲ್ಲದಕ್ಕೆ ಮಾತನಾಡ್ತಾರೆ ಅಲ್ವ. ಒಬ್ರಾದರೂ ಇದರ ಬಗ್ಗೆ ಮಾತನಾಡಿದ್ದಾರ..? ಯಾಕೆ ಯಡಿಯೂರಪ್ಪ, ಅಶೋಕ್, ವಿಜಯೇಂದ್ರ ಯಾರು ಮಾತನಾಡ್ತಿಲ್ಲ. ಇವರೆಲ್ಲ ದೇಶಕ್ಕೆ ಮೊದಲು ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಡಿಕೆಶಿ ಯಾವಾಗ ಒಕ್ಕಲಿಗ ನಾಯಕನಾದ್ರು ಎಂಬ ಆರ್.ಅಶೋಕ್ ಹೇಳಿಕೆಗೆ ಟಾಂಗ್ ಕೊಟ್ಟ ಡಿಕೆಶಿ, ನಾನು ನಾಯಕ ಅಂತ ಹೇಳಿದೋರು ಯಾರು? ನಾನು ನಾಯಕನೇ ಅಲ್ಲ, ಅವರೇ ನಾಯಕರು. ಅವರು ವಿಪಕ್ಷ ನಾಯಕರು, ದೊಡ್ಡ ನಾಯಕರು ಎಂದು ತಿರುಗೇಟು ನೀಡಿದ್ದಾರೆ.

More articles

Latest article