ವಿವಾಹಕ್ಕಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವಕ

Most read

ಬಸ್ತಿ: ಪ್ರೀತಿಸಿದ ಪ್ರಿಯತಮೆಯನ್ನು ವಿವಾಹವಾಗಲು ಉತ್ತರಪ್ರದೇಶದ ಬಸ್ತಿಯ 34 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಸದ್ದಾಂ ಹುಸೇನ್ ಎಂಬ ತಮ್ಮ ಹೆಸರನ್ನು ಶಿವಶಂಕರ್ ಎಂದು ಬದಲಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದೂ ಯುವತಿಯೊಬ್ಬರನ್ನು ಇವರು 10 ವರ್ಷಗಳಿಂದ ಪ್ರೀತಿಸುತ್ತಿದ್ದರು.

ಕಳೆದ ವಾರ ಈ ಯುವತಿಯು ಸದ್ದಾಂ ಮತ್ತು ಆತನ ಕುಟುಂಬದವರ ವಿರುದ್ಧ ಮದುವೆ ನೆಪದಲ್ಲಿ ಅತ್ಯಾಚಾರ, ಗರ್ಭಪಾತ ಮಾಡಿಸಲು ಒತ್ತಾಯಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಈಗ ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಿದ್ದಾರೆ ಎಂದು ಕೊತ್ವಾಲಿ ಪೊಲೀಸ್ ಠಾಣೆಯ ಠಾಣಾಧಿಕಾರಿ ದೇವೇಂದ್ರ ಸಿಂಗ್ ಹೇಳಿದ್ದಾರೆ.

ಸದ್ಧಾಂ ಹುಸೇನ್ ನಗರ್ ಬಜಾರ್ ಹಳ್ಳಿಯ ನಿವಾಸಿ.  ಅದೇ ಹಳ್ಳಿಯಯುವತಿಯೊಬ್ಬರನ್ನು 10 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಬೇರೆ ಬೇರೆ ಧರ್ಮಗಳಿಗೆ ಸೇರಿದವರಾಗಿದ್ದರಿಂದ ಸದ್ದಾಂ ಕುಟುಂಬ ಮದುವೆಗೆ ನಿರಾಕರಿಸಿತ್ತು. ಮೂರು ದಿನಗಳ ಹಿಂದೆ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಅತ್ಯಾಚಾರ, ಗರ್ಭಪಾತಕ್ಕೆ ಒತ್ತಡ ಮತ್ತು ಹತ್ಯೆ ಬೆದರಿಕೆ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ನಡುವೆ, ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಸದ್ಧಾಂ ತನ್ನ ಹೆಸರನ್ನು ಶಿವಶಂಕರ್ ಎಂದು ಬದಲಾಯಿಸಿಕೊಂಡು ದೇವಾಲಯವೊಂದರಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ದೇವಾಲಯವನ್ನು ಪ್ರದಕ್ಷಿಣೆ ಹಾಕಿ ಜೀವನಪರ್ಯಂತ ಜೊತೆಗಿರುವ ಪ್ರತಿಜ್ಞೆ ಮಾಡಿದ್ದಾರೆ.

More articles

Latest article