ಮುಂಬೈ: ಚಲಿಸುತ್ತಿದ್ದ ರೈಲಿನಿಂದ ಬಿದ್ದು 5 ಪ್ರಯಾಣಿಕರು ಸಾವು

Most read

ಮುಂಬೈ: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಕನಿಷ್ಠ ಐವರು ಪ್ರಯಾಣಿಕರು ಮೃತಪಟ್ಟಿರುವ ಘಟನೆ ಇಂದು ಬೆಳಿಗ್ಗೆ ಠಾಣೆ ಜಿಲ್ಲೆಯ ದಿವಾ– ಕೋಪರ್ ರೈಲು ಮಾರ್ಗದ ನಡುವೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಿಗ್ಗೆ 9:30ರ ವೇಳೆಗೆ ಈ ದುರಂತ ಘಟನೆ ಸಂಭವಿಸಿದೆ. ಸಾಮಾನ್ಯವಾಗಿ ಬೆಳಗಿನ ಹೊತ್ತು ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿಪರೀತವಾಗಿರುತ್ತದೆ. ಇಂದೂ ಸಹ ಕಸರಾ ಕಡೆಗೆ ಹೋಗುತ್ತಿದ್ದ ಸ್ಥಳೀಯ ರೈಲಿನ ತುಂಬ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. ಅನೇಕ ಜನರು ರೈಲಿನ ಬಾಗಿಲಲ್ಲೇ ತೂಗಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರೈಲು ಮುಂದಕ್ಕೆ ಸಾಗುತ್ತಿದ್ದಂತೆ 10 ಪ್ರಯಾಣಿಕರು ಕೆಳಗೆ ಬಿದ್ದಿದ್ದಾರೆ. ತಕ್ಷಣ ರೈಲಿನ ಕಾವಲುಗಾರನೊಬ್ಬ ಘಟನೆಯ ಬಗ್ಗೆ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೆಳಗೆ ಬಿದ್ದ ಎಲ್ಲಾ ಪ್ರಯಾಣಿಕರನ್ನು ಕಲ್ವಾದಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಐದು ಮಂದಿ ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ. ಮೃತಪಟ್ಟವರೆಲ್ಲರೂ 30 ರಿಂದ 35 ವರ್ಷ ವಯಸ್ಸಿನವರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

More articles

Latest article