ಮುಂಬೈ: ಮಹಾರಾಷ್ಟ್ರದ ಭಾಷೆ ಮರಾಠಿಯಾಗಿದ್ದು, ಮುಂಬೈ ಸೇರಿದಂತೆ ರಾಜ್ಯದಲ್ಲಿ ವಾಸಿಸುವ ಯಾರೇ ಆದರೂ ಮರಾಠಿಯನ್ನು ಕಲಿಯಬೇಕು ಮತ್ತು ಮಾತನಾಡಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಪ್ರತಿಪಾದಿಸಿದ್ದಾರೆ.
ಮುಂಬೈಗೆ ಬರುವ ವ್ಯಕ್ತಿ ಮರಾಠಿ ಕಲಿಯುವ ಅವಶ್ಯಕತೆ ಇಲ್ಲ ಎಂಬ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಹಿರಿಯ ನಾಯಕ ಸುರೇಶ್ ಭಯ್ಯಾಜಿ ಜೋಶಿ ಅವರ ಹೇಳಿಕೆ ಬಗ್ಗೆ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಶಿವಸೇನಾ (ಯುಬಿಟಿ) ಸದಸ್ಯ ಭಾಸ್ಕರ್ ಜಾಧವ್ ಅವರು ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಫಡಣವೀಸ್ ಉತ್ತರಿಸಿದರು. ಸುರೇಶ್ ಭಯ್ಯಾಜಿ ಏನು ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ, ಮುಂಬೈ ಮತ್ತು ಮಹಾರಾಷ್ಟ್ರದ ಭಾಷೆ ಮರಾಠಿ. ಎಲ್ಲರೂ ಮರಾಠಿ ಕಲಿಯಬೇಕು ಮತ್ತು ಮಾತನಾಡಬೇಕು. ಇತರ ಭಾಷೆಗಳನ್ನೂ ತಮ್ಮ ಸರ್ಕಾರ ಗೌರವಿಸುತ್ತದೆ ಎಂದು ಫಡಣವೀಸ್ ಹೇಳಿದರು.
ಮುಂಬೈ ಒಂದೇ ಭಾಷೆ ಹೊಂದಿಲ್ಲ. ಅದು ಹಲವು ಭಾಷೆಗಳನ್ನು ಹೊಂದಿದೆ. ಕೆಲವು ಪ್ರದೇಶಗಳು ತಮ್ಮದೇ ಸ್ವಂತ ಭಾಷೆಯನ್ನು ಹೊಂದಿವೆ. ಘಾಟ್ಕೊಪರ್ ಭಾಷೆ ಗುಜರಾತಿಯಾಗಿದೆ. ಗಿರ್ಗಾಂವ್ನಲ್ಲಿ ಹಿಂದಿ ಮಾತನಾಡುವವರು ಕಡಿಮೆ ಮತ್ತು ಮರಾಠಿ ಮಾತನಾಡುವವರು ಹೆಚ್ಚು ಜನರಿದ್ದಾರೆ. ಆದ್ದರಿಂದ ಮುಂಬೈಗೆ ಬರುವ ಯಾವುದೇ ವ್ಯಕ್ತಿ ಮರಾಠಿ ಕಲಿಯುವ ಅಗತ್ಯವಿಲ್ಲ ಎಂದು ಸುರೇಶ್ ಭಯ್ಯಾಜಿ ಜೋಶಿ ಹೇಳಿದ್ದರು.
ಜೋಶಿ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವುತ್, ಮರಾಠಿ ನಮ್ಮ ರಾಜ್ಯ ಭಾಷೆ. ಜೋಶಿ ಅವರ ಹೇಳಿಕೆ ದೇಶದ್ರೋಹಕ್ಕೆ ಸಮನಾಗಿದ್ದು, ಮಹಾರಾಷ್ಟ್ರವನ್ನು ಅವಮಾನಿಸುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.