ಬೆಂಗಳೂರು: ಮುಡಾ ಸೈಟು ಹಂಚಿಕೆ ಪ್ರಕರಣ ಕುರಿತಂತೆ ಚರ್ಚೆಗೆ ಕೋರಿ ಬಿಜೆಪಿ ಸಲ್ಲಿಸಿದ ನಿಲುವಳಿ ಸೂಚನೆಯ ಕೋರಿಕೆಯನ್ನು ವಿಧಾನಸಭೆ ಸಭಾಧ್ಯಕ್ಷರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಇಂದಿನಿಂದ ಅಹೋರಾತ್ರಿ ಧರಣಿ ನಡೆಸಲು ಬಿಜೆಪಿ ನಿರ್ಧರಿಸಿದೆ.
ಮುಡಾದಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ಚರ್ಚೆಗೆ ಕೋರಿ ಬಿಜೆಪಿ ನಿಲುವಳಿ ಸೂಚನೆಯ ಕೋರಿಕೆ ನೀಡಿತ್ತು. ನಿಲುವಳಿ ಸೂಚನೆ ತಿರಸ್ಕಾರ ಮಾಡಿದ ಸ್ಪೀಕರ್ ಯು.ಟಿ. ಖಾದರ್, ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಇಲ್ಲ ಎಂದು ರೂಲಿಂಗ್ ನೀಡಿದ್ದರು.
ನಿಲುವಳಿ ತಿರಸ್ಕೃತಗೊಂಡ ಬಳಿಕ ಕಾಂಗ್ರೆಸ್ ಶಾಸಕರು ಶೇಮ್ ಶೇಮ್ ಎಂದು ಬಿಜೆಪಿ-ಜೆಡಿಎಸ್ ವಿರುದ್ಧ ಘೋಷಣೆ ಕೂಗಿದ್ದರು. ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿತ್ತು.
ನಂತರ ವಿಪಕ್ಷ ಸದಸ್ಯರನ್ನು ಸಮಾಧಾನಿಸುವ ಉದ್ದೇಶದಿಂದ ಸ್ಪೀಕರ್ ತಮ್ಮ ಕೊಠಡಿಗೆ ಪ್ರತಿಪಕ್ಷ ನಾಯಕರನ್ನು ಆಹ್ವಾನಿಸಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ರೂಲಿಂಗ್ ಮರುಪರಿಶೀಲಿಸುವಂತೆ ವಿಪಕ್ಷ ನಾಯಕರು ಕೋರಿದರು.
ಪ್ರತಿಭಟನೆ ಮಾಡುವುದು ವಿರೋಧ ಪಕ್ಷಕ್ಕೆ ಬಿಟ್ಟಿದ್ದು. ಏನು ಮಾಡಬೇಕು ಅನ್ನೋದು ಅವರ ವಿವೇಚನೆಗೆ ಬಿಟ್ಟಿದ್ದು. ಆದರೆ ಧರಣಿ ನಡೆಸಿ ಗಲಾಟೆ ಮಾಡುವಂಥ ತಪ್ಪನ್ನೇನು ಸರ್ಕಾರ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಹಠಮಾರಿ ಧೋರಣೆ ತಳೆದಿರುವ ಬಿಜೆಪಿ ಅಹೋರಾತ್ರಿ ಧರಣಿ ನಡೆಸುವುದಾಗಿ ಬೆದರಿಕೆ ಹಾಕಿದೆ.