ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ (ಮುಡಾ)ಯಲ್ಲಿ ಜಾರಿ ನಿರ್ದೇಶನಾಲಯದ ತನಿಖಾ ತಂಡದ ಅಧಿಕಾರಿಗಳು ಶನಿವಾರವೂ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಿಸಿದ ಇಡಿ ತಂಡ ರಾತ್ರಿ ಮುಡಾ ಕಚೇರಿಯಲ್ಲಿ ತಂಗಿದ್ದರು. ಶನಿವಾರ ಮುಂಜಾನೆಯಿಂದಲೇ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ತನಿಖೆ ಆರಂಭಿಸಿದ್ದಾರೆ. ಕಚೇರಿಯ ಎಲ್ಲ ಪ್ರವೇಶ ದ್ವಾರಗಳನ್ನು ಮುಚ್ಚಲಾಗಿದ್ದು ಸಾರ್ವಜನಿಕರಿಗೆ ಇಂದೂ ಪ್ರವೇಶ ನಿರಾಕರಿಸಲಾಗಿದೆ.
ತನಿಖಾ ತಂಡವು 50:50 ನಿವೇಶನ ಹಂಚಿಕೆಗೆ ಸಂಬಂಧಿಸಿದ ಪ್ರತಿ ಮಾಹಿತಿಯನ್ನೂ ಸಂಗ್ರಹಿಸುತ್ತಿದೆ. ಕೆಲವು ಮೂಲ ದಾಖಲೆಗಳು ನಾಪತ್ತೆಯಾಗಿರುವುದು ಕಂಡುಬಂದಿದ್ದು, ಆ ಬಗ್ಗೆ ಅಧಿಕಾರಿಗಳನ್ನು ಇ.ಡಿ.ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮುಡಾದ ಹಿಂದಿನ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್ ಹಾಗೂ ಡಿ.ಬಿ. ನಟೇಶ್
ಅವರನ್ನೂ ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ ಎಂದೂ ಹೇಳಲಾಗುತ್ತಿದೆ.