ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಜಮೀನು ನೀಡುವ ಕುರಿತು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಆರಂಭಗೊಂಡಿದೆ. ಇದರಿಂದ ಶರಾವತಿ ಸಮಸ್ಯೆ ಮಾತ್ರವಲ್ಲದೇ, ರಾಜ್ಯದ ಎಲ್ಲಾ ಭೂ ಹಕ್ಕಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಂಸದ ಬಿ.ವೈ. ರಾಘವೇಂದ್ರ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧವೂ ಅವರು ಆಕ್ರೋಶ ಹೊರಹಾಕಿದ್ದಾರೆ.
ಶಿವಮೊಗ್ಗದ ಆನವಟ್ಟಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಇತ್ತೀಚಿಗೆ ಸಂಸದ ರಾಘವೇಂದ್ರ ಅವರ ಚಲನವಲನ ನೋಡುತ್ತಿದ್ದೇನೆ. ಇಷ್ಟು ದಿನ ಎಲ್ಲಿ ಮಲಗಿದ್ದರೋ ಗೊತ್ತಿಲ್ಲ. ಶರಾವತಿ ಸಂತ್ರಸ್ತರಿಗೆ ಭರವಸೆ ಕೊಟ್ಟ ರೀತಿಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಕೆಲಸ ಮಾಡಿದ್ದರು. ಆದರೆ, ಕಾನೂನು ತೊಡಕು ಉಂಟಾಯಿತು. ಆದರೆ, ಯಡಿಯೂರಪ್ಪ ಮತ್ತು ರಾಘವೇಂದ್ರ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಿಲ್ಲ. ಶರಾವತಿ ಸಂತ್ರಸ್ತರ ಕಷ್ಟ ಕುರಿತು ಒಮ್ಮೆಯೂ ಮಾತನಾಡಲಿಲ್ಲ. ಅವರದ್ದೇ ಸರ್ಕಾರ ಇದ್ದಾಗ ಏನು ಮಾಡಲಿಲ್ಲ. ಸುಳ್ಳು ಹೇಳುತ್ತಾ ಕಾಲ ಕಳೆದರು ಎಂದು ಆಕ್ರೋಶ ಹೊರಹಾಕಿದರು.
ನಮ್ಮ ಸರ್ಕಾರ ಬಂದ ಮೇಲೆ ಶಿವಮೊಗ್ಗದಲ್ಲಿ10 ಸಭೆಗಳನ್ನು ಮಾಡಿದ್ದೇವೆ. ಬೆಂಗಳೂರಿನಲ್ಲಿಯೂ ಸಭೆ ಮಾಡಿ, ನಿರ್ಧಾರ ಕೈಗೊಂಡಿದ್ದೇವೆ. ಸುಪ್ರೀಂಗೆ ಅರ್ಜಿ ಹಾಕಿದ್ದು, ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಆರಂಭಗೊಂಡಿದೆ. ಇದರಿಂದ ಶರಾವತಿ ಸಮಸ್ಯೆ ಮಾತ್ರವಲ್ಲದೇ, ರಾಜ್ಯದ ಎಲ್ಲಾ ಭೂ ಹಕ್ಕಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರು. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ರಾಘವೇಂದ್ರ ಒಮ್ಮೆಯೂ ಚಕಾರ ಎತ್ತಲಿಲ್ಲ. ಆದರೆ ಈಗ ಮಾತನಾಡುತ್ತಿದ್ದಾರೆ. ಕೆಲಸ ಆಗುವ ಸಮಯದಲ್ಲಿ ಹೆಚ್ಚು ಓಡಾಡಿ, ಮುಖ ತೋರಿಸಿ, ಪೋಸ್ ಕೊಡುವುದನ್ನು ಬಿಡಬೇಕು ಎಂದು ತಾಕೀತು ಮಾಡಿದರು.
ಈ ಹಿಂದೆ ಅಡಕೆ ವಿಚಾರದಲ್ಲೂ ರಾಜಕಾರಣ ಮಾಡಿದ್ದರು. ಅಡಿಕೆ ಹಾನಿಕಾರಕ ಅಲ್ಲ ಎಂದು ಇವರಿಗೆ ವರದಿ ನೀಡಲು ಆಗಲಿಲ್ಲ. ಇವರಿಂದ ಅಡಕೆ ಬ್ಯಾನ್ ಮಾಡೋಕೆ ಸಾಧ್ಯ ಇಲ್ಲ, ಅಡಕೆ ಬೆಳೆಗಾರರಿಗೆ ತೊಂದರೆ ಮಾಡದಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ಪತ್ರ ಬರೆಯಲಾಗುವುದು. ಅಡಕೆ ಬಗ್ಗೆ ರಾಘವೇಂದ್ರ ಒಮ್ಮೆ ಕೂಡ ಮಾತನಾಡಲಿಲ್ಲ, ಅಮಿತ್ ಶಾ ಕೂಡಾ ಶಿವಮೊಗ್ಗಕ್ಕೆ ಬಂದು ಭಾಷಣ ಮಾಡಿ ಹೋದ್ರು. ಇವರಿಗೆಲ್ಲಾ ನಾಚಿಕೆಯಾಗಬೇಕು ಎಂದರು.
ಅಮಿತ್ ಶಾ ಅವರು ಅಂಬೇಡ್ಕರ್ ಬೇಡ, ದೇವರು ಜಪ ಮಾಡಿ ಅಂತಾರೆ. ಬಿಜೆಪಿಯವರ ಹಣೆಬರಹ, ಸಿಟಿ ರವಿಯವರ ಹಣೆಬರಹ ಏನೆಂದು ಗೊತ್ತಾಗಿದೆ. ಪದಬಳಕೆ ಮಾಡಿದ ಮೇಲೆ ಕೆಲವೊಮ್ಮೆ ಕ್ಷಮೆ ಕೇಳುತ್ತೇವೆ. ಅವರಿಗೆ ಆ ಪರಿಜ್ಞಾನವೂ ಇಲ್ಲ ಎಂದು ಟೀಕಿಸಿದರು.