ಅವೈಜ್ಞಾನಿಕವಾಗಿ ವಾಹನ ಸವಾರರನ್ನು ತಡೆಯಬಾರದು; ಗೃಹ ಸಚಿವ ಪರಮೇಶ್ವರ್ ಎಚ್ಚರಿಕೆ

Most read

ಬೆಂಗಳೂರು: ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದಾಗಿ ಮೂರು ವರ್ಷದ ಮಗು ಮೃತಪಟ್ಟ ಘಟನೆ ರಾಜ್ಯಾದ್ಯಂತ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ರೀತಿಯಲ್ಲಿ ಈ ಘಟನೆ ಪೊಲೀಸರು ತಲೆ ತಗ್ಗಿಸುವಂತೆ ಮಾಡಿದೆ. ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ ಪೊಲೀಸರು ಅವೈಜ್ಞಾನಿಕವಾಗಿ ಸವಾರರನ್ನು ತಡೆಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಸಂಭವಿಸಿದ ಘಟನೆ ತಲೆತಗ್ಗಿಸುವಂತೆ ಮಾಡಿದೆ. ಈ ಪ್ರಕರಣ ಸಂಬಂಧ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುತ್ತೇವೆ. ಈ ಸಂಬಂಧ ಇಂದು ಪೊಲೀಸ್ ಅಧಿಕಾರಿಗಳ ಸಭೆ ಕರೆಯಲಾಗಿದ್ದು, ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಮಂಡ್ಯದ ದುರಂತ ಘಟನೆಯಲ್ಲಿ ಪೊಲೀಸರು ಮಾನವೀಯತೆ ತೋರಲಿಲ್ಲ ಮತ್ತು ಸಮರ್ಪಕವಾಗಿ ನಡೆದುಕೊಳ್ಳಲಿಲ್ಲ ಎಂದು ಒಪ್ಪಿಕೊಳ್ಳುತ್ತೇನೆ. ಪೊಲೀಸರು ಅವೈಜ್ಞಾನಿಕವಾಗಿ ಸವಾರರನ್ನು ತಡೆಯಬಾರದು. ಪೊಲೀಸರು ಎಲ್ಲೋ ಮೂಲೆಯಲ್ಲಿ ನಿಂತು ದಿಢೀರ್ ಎಂದು ಪ್ರತ್ಯಕ್ಷರಾಗಿ ವಾಹನ ಸವಾರರನ್ನು ತಡೆಯಬಾರದು. ತಪಾಸಣೆ ನಡೆಸಲು ಅದರದ್ದೇ ಆದ ಒಂದು ಪದ್ಧತಿ ಇದೆ. ಅದನ್ನು ಪೊಲೀಸರು ಅನುಸರಿಸಬೇಕು ಎಂದು ಪರಮೇಶ್ವರ್ ಹೇಳಿದರು.

ವೇಗವಾಗಿ ಆಗಮಿಸುವ ವಾಹನ ಸವಾರರನ್ನು ಪೊಲೀಸರು ದಿಢೀರ್‌ ಎಂದು ಎದುರು ನಿಲ್ಲುತ್ತಾರೆ. ಇದರಿಂದ ಸವಾರರು ವಿಚಲಿತರಾಗುತ್ತಾರೆ. ಈ ವಿಚಾರ ಕುರಿತೂ ಇಂದಿನ ಸಭೆಯಲ್ಲಿ ಚರ್ಚೆ ಮಾಡಿ ಸರಿಯಾದ ಸಲಹೆ ಸೂಚನೆ ಕೊಡುವುದಾಗಿ ಅವರು ಹೇಳಿದರು.

ಮಂಡ್ಯದಲ್ಲಿ ನಿನ್ನೆ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ತಪಾಸಣೆ ಮಾಡುವ ವೇಳೆ ಬೈಕ್ ಸವಾರ ಆಯತಪ್ಪಿದ ಕಾರಣ ಮೂರು ವರ್ಷದ ಮಗು ಕೆಳಗೆ ಬಿದ್ದು ಮೃತಪಟ್ಟಿತ್ತು.

More articles

Latest article