ಹೈದರಾಬಾದ್: ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಪಟ್ಟ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತೆಲುಗು ನಟ ಮಹೇಶ್ ಬಾಬು ಅವರನ್ನು ವಿಚಾರಣೆಗೆ ಒಳಪಡಿಸಲು ಜಾರಿ ನಿರ್ದೇಶನಾಲಯ(ED) ಸಮನ್ಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ. ತನಿಖಾಧಿಕಾರಿಗಳ ಎದುರು ಏ.28 ರಂದು ವಿಚಾರಣೆಗೆ ಹಾಜರಾಗುವಂತೆ ಮಹೇಶ್ ಬಾಬುಗೆ ಸೂಚನೆ ನೀಡಲಾಗಿದೆ.
ಹೈದರಾಬಾದ್ ನ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯಾದ ಸಾಯಿ ಸೂರ್ಯ ಡೆವಲಪರ್ಸ್, ಸುರಾನಾ ಗ್ರೂಪ್ ಮತ್ತು ಇತರ ಕೆಲವು ಕಂಪನಿಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಏ.16 ರಂದು ಸಿಕಂದರಾಬಾದ್, ಜುಬಿಲಿ ಹಿಲ್ಸ್ ಮತ್ತು ಬೋವೆನ್ ಪಲ್ಲಿಯಲ್ಲಿ ಶೋಧ ನಡೆಸಿತ್ತು.
ಮಹೇಶ್ ಬಾಬು ಅವರನ್ನು ಆರೋಪಿ ಎಂದು ವಿಚಾರಣೆ ನಡೆಸುತ್ತಿಲ್ಲ, ಅವರು ಹಗರಣದಲ್ಲಿ ಭಾಗಿಯಾಗಿಲ್ಲದೇ ಇರಬಹುದು. ಆದರೆ ವಂಚನೆಯಲ್ಲಿ ಭಾಗಿಯಾಗಿರುವ ಕಂಪನಿಯೊಂದಿಗೆ ಮಾಹಿತಿ ಇಲ್ಲದೆಯೂ ನಂಟು ಹೊಂದಿರಬಹುದು ಎಂಬ ಕಾರಣಕ್ಕೆ ವಿಚಾರಣೆಗೆ ಆಗಮಿಸುವಂತೆ ನೋಟಿಸ್ ನೀಡಲಾಗಿದೆ. ಮಹೇಶ್ ಅವರು ಆ ಕಂಪನಿಯೊಂದಿಗೆ ರೂ. 5.9 ಕೋಟಿ ವ್ಯವಹಾರ ನಡೆಸಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಅವರಿಗೆ ಸಮನ್ಸ್ ನೀಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.