ಸುನಿತಾಗೆ ಮೋದಿ ಪತ್ರ: ಆಕೆಯ ಸಂಬಂಧಿ ಹರೇನ್‌ ಪಾಂಡ್ಯ ಹತ್ಯೆ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌

Most read

ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) 9 ತಿಂಗಳು ಕಳೆದು ಭೂಮಿಗೆ ಮರಳಿರುವ ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ಅವರಿಗೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಬರೆದಿದ್ದಾರೆ. ಈ ಪತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳ ಕಾಂಗ್ರೆಸ್‌ ಘಟಕ, ಸುನಿತಾ ಅವರ ಸಹೋದರ ಸಂಬಂಧಿ, ಗುಜರಾತ್‌ನ ಮಾಜಿ ಗೃಹ ಸಚಿವ ಹರೇನ್‌ ಪಾಂಡ್ಯ ಅವರ ಹತ್ಯೆಗೆ ಸಂಬಂಧಿಸಿದಂತೆ ಮಾಧ್ಯಮ ವರದಿಯೊಂದರ ಆಯ್ದ ಭಾಗವನ್ನು ಹಂಚಿಕೊಳ್ಳುವ ಮೂಲಕ ಬಹುಶಃ ಮೋದಿ ಅವರ ಪತ್ರವನ್ನು ಸುನಿತಾ ಅವರು ಕಸದ ಬುಟ್ಟಿಗೆ ಎಸೆಯಬಹುದು ಎಂದು ವ್ಯಂಗ್ಯವಾಡಿದೆ.

ಪ್ರಧಾನಿ ಮೋದಿ ಅವರು ಸುನಿತಾ ವಿಲಿಯಮ್ಸ್‌ ಅವರಿಗೆ ಪತ್ರ ಬರೆದಿದ್ದಾರೆ. ಅವರು ಅದನ್ನು ಕಸದ ಬುಟ್ಟಿಗೆ ಹಾಕುವ ಸಾಧ್ಯತೆಯಿದೆ. ಏಕೆ ಗೊತ್ತೇ? ಸುನಿತಾ ಅವರು ಹರೇನ್‌ ಪಾಂಡ್ಯ ಅವರ ಸೋದರ ಸಂಬಂಧಿ. ಗುಜರಾತ್‌ನ ಗೃಹ ಸಚಿವರಾಗಿದ್ದ ಹರೇನ್ ಪಾಂಡ್ಯ ಅವರು ಗೋಧ್ರಾ ರೈಲು ಹತ್ಯಾಕಾಂಡದ ಸಂದರ್ಭದಲ್ಲಿ ಮೋದಿ ವಿರುದ್ಧವೇ ನಿಂತಿದ್ದರು. ಗಲಭೆಯಲ್ಲಿ ಮೋದಿ ಪಾತ್ರದ ಬಗ್ಗೆ ನ್ಯಾಯಮೂರ್ತಿ ವಿ.ಆರ್. ಕೃಷ್ಣಯ್ಯರ್ ಅವರಿಗೆ ರಹಸ್ಯವಾಗಿ ಮಾಹಿತಿ ನೀಡಿದ್ದರು. ಇದಾದ ಬಳಿಕ ಪಾಂಡ್ಯ ಅವರ ಹತ್ಯೆಯಾಗಿತ್ತು  ಎಂದು ಹೇಳಿದೆ.

ಪಾಂಡ್ಯ ಅವರ ಹತ್ಯೆಯ ನಂತರ ಇಲ್ಲಿ ಹಲವು ಸರಣಿ ಹತ್ಯೆಗಳು ನಡೆದವು. ನ್ಯಾಯಮೂರ್ತಿ ಲೋಯಾ ಅವರ ಹತ್ಯೆಯ ನಂತರ ಈ ಹತ್ಯೆಗಳು ನಿಂತವು. ಆಗೆಲ್ಲ ಸುನಿತಾ ವಿಲಿಯಮ್ಸ್‌ ಅವರನ್ನು ನಿರ್ಲಕ್ಷಿಸುತ್ತಿದ್ದ ಮೋದಿ, ಇದೀಗ ಅವರ ಬಗ್ಗೆ ಕಾಳಜಿ ಹೊಂದಿರುವುದಾಗಿ ತೋರಿಸಿ ಕೊಳ್ಳುತ್ತಿದ್ದಾರೆ ಎಂದು ತನ್ನ ಪೋಸ್ಟ್‌ನಲ್ಲಿ ಬರೆದುಕೊಂಡಿದೆ. ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಸರ್ಕಾರದಲ್ಲಿ ಗೃಹಸಚಿವರಾಗಿದ್ದ ಹರೇನ್ ಪಾಂಡ್ಯ ಅವರನ್ನು ಅಹಮದಾಬಾದ್‌ನ ಲಾ ಗಾರ್ಡನ್ ಪ್ರದೇಶದಲ್ಲಿ 2003ರ ಮಾರ್ಚ್‌ 26ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

More articles

Latest article