ಹೊಸ ಭರವಸೆಗಳೊಂದಿಗೆ ಬಜೆಪಿ ಪ್ರಣಾಳಿಕೆಯನ್ನು ದೇಶದ ಜನತೆಯ ಮುಂದಿಟ್ಟ ಪ್ರಧಾನಿ ಮೋದಿ

Most read

ನವದೆಹಲಿ : ಹೊಸವರ್ಷ ಆಚರಿಸುತ್ತಿರುವ ತಮಿಳುನಾಡಿನ ಜನತೆಗೆ ಹೊಸ ವರುಷದ ಶುಭಾಶಯಗಳನ್ನು ತಿಳಿಸುತ್ತಾ, ದೆಹಲಿಯ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಲೋಕಸಭಾ ಚುನಾವಣೆ-2024 ರ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, “ದೇಶದ ಜನತೆಗೆ ಘನತೆ ಮತ್ತು ಗುಣಮಟ್ಟದ ಜೀವನ” ನೀಡುವುದು ತಮ್ಮ ಸರ್ಕಾರದ ಸಂಕಲ್ಪ ಎಂದು ಪ್ರತಿಪಾದಿಸಿದ್ದಾರೆ.

ತಮ್ಮ ಪಕ್ಷದ ಹಲವು ನಾಯಕರ ನಡೆ, ನುಡಿಯಿಂದ “ಬಿಜೆಪಿ ಸಂವಿಧಾನ ವಿರೋಧಿ” ಎನ್ನುವ ಟೀಕೆಯಿಂದ ಹೊರಬರಲು ಪ್ರಧಾನಿ ಮೋದಿ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. “ಸ್ವತಃ ಅಂಬೇಡ್ಕರ್ ಅವರೇ ಬಂದರೂ ಸಂವಿಧಾನ ಬದಲಿಸಲು ಸಾಧ್ಯವಿಲ್ಲ” ಎಂದು ಇತ್ತೀಚಿನ ತಮ್ಮ ಭಾಷಣದಲ್ಲಿ ಪ್ರಧಾನಿಗಳು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿರುವ ಪ್ರಧಾನಿಗಳು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ದಿನದಂದೇ 2024ರ ಲೋಕಸಭಾ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ.

ಪಕ್ಷದ ಪ್ರಣಾಳಿಕೆಯನ್ನು ಸಂಕಲ್ಪ ಪತ್ರ ಎಂದು ಪ್ರತಿಪಾದಿಸಿರುವ ಮೋದಿಯವರು, ನಾರಿ, ಯುವ, ರೈತ, ಬಡವರು ಈ ಸಂಕಲ್ಪ ಪತ್ರದ ನಾಲ್ಕು ಆಧಾರ ಸ್ಥಂಬಗಳು ಎಂದು ಬಣ್ಣಿಸಿದ್ದಾರೆ. ಕಳೆದ ಹತ್ತು ವರ್ಷಗಳ ಆಡಳಿತ ಕಾಲದಲ್ಲಿ ದೇಶದ 50 ಕೋಟಿ ಜನರನ್ನು ಬಡತನದಿಂದ ಹೊರ ತಂದಿದ್ದೇವೆ. ದೇಶದ ಶೇ.80 ರಷ್ಟು ಜನ ಜನೌಷಧಿಯಲ್ಲಿ ಔಷಧಿ ಖರೀದಿಸುತ್ತಿದ್ದಾರೆ ಎಂದರು.

ದೇಶದ ಜನತೆ ಮುಂದಿನ ಐದು ವರ್ಷಗಳ ಅವಧಿಯ ಆಡಳಿತವನ್ನು ಮತ್ತೆ ನೀಡಿದರೆ ಸುಭದ್ರ ಸರಕಾರದ ಭರವಸೆಯನ್ನು ನೀಡಿದರು. ಮುಂದಿನ ಐದು ವರ್ಷ ಬಡವರಿಗೆ ಉಚಿತ ದಿನಸಿ ಪೂರೈಕೆ, ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ, ಪ್ರತಿ ಮನೆಗೆ ಶುದ್ಧ ನೀರು ಯೋಜನೆ, ವಸತಿ ರಹಿತರಿಗೆ ಸೂರು ನೀಡುವ ಯೋಜನೆ, ಯುವಕರ ಆಶೋತ್ತರಗಳ ಈಡೇರಿಸುವ ಯೋಜನೆ, ಉಚಿತ ವಿದ್ಯುತ್ ನೀಡುವ ಪಿಎಂ ಸೂರ್ಯ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವ ಗುರಿಯನ್ನು ಪ್ರಣಾಳಿಕೆಯಲ್ಲಿ ಹೊಂದಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಂಕಲ್ಪ
ಬಹುತ್ವ ಭಾರತಕ್ಕೆ ತೊಡಕುಂಟು ಮಾಡಲಿದೆ ಎಂದು ದೇಶಾದ್ಯಂತ ಟೀಕೆಗೆ ಗುರಿಯಾಗಿದ್ದರೂ ಈ ಬಾರಿಯ ಪ್ರಣಾಳಿಕೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಪ್ರಸ್ತಾವನೆ ಇದೆ. ಈ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿಯವರು, “ಒಂದು ದೇಶ, ಒಂದು ಚುನಾವಣೆ” ಎನ್ನುವ ವಿಚಾರದ ಸಾಕಾರಗೊಳಿಸುವತ್ತ ಮುಂದುವರಿಯಲಿದ್ದೇವೆ. ಇದರ ಜೊತೆಗೆ “ಏಕರೂಪ ನಾಗರಿಕ ಸಂಹಿತೆ”ಯನ್ನೂ ಸಹ ದೇಶದ ಹಿತಕ್ಕಾಗಿ ಅಷ್ಟೇ ಅವಶ್ಯವಾಗಿ ಜಾರಿಗೊಳಿಸಲು ಬದ್ಧವಾಗಿದೆ ಎಂದು ತಮ್ಮ ಪ್ರಣಾಳಿಕೆಯ ಪ್ರಮುಖ ಅಂಶವನ್ನು ಜನರ ಮುಂದಿಟ್ಟಿದ್ದಾರೆ.

ಪ್ರಣಾಳಿಕೆಯಲ್ಲಿ ಹೊಸ ಭರವಸೆಗಳು
ರೈತರಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡುವುದಾಗಿ ಪ್ರಣಾಳಿಕೆಯ ಅಂಶಗಳನ್ನು ಹೇಳಿದ ಪ್ರಧಾನಿ ಮೋದಿಯವರು ಮಾತಿನಲ್ಲಿ ದೇಶಾದ್ಯಂದ ಭುಗಿಲೆದ್ದಿರುವ ರೈತರ ಪ್ರತಿರೋಧವನ್ನು ಶಮನ ಮಾಡುವ ಉದ್ದೇಶ ಹೊಂದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದಲ್ಲದೇ ಈಶಾನ್ಯ, ದಕ್ಷಿಣ ರಾಜ್ಯಗಳಿಗೆ ಬುಲೆಟ್ ರೈಲು, ದೇಶದಾದ್ಯಂತ ಏರ್ ಪೋರ್ಟ್ ರೈಲ್ವೇ ನಿಲ್ದಾಣಗಳ ನಿರ್ಮಾಣ, 70 ವರ್ಷ ಮೇಲ್ಪಟ್ಟವರಿಗೆ ಉಚಿತ ಆರೋಗ್ಯ ಯೋಜನೆ, ಜಾಗತಿಕ ಉತ್ಪಾದನಾ ಕೇಂದ್ರ, 3 ಕೋಟಿ ಬಡವರಿಗೆ ಉಚಿತ ಮನೆ ನಿರ್ಮಾಣ, 80 ಕೋಟಿ ಜನರಿಗೆ ಇನ್ನೂ 5 ವರ್ಷ ಪಡಿತರ ವಿತರಣೆ ವಿಸ್ತರಣೆ. ಮುದ್ರಾ ಯೋಜನೆ ಮೂಲಕ ಕೊಡಲಾಗುತ್ತಿದ್ದ 10 ಲಕ್ಷ ರೂ.ವರೆಗಿನ ಸಾಲವನ್ನು 20 ಲಕ್ಷಕ್ಕೆ ಏರಿಕೆ ಮಾಡಲು ಯೋಚಿಸಿದ್ದೇವೆ ಎಂದು ಪ್ರಧಾನಿಗಳು ತಿಳಿಸಿದ್ದಾರೆ.

ಬಡವರ ಮನೆಗಳಿಗೆ ಉಚಿತ ವಿದ್ಯುತ್ ನೀಡುವ ಪಿಎಂ ಸೂರ್ಯ ಯೋಜನೆಯನ್ನು ಇನ್ನಷ್ಟು ಬಲಗೊಳಿಸುತ್ತೇವೆ. ಮುದ್ರಾ ಸಾಲದ ಮಿತಿಯನ್ನು 20 ಲಕ್ಷಕ್ಕೆ ಏರಿಸುವ ಮೂಲಕ ಇನ್ನಷ್ಟು ಉದ್ಯೋಗ ಸೃಷ್ಟಿಗೆ ಸಹಾಯವಾಗಲಿದೆ. ಬಡವರ ಮನೆಗೆ ಕಡಿಮೆ ದರದಲ್ಲಿ ಗ್ಯಾಸ್ ಸಿಲಿಂಡರ್, ಯುವ ಜನತೆಗಾಗಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿ, ಸೌರ ವಿದ್ಯುತ್ ಉತ್ಪಾದನೆಗೆ ಪ್ರೋತ್ಸಾಹ, ಈ ಯೋಜನೆಗೆ ಸರಕಾರದಿಂದ ಸಬ್ಸಿಡಿ ನೀಡುವ ಭರವಸೆ, ಬೀದಿಬದಿ ವ್ಯಾಪಾರಿಗಳಿಗೆ ಸುಲಭ ಸಾಲದ ವ್ಯವಸ್ಥೆ, ಐಟಿ, ಪ್ರವಾಸೋದ್ಯಮ, ಸೇವಾ ಕ್ಷೇತ್ರದಲ್ಲಿ ತರಬೇತಿ, ಲಕ್ಪತಿ ದೀದಿ ಯೋಜನೆಯನ್ನು ಒಂದು ಕೋಟಿಯಿಂದ ಮೂರು ಕೋಟಿಗೆ ಏರಿಸಲಾಗಿದೆ ಎಂದಿದ್ದಾರೆ.

ನಾರಿಯನ ಸ್ವಾವಲಂಬನೆಗೆ ಮಹಿಳಾ ಡ್ರೋನ್ ಪೈಲಟ್, ಕ್ರೀಡಾರಂಗದಲ್ಲಿ ವಿಶೇಷವಾಗಿ ಹೊಸ ಮಿಷನ್, ಸವ್ರೈವಲ್ ಕ್ಯಾನ್ಸರ್ ವಿಶೇಷ ಯೋಜನೆ. ರೈತರ ವರ್ಗವನ್ನು ಉತ್ತೇಜಿಸಲು ಕಿಸಾನ್ ಕ್ರೆಡಿಟ್ ಕಾರ್ಡ್, ತೃತೀಯ ಲಿಂಗಿಗಳಿಗೂ ಆಯುಷ್ಮಾನ್ ಭಾರತ್ ಯೋಜನೆ, ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಸೃಷ್ಟಿಯ ಭರವಸೆ. ವಿಶೇಷ ಮೀನು ಸಾಕಾಣಿಕೆ ಮತ್ತು ಮುತ್ತಿನ ಕೃಷಿಗೆ ಸಹಕಾರ, ನ್ಯಾನೋ ಯೂರಿಯಾಗೆ ಮತ್ತಷ್ಟು ಒತ್ತು ನೀಡಲಿದ್ದೇವೆ ಎಂದು ಮೋದಿ ತಮ್ಮ ಪ್ರಣಾಳಿಕೆಯನ್ನು ತೆರೆದಿಟ್ಟಿದ್ದಾರೆ.

ಸಂತ ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರಗಳ ನಿರ್ಮಾಣ, ವಿಶ್ವದ ಪ್ರವಾಸೋದ್ಯಮದ ಜೊತೆ ಪಾರಂಪರಿಕ ಸ್ಥಳಗಳ ಜೋಡಣೆ, ಹೈವೇಯಲ್ಲಿ ಲಾರಿ ಡ್ರೈವರ್ ಗಳಿಗೆ ವಿಶ್ರಾಂತಿ ಪಡೆಯಲು ಸೌಲಭ್ಯ, ಅಹಮದಾಬಾದ್ ಮುಂಬೈ ನಡುವೆ ವಂದೇ ಭಾರತ್ ರೈಲು ವಿಸ್ತರಣೆ, ದೇಶಾದ್ಯಂತ ಬುಲೆಟ್ ಟ್ರೈನ್ ಸಂಚಾರ, ಸ್ಲೀಪರ್, ಚೇರ್ ಕಾರ್ ಮೆಟ್ರೋ, ಗ್ರೀನ್ ಎನರ್ಜಿ ಸೇರಿದಂತೆ ಹತ್ತು ಹಲವು ಜನಾಕರ್ಷಕ ಸೌಲಭ್ಯಗಳನ್ನು ಮೋದಿ ತಮ್ಮ ಗ್ಯಾರಂಟಿ ಎಂದು ಹೇಳಿಕೊಂಡಿದ್ದಾರೆ.

More articles

Latest article