ಬೆಂಗಳೂರು: ಕಳೆದ ಹತ್ತುವ ವರ್ಷದ ಎಡಿಎ ಆಡಳಿತದಲ್ಲಿ ಭಾರತವು ಮುಂದುವರಿದ ಆರ್ಥಿಕತೆಯ ಟಾಪ್ 5 ದೇಶಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಆಯೋಜಿಸಿದ್ದ ಲೋಕಸಭಾ ಚುನಾವಣೆ-2024ರ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನಾನು ಬಡ ಕುಟುಂಬದಿಂದ ಬಂದಿದ್ದೇನೆ. ಸಾಮಾನ್ಯರ ಜೀವನ ಹೇಗಿರುತ್ತದೆ ಎಂದು ನನಗೆ ಅರಿವಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶಾದ್ಯಂತ ಒಂದು ಕೋಟಿ ಮನೆ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ 84 ಸಾವಿರ ಮನೆಗಳು ನಿರ್ಮಾಣವಾಗಿ ಮಧ್ಯಮ ವರ್ಗದ ಮನೆಯ ಕನಸು ನನಸಾಗಿದೆ.
ಎನ್ ಡಿಎ ಸರ್ಕಾರ ಬಂದ ಬಳಿಕ ರೇರಾ ಆಕ್ಟ್ ಜಾರಿಗೊಳಿಸಿ ಸಾಮಾನ್ಯರಿಗೆ ಆಗುತ್ತಿದ್ದ ಅನ್ಯಾಯ ತಡೆದಿದ್ದೇವೆ. ಪರೋಕ್ಷ ಇದೀಗ ಜಿಎಸ್ ಟಿ ಬಂದ ಬಳಿಕ ಸಾಮಾನ್ಯ ಜನರ ಮೇಲಿದ್ದ ತೆರಿಗೆ ಹೊರೆ ಕಡಿಮೆಯಾಗಿದೆ. ಎಲ್ ಇಡಿ ಬಲ್ಬ್ ನಿಂದ ವಿದ್ಯುತ್ ಉಳಿತಾಯವಾಗುತ್ತಿದೆ. 400 ರೂ. ಇದ್ದ ಎಲ್ ಇಡಿ ಬಲ್ಬ್ ಬೆಲೆ 40 ರೂ. ಗೆ ಇಳಿಸಿದ್ದೇವೆ ಎಂದರು.
ನಮ್ಮ ಮೆಟ್ರೋ 17 ಕಿ.ಮೀಟರ್ ನಿಂದ 72 ಕಿ.ಮೀಟರ್ ವರೆಗೆ ವಿಸ್ತರಣೆಯಾಗಿದೆ. ಶೀಘ್ರದಲ್ಲೇ ಎಲ್ಲೋ ಮೆಟ್ರೋ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ಬೆಂಗಳೂರಿಗರಿಗೆ ಸಬ್ ಅರ್ಬನ್ ರೈಲು ಕೂಡ ಸಿಗಲಿದೆ. ಕರ್ನಾಟಕಕ್ಕೆ ಶೀಘ್ರದಲ್ಲೇ ಬುಲೆಟ್ ಟ್ರೈನ್ ಸಿಗಲಿದೆ ಎಂದು ಬೆಂಗಳೂರಿಗರನ್ನು ಆಕರ್ಷಿಸಲು ಭರವಸೆಗಳ ಸುರಿಮಳೆ ಸುರಿದರು.
ನಮ್ಮ ಸರ್ಕಾರ ವೈಮಾನಿಕ ಕ್ಷೇತ್ರಕ್ಕೆ ಆದ್ಯತೆ ನೀಡಿ ಖಾಸಗಿ ಉಪಗ್ರಹ ಉಡಾವಣೆಗೆ ಉತ್ತೇಜನ ನೀಡಿದೆ. ಮೊಬೈಲ್ ರಫ್ತಿನಲ್ಲಿ ಭಾರತದ ಹೊಸ ದಾಖಲೆ ಬರೆದಿದೆ. ರಕ್ಷಣಾ ಉಪಕರಣಗಳು ಸೇರಿ ಹಲವು ವಸ್ತುಗಳು ಭಾರತದಿಂದ ರಫ್ತಾಗುತ್ತಿವೆ.
ಕಾಂಗ್ರೆಸ್ ವಿರುದ್ಧ ಕಿಡಿ
ಆಧಾರ್ ಕಾರ್ಡ್, ಜನಧನ್, ಡಿಜಿಟಲ್ ಇಂಡಿಯಾ ವಿರೋಧಿಸಿದ್ದು ಕಾಂಗ್ರೆಸ್. ಕೊರೊನಾ ಕಾಲದಲ್ಲಿ ಕೋವಿಡ್ ಪ್ಲಾಟ್ ಫಾರ್ಮ್ ವಿರೋಧಿಸಿದ್ದು ಕಾಂಗ್ರೆಸ್. ಕಾಂಗ್ರೆಸ್ ಪಕ್ಷ ಅಭಿವೃದ್ದಿ ವಿರೋಧಿ ಧೋರಣೆ ಹೊಂದಿದೆ. ಕಾಂಗ್ರೆಸ್ ಯುವ ವಿರೋಧಿ, ಖಾಸಗೀಕರಣದ ವಿರೋಧಿಯಾಗಿದ್ದು ಎಂದಿಗೂ ಇದೇ ಮನಸ್ಥಿತಿಯಲ್ಲಿ ಇರುತ್ತದೆ ಎಂದು ಟೀಕಿಸಿದ್ದಾರೆ.
ಹುಬ್ಬಳ್ಳಿ ಯುವತಿ ಕೊಲೆ ಘಟನೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿರುವ ಮೋದಿ, ಇಲ್ಲಿ ನಮ್ಮ ಹೆಣ್ಣುಮಕ್ಕಳ ಮೇಲೆ ಹಲ್ಲೆಯಾಗುತ್ತಿದೆ. ಬೀದಿಗಳಲ್ಲಿ ಬಾಂಬ್ ಗಳು ಸ್ಪೋಟಗೊಳ್ಳತ್ತಿದೆ. ಭಜನೆ ಮಾಡಿದವರ ಮೇಲೆ ಹಲ್ಲೆ ಮಾಡಲಾಗ್ತಿದೆ. ಕಾಂಗ್ರೆಸ್ ನ ಇಂತಹ ಮನಸ್ಥಿತಿ ಬಹಳ ಅಪಾಯಕಾರಿ. ಇದರಿಂದ ಅಲರ್ಟ ಆಗಿರಿ ಎಂದಿದ್ದಾರೆ.