ಮೋದಿಯವರೇ, ನಾಲಿಗೆ ಬಿಗಿಹಿಡಿದು ಮಾತನಾಡಿ

Most read

ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜಸ್ತಾನದ ಬನ್ಸ್ವಾರಾದಲ್ಲಿ ನಿನ್ನೆ ಮುಸ್ಲಿಮರ ವಿರುದ್ಧ ದ್ವೇಷದ ವಿಷ ಕಾರುವ ಭಾಷಣವನ್ನು ಮಾಡಿದ್ದಾರೆ. ಅವರ ಭಾಷಣವನ್ನು ಗಮನಿಸಿದಾಗ ಅವರ ಮುಖಚರ್ಯೆಯಲ್ಲಿ ಕಂಡಿದ್ದು 2002ರಲ್ಲಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯ ಪ್ರತಿಬಿಂಬ. ಆಗ ಸ್ವತಃ ಅವರ ಪಕ್ಷದ ಅತ್ಯುನ್ನತ ನಾಯಕರಾಗಿದ್ದ ಅಟಲ್‌ ಬಿಹಾರ್‌ ವಾಜಪೇಯಿ ʻನೀವು ರಾಜಧರ್ಮವನ್ನು ಮೀರಿದ್ದೀರಿʼ ಎಂದು ಟೀಕಿಸಿದ್ದರು. ಮೋದಿ ಈಗ ಹತ್ತು ವರ್ಷಗಳಿಂದ ಬಹುದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಪ್ರಧಾನ ಮಂತ್ರಿ. ಸಂವಿಧಾನದ ಕಾವಲುಗಾರನ ಹುದ್ದೆಯಲ್ಲಿ ಅವರಿದ್ದಾರೆ. ಆದರೆ ಅದನ್ನೆಲ್ಲ ಮರೆತು, ಚುನಾವಣೆ ಗೆಲ್ಲುವ ಏಕೈಕ ಉದ್ದೇಶದಿಂದ ದೇಶ ಒಡೆಯುವ ವಿಚ್ಛಿಧ್ರಕಾರಿ ಹೇಳಿಕೆ ನೀಡಿದ್ದಾರೆ. ಕಂಡಕಂಡವರನ್ನೆಲ್ಲ ʻತುಕುಡೆ ತುಕುಡೆ ಗ್ಯಾಂಗ್‌ʼ ಎಂದು ಕರೆಯುವ ಅವರು ಈಗ ತಾವೇ ಅದೇ ಗ್ಯಾಂಗಿನ ನಾಯಕರಂತೆ ಕಾಣಿಸುತ್ತಿದ್ದಾರೆ. ದೇಶಕ್ಕೆ ಇದರಿಂದ ಒಳ್ಳೆಯದಾಗದು.

ದೇಶದ ಇಪ್ಪತ್ತು ಕೋಟಿ ಮುಸ್ಲಿಮರನ್ನು ಮೋದಿ ಅತ್ಯಂತ ಕೀಳುಮಟ್ಟದಿಂದ ʻನುಸುಳುಕೋರರುʼ ಎಂದು ನಿಂದಿಸಿದ್ದಾರೆ. ಹೆಚ್ಚು ಮಕ್ಕಳನ್ನು ಹೆರುವವರು ಎಂದು ಹಣೆಪಟ್ಟಿ ಹಚ್ಚಿದ್ದಾರೆ. ನರೇಂದ್ರ ಮೋದಿ ಇಷ್ಟು ಹತಾಶರಾಗಲು ಏನು ಕಾರಣ? ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನ ನಡೆದ ಬಳಿಕ ಅವರ ನಡೆ ನುಡಿಯಲ್ಲಿ ಸಾಕಷ್ಟು ಬದಲಾವಣೆ ಕಾಣಿಸುತ್ತಿದೆ. ಆತ್ಮವಿಶ್ವಾಸದ ಜಾಗದಲ್ಲಿ ಹತಾಶೆ ಆವರಿಸಿಕೊಂಡಿದೆ. ಆ ಹತಾಶೆಯೇ ಅವರನ್ನು ಹೀಗೆ ಮಾತಾಡಿಸುತ್ತಿದೆಯೇ?

ರಾಜಸ್ತಾನದ ಬನ್ಸ್ವಾರಾದಲ್ಲಿ ನರೇಂದ್ರ ಮೋದಿ ಆಡಿದ ಮಾತುಗಳು ಹೀಗಿದ್ದವು ನೋಡಿ.

ʻʻ ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ ಈ ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಇರುವುದು ಮುಸ್ಲಿಮರಿಗೆ ಮಾತ್ರ ಎಂದು ಹೇಳಿತ್ತು. ಇದರ ಅರ್ಥ ಹೆಚ್ಚು ಮಕ್ಕಳನ್ನು ಯಾರು ಹೊಂದಿರುತ್ತಾರೋ ಅವರಿಗೆ ಈ ದೇಶದ ಸಂಪತ್ತನ್ನು ಹಂಚುವುದು ಅವರ ಉದ್ದೇಶ. ನೀವು ಕಷ್ಟಪಟ್ಟು ದುಡಿದ ಹಣವನ್ನು ಈ ನುಸುಳುಕೋರರಿಗೆ (ಮುಸ್ಲಿಮರಿಗೆ) ಹಂಚಬೇಕೆ? ಇದಕ್ಕೆ ನಿಮ್ಮ ಸಮ್ಮತಿ ಇದೆಯೇ? ಇದನ್ನು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೇ ಹೇಳಲಾಗಿದೆ. ದೇಶದ ವೈಯಕ್ತಿಕ ಆಸ್ತಿಗಳನ್ನು ಕಿತ್ತುಕೊಂಡು ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಹಂಚಲಿದೆ. ಇದು ನಗರ ನಕ್ಸಲರ ( Urban Naxal) ಯೋಜನೆಯಾಗಿದೆ. ಇದರಿಂದ ನಿಮ್ಮ ಹೆಣ್ಣುಮಕ್ಕಳ ಮಾಂಗಲ್ಯ ಕೂಡ ಉಳಿಯುವುದಿಲ್ಲʼʼ

ಪ್ರಧಾನಿ ಮೋದಿಯ ಮಾತುಗಳಲ್ಲಿ ದ್ವೇಷದ ಜೊತೆಗೆ ಸುಳ್ಳುಗಳು ಸೇರಿಕೊಂಡಿವೆ. ಮೊದಲನೆಯದಾಗಿ ಅವರು ʻʻದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಇರುವುದು ಮುಸ್ಲಿಮರಿಗೆ ಮಾತ್ರ ಎಂದು ಈ ಹಿಂದಿನ ಕಾಂಗ್ರೆಸ್‌ ಸರ್ಕಾರ ಹೇಳಿತ್ತುʼʼ ಎಂದು ಹೇಳಿದ್ದಾರೆ. ಈ ಮಾತುಗಳು ಎಲ್ಲಿಂದ ಬಂದವು? ಬಿಜೆಪಿ ಐಟಿ ಸೆಲ್‌ ನಿನ್ನೆ ರಾತ್ರಿಯಿಂದಲೇ ಇದಕ್ಕೆ ಪೂರಕವಾಗಿ ಮಾಜಿ ಪ್ರಧಾನ ಮಂತ್ರಿ ಡಾ.ಮನಮೋಹನ್‌ ಸಿಂಗ್‌ ಅವರ ಭಾಷಣದ ತುಣಕೊಂದನ್ನು ಸಮರ್ಥನೆಯಾಗಿ ಹರಿಬಿಟ್ಟಿದೆ.

ಆ ಭಾಷಣದಲ್ಲಿ ಡಾ. ಮನಮೋಹನ್‌ ಸಿಂಗ್‌ ಏನು ಹೇಳಿದ್ದರು? ಒಮ್ಮೆ ಗಮನಿಸೋಣ.

“ನಮ್ಮ ಸಾಮೂಹಿಕ ಆದ್ಯತೆಗಳು ಸ್ಪಷ್ಟವಾಗಿವೆ. ಕೃಷಿ, ನೀರಾವರಿ ಮತ್ತು ಜಲಸಂಪನ್ಮೂಲ, ಆರೋಗ್ಯ, ಶಿಕ್ಷಣ, ಗ್ರಾಮೀಣ ಮೂಲಸೌಕರ್ಯದಲ್ಲಿ ನಿರ್ಣಾಯಕ ಹೂಡಿಕೆ, ಮತ್ತು ಸಾಮಾನ್ಯ ಮೂಲಸೌಕರ್ಯಗಳಿಗೆ ಸಂಬಂಧಿಸಿದ ಸಾರ್ವಜನಿಕ ಹೂಡಿಕೆ, ಜೊತೆಗೆ SC/ST ಗಳು, ಇತರ ಹಿಂದುಳಿದ ವರ್ಗಗಳ ಉನ್ನತಿಗಾಗಿ ಕಾರ್ಯಕ್ರಮಗಳು ನಮ್ಮ ಆದ್ಯತೆಗಳಾಗಿವೆ. ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಪಂಗಡಗಳ ಘಟಕ ಯೋಜನೆಗಳನ್ನು ಪುನಶ್ಚೇತನಗೊಳಿಸಬೇಕಾಗಿದೆ, ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಂ ಅಲ್ಪಸಂಖ್ಯಾತರು ಅಭಿವೃದ್ಧಿಯ ಫಲವನ್ನು ಸಮಾನವಾಗಿ ಹಂಚಿಕೊಳ್ಳಲು ನಾವು ನವೀನ ಯೋಜನೆಗಳನ್ನು ರೂಪಿಸಬೇಕಾಗಿದೆ. ಅವರು ಸಂಪನ್ಮೂಲಗಳ ಮೇಲಿನ ಮೊದಲ ಹಕ್ಕನ್ನು ಹೊಂದಿರಬೇಕು.ʼʼ

ಈ ಭಾಷಣದಲ್ಲಿ ಅವರು ಸಂಪನ್ಮೂಲಗಳ ಮೇಲಿನ ಮೊದಲ ಹಕ್ಕನ್ನು ಹೊಂದಿರಬೇಕು ಎಂದು ಹೇಳಿರುವುದು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರವಲ್ಲ. ಅಲ್ಪಸಂಖ್ಯಾತರ ಪ್ರಸ್ತಾಪ ಮಾಡುವ ಮುನ್ನ ಅವರು ಹೇಳಿದ ಎಸ್‌ಸಿ/ಎಸ್‌ಟಿ/ಒಬಿಸಿಗಳನ್ನು ಸೇರಿಸಿ ಅವರು ಈ ಪ್ರಸ್ತಾಪ ಮಾಡಿದ್ದಾರೆ. ಹೀಗಾಗಿ ʻಅವರುʼ ಎಂಬ ಶಬ್ದ ಕೇವಲ ಮುಸ್ಲಿಮರನ್ನು ಉದ್ದೇಶಿಸಿ ಹೇಳಿದ ಪದವಲ್ಲ, ದೇಶದ ಎಲ್ಲ ದುರ್ಬಲ ವರ್ಗಗಳನ್ನು ಉದ್ದೇಶಿಸಿ ಹೇಳಲಾಗಿರುವುದು.

ದುರ್ಬಲ ವರ್ಗಗಳನ್ನು ಮೇಲೆ ತರುವ ಮಾತುಗಳನ್ನು ಡಾ.ಮನಮೋಹನ ಸಿಂಗ್‌ ಅವರು ಮಾತ್ರ ಹೇಳಿದ್ದೇನೂ ಅಲ್ಲ. ಬಿಜೆಪಿಯೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಜನರು ಅದನ್ನು ಮೇಲಿಂದ ಮೇಲೆ ಹೇಳುತ್ತಾರೆ. ಅಷ್ಟೇಕೆ, ಅದನ್ನು ಭಾರತ ಸಂವಿಧಾನವೇ ಹೇಳುತ್ತದೆ. ಅವಕಾಶ ವಂಚಿತ ಸಮುದಾಯಗಳು ಮುಖ್ಯವಾಹಿನಿಗೆ ಬಂದು ಸಮಾನತೆ ಸಾಧ್ಯವಾಗಬೇಕು ಎಂಬುದು ಸಂವಿಧಾನದ ಆಶಯ. ಅದನ್ನೇ ನಾವು ಸಮಾನತೆಯ ಹಕ್ಕು ಎನ್ನುತ್ತೇವೆ. ಅದಕ್ಕಾಗಿಯೇ ದುರ್ಬಲ ವರ್ಗದವರಿಗೆ ಸಂವಿಧಾನದ ಅಡಿಯಲ್ಲೇ ಮೀಸಲಾತಿ ಕಲ್ಪಿಸಲಾಗಿದೆ.

ಡಾ. ಮನಮೋಹನ್‌ ಸಿಂಗ್‌ ಅವರ ಭಾಷಣದ ಮಾತುಗಳನ್ನು ತಮಗೆ ಬೇಕಾದ ಹಾಗೆ ತಿರುಚಿಕೊಂಡೇ ಬಿಜೆಪಿ ಇಂದು ಮುಸ್ಲಿಮ್‌ ಸಮುದಾಯದ ವಿರುದ್ಧ ದ್ವೇಷ ಕಾರುತ್ತ, ಮೋದಿಯವರನ್ನು ಸಮರ್ಥಿಸಿಕೊಳ್ಳುತ್ತಿದೆ.

ಇನ್ನು ʻʻನೀವು ಕಷ್ಟಪಟ್ಟು ದುಡಿದ ಹಣವನ್ನು ಈ ನುಸುಳುಕೋರರಿಗೆ (ಮುಸ್ಲಿಮರಿಗೆ) ಹಂಚಬೇಕೆ? ಇದಕ್ಕೆ ನಿಮ್ಮ ಸಮ್ಮತಿ ಇದೆಯೇ? ಇದನ್ನು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲೇ ಹೇಳಲಾಗಿದೆ. ದೇಶದ ವೈಯಕ್ತಿಕ ಆಸ್ತಿಗಳನ್ನು ಕಿತ್ತುಕೊಂಡು ಕಾಂಗ್ರೆಸ್ ಪಕ್ಷ ಮುಸ್ಲಿಮರಿಗೆ ಹಂಚಲಿದೆ. ಇದು ನಗರ ನಕ್ಸಲರ ( Urban Naxal) ಯೋಜನೆಯಾಗಿದೆ. ಇದರಿಂದ ನಿಮ್ಮ ಹೆಣ್ಣುಮಕ್ಕಳ ಮಾಂಗಲ್ಯ ಕೂಡ ಉಳಿಯುವುದಿಲ್ಲʼʼ ಎಂದು ಮೋದಿ ಮತ್ತೊಂದು ಭೀಕರ ಸುಳ್ಳನ್ನು ಹೇಳಿದ್ದಾರೆ. ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುವ ಯಾವ ಪ್ರಸ್ತಾಪವೂ ಇಲ್ಲ. ಅದನ್ನು ಸಾಬೀತುಪಡಿಸಲು ಬಿಜೆಪಿ ಐಟಿ ಸೆಲ್‌ ಇದುವರೆಗೆ ಕಾಂಗ್ರೆಸ್‌ ಪ್ರಣಾಳಿಕೆಯ ಯಾವ ಪುಟದ ಯಾವ ಪ್ಯಾರವನ್ನೂ ದಾಖಲೆಯಾಗಿ ನೀಡಿಲ್ಲ. ಅಲ್ಲಿಗೆ ನರೇಂದ್ರ ಮೋದಿ ಹಸಿಹಸಿ ಸುಳ್ಳು ಹೇಳಿರುವುದು ಸ್ಪಷ್ಟ.

ಮಕ್ಕಳನ್ನು ಹೆರುವ ವಿಷಯಕ್ಕೆ ಸಂಬಂಧಿಸಿದಂತೆ ಮೋದಿ ವಾಟ್ಸಾಪ್‌ ವಿಶ್ವವಿದ್ಯಾಲಯದ ಪದವೀಧರರಂತೆ ಮಾತನಾಡಿದ್ದಾರೆ. ಮಕ್ಕಳನ್ನು ಹೆರುವ ಅನುಪಾತದಲ್ಲಿ ಹಿಂದೂ- ಮುಸ್ಲಿಮರ ನಡುವಿನ ಅನುಪಾತದ ಅಂತರ ತೆಳುವಾಗುತ್ತಲೇ ಹೋಗುತ್ತಿದೆ. ಇದನ್ನು ಇತ್ತೀಚಿನ ಜನಗಣತಿಯ ವರದಿಗಳೇ ಹೇಳುತ್ತವೆ. TFR ದರ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿ, ಸಮುದಾಯದಿಂದ ಸಮುದಾಯಕ್ಕೆ ಭಿನ್ನವಾಗಿದೆ. ದೇಶದ ಸರಾಸರಿ TFR ದರ 2 ಆಗಿದ್ದರೆ ಉತ್ತರಪ್ರದೇಶದ ದರ 2.4 ( ಹಿಂದೆ ಈ ದರ ಇನ್ನೂ ಹೆಚ್ಚಿತ್ತು) ಆಗಿದೆ. ಉತ್ತರಪ್ರದೇಶದಲ್ಲಿ ಹಾಗಿದ್ದರೆ ಕೇವಲ ಮುಸ್ಲಿಮರು ಇದ್ದಾರೆಯೇ? ಕರ್ನಾಟಕದಲ್ಲಿ TFR ದರ ಕೇವಲ 1.7. ಇದಕ್ಕೆ ಮೋದಿಯವರು ಏನು ಹೇಳುತ್ತಾರೆ? ಸಮಾಜಗಳು ಸುಶಿಕ್ಷಿತರಾಗುತ್ತಿದ್ದಂತೆ TFR ದರವೂ ಕುಸಿಯುತ್ತಿದೆ, ಮುಸ್ಲಿಂ ಸಮುದಾಯ ಇದಕ್ಕೆ ಹೊರತಲ್ಲ. ಹೀಗಿದ್ದಾಗ್ಯೂ ʻಮುಸ್ಲಿಮರನ್ನು ಹೆಚ್ಚು ಹೆರುವವರುʼ ಎಂದು ಕರೆಯುವ ಹುನ್ನಾರವೇಕೆ?

ಇನ್ನು ಮುಸ್ಲಿಂ ಸಮುದಾಯವನ್ನು ʻನುಸುಳುಕೋರರುʼ ಎಂದು ಕರೆಯುವುದು ನೀಚತನದ ಪರಮಾವಧಿ. ಹಿಂದೂಗಳು, ಕ್ರಿಶ್ಚಿಯನ್ನರು, ಪಾರ್ಸಿಗಳು ಮತ್ತುಇತರೆಲ್ಲ ಸಮುದಾಯಗಳ ಹಾಗೆ ಮುಸ್ಲಿಮರು ದೇಶದ ಪ್ರಜೆಗಳು. ಆರ್ಯರೂ ಸೇರಿದಂತೆ ದೇಶದ ಎಲ್ಲ ಸಮುದಾಯಗಳೂ ಒಂದಲ್ಲ ಒಂದು ಕಾಲದಲ್ಲಿ ವಲಸೆ ಬಂದ ಸಮುದಾಯಗಳೇ ಆಗಿವೆ. ಹೀಗಾಗಿ ಯಾರೂ ಇಲ್ಲಿ ನುಸುಳುಕೋರರಲ್ಲ. ಹಾಗೆ ಕರೆಯುವುದು ಧಾರ್ಮಿಕ ದ್ವೇಷವನ್ನಷ್ಟೇ ತೋರಿಸುತ್ತದೆ.

ಕಾಂಗ್ರೆಸ್‌ ಪಕ್ಷ ಬಿಡುಗಡೆ ಮಾಡಿರುವ ನ್ಯಾಯಪತ್ರದಲ್ಲಿ ದೇಶದ ಎಲ್ಲ ಜಾತಿ, ಧರ್ಮ, ಪಂಥದ ಬಡ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರುಪಾಯಿ ನೀಡುವ ಘೋಷಣೆ ಮಾಡಲಾಗಿದೆ. ಇದನ್ನೇ ಮೋದಿ ʻಸಂಪತ್ತಿನ ಹಂಚಿಕೆʼ ಎಂದು ಕರೆಯುತ್ತಿದ್ದಾರೆ. ಕರ್ನಾಟಕದಲ್ಲಿ ಸಿದ್ಧರಾಮಯ್ಯ ಸರ್ಕಾರ ಐದು ಗ್ಯಾರೆಂಟಿಗಳನ್ನು ಜಾರಿಗೆ ತಂದಿತು. ಬಿಜೆಪಿಯವರ ಕಣ್ಣುಕುಕ್ಕುತ್ತಿರುವುದು ಮುಖ್ಯವಾಗಿ ಗೃಹಲಕ್ಷ್ಮಿ ಯೋಜನೆ. ಜಾತಿ, ಧರ್ಮದ ಬೇಧವಿಲ್ಲದೆ ಎಲ್ಲ ಬಡ ಕುಟುಂಬಗಳ ಯಜಮಾನಿಗೆ ಅದು ತಿಂಗಳಿಗೆ 2000 ರುಪಾಯಿಗಳನ್ನು ನೀಡುತ್ತವೆ. ಯೋಜನೆ ಜಾರಿಯಾದಾಗಿನಿಂದ ಬಿಜೆಪಿ ಅದನ್ನು ಟೀಕಿಸುತ್ತಲೇ ಬಂದಿದೆ. ಇತ್ತೀಚಿಗೆ ಬಿಜೆಪಿಯ ಮಿತ್ರಪಕ್ಷ ಜೆಡಿಎಸ್‌ ನ ಮುಖಂಡ ಜಿ.ಟಿ.ದೇವೇಗೌಡ ಗ್ಯಾರೆಂಟಿ ಯೋಜನೆಗಳು ಭಯೋತ್ಪಾದಕರನ್ನು ಬೆಳೆಸುತ್ತಿದೆ ಎಂದು ಹೇಳಿದ್ದರು. ಮೋದಿ ಹೇಳಿದ ಮಾತುಗಳು, ಜಿ.ಟಿ.ದೇವೇಗೌಡರ ಮಾತುಗಳು ಒಂದೇ ತೆರನಾಗಿವೆ. ಕಾಂಗ್ರೆಸ್‌ ನ ಗ್ಯಾರೆಂಟಿ ಯೋಜನೆಗಳು ಎಲ್ಲ ಸಮುದಾಯಗಳ ಜೊತೆಗೆ ಮುಸ್ಲಿಂ ಸಮುದಾಯವನ್ನೂ ತಲುಪುತ್ತಿರುವುದನ್ನು ಇವರುಗಳು ಹೇಗೆ ಸಹಿಸಿಕೊಳ್ಳಲು ಸಾಧ್ಯ?

ನರೇಂದ್ರ ಮೋದಿ ಹತ್ತು ವರ್ಷಗಳ ಕಾಲ ಪ್ರಧಾನಿ ಆಗಿದ್ದವರು. ಮೂರನೇ ಬಾರಿ ಅಧಿಕಾರ ಬಯಸಿ ಅವರು ಚುನಾವಣಾ ಪ್ರಚಾರ ಮಾಡುವಾಗ ತಮ್ಮ ಹತ್ತು ವರ್ಷಗಳ ಸಾಧನೆಗಳನ್ನು ಹೇಳಿಕೊಳ್ಳಬಹುದಿತ್ತು. ಆದರೆ ಹೇಳಿಕೊಳ್ಳಲು ಅವರ ಬಳಿ ಹೆಚ್ಚಿನ ವಿಷಯಗಳಿಲ್ಲ. ಬಹುತೇಕ ಎಲ್ಲ ವಿಷಯಗಳಲ್ಲೂ ಮೋದಿ ಸರ್ಕಾರ ವಿಫಲವಾಗಿದೆ. ನಿರುದ್ಯೋಗ ಸಮಸ್ಯೆ ದಾಖಲೆಯ ಮಟ್ಟ ತಲುಪಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಐವತ್ತಾರು ಇಂಚಿನ ಎದೆಯುಳ್ಳ ಮೋದಿಯವರ ವಿದೇಶಾಂಗ ನೀತಿಯೂ ದಿಕ್ಕುಗೆಟ್ಟಿದೆ. ನೆರೆಯ ಚೀನಾ ನಮ್ಮ ದೇಶದ 4000 ಚದರ ಕಿ.ಮೀ ವ್ಯಾಪ್ತಿಯ ನೆಲವನ್ನು ಆಕ್ರಮಿಸಿಕೊಂಡು ಕೇಕೆ ಹಾಕಿದರೂ ಮೋದಿ ಏನೂ ಮಾಡಲಿಲ್ಲ. ನೆರೆಯ ದೇಶಗಳೊಂದಿಗೆ ಸಂಬಂಧಗಳೆಲ್ಲ ಹಳಸಿದೆ. ಮೋದಿ ಮಾಸ್ಟರ್‌ ಸ್ಟ್ರೋಕ್‌ ಎಂದು ಮಾಡಿದ ಡಿಮಾನಿಟೈಸೇಷನ್‌ ನಿಂದ ಕಪ್ಪುಹಣವೆಲ್ಲ ಬಿಳಿಯಾಯಿತೆ ಹೊರತು ಬೇರೇನೂ ಆಗಲಿಲ್ಲ. ಕೋವಿಡ್‌ ಸಂದರ್ಭದಲ್ಲಿ ಕೆಟ್ಟ ನಿರ್ವಹಣೆಯಿಂದಾಗಿ ನೂರಾರು ಭಾರತೀಯರು ಬೀದಿಯಲ್ಲಿ ಸತ್ತರು. ಜನರ ರಕ್ತಹೀರುತ್ತಿರುವ ಜಿಎಸ್‌ ಟಿಯಿಂದಾಗಿ ದೇಶದ ಜನತೆ ಬವಣೆ ಪಡುವಂತಾಯಿತು.

ಈ ಹತ್ತು ವರ್ಷಗಳಲ್ಲಿ ಮೋದಿ ಮಾಡಿದ ಬಹುದೊಡ್ಡ ಮ್ಯಾಜಿಕ್‌ ಏನೆಂದರೆ ತಮ್ಮ ಅನುಗಾಲದ ಗೆಳೆಯರುಗಳಾದ ಬಿಲಿಯನೇರ್‌ ಉದ್ಯಮಪತಿಗಳ ಸಂಪತ್ತನ್ನು ದುಪ್ಪಟ್ಟು, ಹಲವು ಪಟ್ಟು ಹೆಚ್ಚಿಸಿದ್ದು. ಅವರಿಗೆ ದೇಶದಲ್ಲಿ ಮಾತ್ರವಲ್ಲ, ಬೇರೆ ದೇಶಗಳಲ್ಲೂ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದು. ವಿಶ್ವ ಶ್ರೀಮಂತರ ಅಗ್ರಪಟ್ಟಿಯಲ್ಲಿ ಅವರ ಹೆಸರುಗಳು ಬರುವಂತೆ ಮಾಡಿಕೊಟ್ಟಿದ್ದು. ಇದನ್ನೆಲ್ಲ ಅವರು ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಗೆ ಹೇಳಿಕೊಳ್ಳಲು ಸಾಧ್ಯ ಹೇಳಿ?

ದೇಶದ ಸಮಸ್ಯೆಗಳಿಗೆಲ್ಲ ನೆಹರೂ ಕಾರಣ ಎಂದು ಹೇಳಿಕೊಂಡು ಬಂದ ನರೇಂದ್ರ ಮೋದಿಗೆ ದೇಶ ಹತ್ತು ವರ್ಷಗಳ ಅಮೂಲ್ಯ ಸಮಯವನ್ನು ನೀಡಿತ್ತು. ಆದರೆ ಈಗ ಅವರ ಬಳಿ ತನ್ನ ಆಡಳಿತವನ್ನು ಸಮರ್ಥಿಸಿಕೊಳ್ಳಲು, ಜನರ ಮನ ಒಲಿಸಲು ಯಾವುದೇ ಮಾತುಗಳು ಉಳಿದಿಲ್ಲ. ಅದಕ್ಕಾಗಿ ಅವರು ಈಗ 2002ರ ಗುಜರಾತ್‌ ಮುಖ್ಯಮಂತ್ರಿಯ ವೇಷವನ್ನು ಮತ್ತೆ ತೊಟ್ಟಿದ್ದಾರೆ. ಮುಸ್ಲಿಮರ ವಿರುದ್ಧ ದ್ವೇಷ ಉಗುಳುವ ಮಾತುಗಳನ್ನು ಆಡುತ್ತಿದ್ದಾರೆ.

ಕಳೆದ ಬಾರಿ ಪುಲ್ವಾಮಾ ಹೆಸರಿನಲ್ಲಿ, ದೇಶಕ್ಕಾಗಿ ಜೀವತೆತ್ತ ಹುತಾತ್ಮ ಯೋಧರ ಹೆಸರಿನಲ್ಲಿ ಮೋದಿ ಮತ ಕೇಳಿದ್ದರು. ಈ ಬಾರಿ ದೇಶದ ಮುಸ್ಲಿಮರನ್ನು ʻನುಸುಳುಕೋರರುʼ ಎಂದು ಹೇಳುವ ಮೂಲಕ ದೇಶದ ಜನರನ್ನು ಧರ್ಮದ ಹೆಸರಲ್ಲಿ ಒಡೆದು ಲಾಭಪಡೆಯಲು ಯತ್ನಿಸುತ್ತಿದ್ದಾರೆ. ಆದರೆ ದೇಶದ ಜನರು ಬುದ್ಧಿವಂತರಾಗಿದ್ದಾರೆ. ಹೀಗಾಗಿಯೇ ಹತಾಶೆ ಹೆಚ್ಚಾಗುತ್ತಿದೆ. ಚುನಾವಣೆ ಮುಗಿಯುವಷ್ಟರಲ್ಲಿ ಈ ಹತಾಶೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಚುನಾವಣೆಗಳು ಬರುತ್ತವೆ ಹೋಗುತ್ತವೆ. ನಾಳೆ ಮೋದಿಯವರೇ ದೇಶದ ಪ್ರಧಾನಿಯಾಗಬಹುದು ಅಥವಾ ಇನ್ಯಾರಾದರೂ ಆಗಬಹುದು. ದೇಶ ಹಾಗೇ ಇರುತ್ತದೆ. ನಮ್ಮದು ಬಹುಸಂಸ್ಕೃತಿಗಳ, ಬಹುಧರ್ಮಗಳ ದೇಶ. ಇಪ್ಪತ್ತು ಕೋಟಿ ಜನರನ್ನು ಹೊರಗಿಟ್ಟು ನಾವು ದೇಶ ಕಟ್ಟಲಾಗದು. ಇಂಥ ವಿಭಜಕ ನೀತಿಗಳಿಂದ ದೇಶದ ಒಂದಾಗಿ ಉಳಿಯುವುದು ಸಾಧ್ಯವಿಲ್ಲ. ಹೀಗಾಗಿ ದೇಶದ ಪ್ರಧಾನಿಯಾದರೂ ಸರಿ, ನಾಲಿಗೆ ಬಿಗಿ ಹಿಡಿದು ಮಾತನಾಡಿ ಎಂದು ಗಟ್ಟಿಧ್ವನಿಯಲ್ಲಿ ಹೇಳಲೇಬೇಕಾಗಿದೆ.

ದಿನೇಶ್‌ ಕುಮಾರ್‌ ಎಸ್.ಸಿ.

More articles

Latest article