ಕಾಂಗ್ರೆಸ್‌ ಬ್ಯಾಂಕ್‌ ಅಕೌಂಟ್‌ ಗಳನ್ನು ಸೀಜ್‌ ಮಾಡಿದ ಮೋದಿ ಸರ್ಕಾರ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

Most read

ಹೊಸದಿಲ್ಲಿ: ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಚುನಾವಣಾ ಆಯೋಗದಿಂದ ಹಿಡಿದು ಇಡಿ, ಸಿಬಿಐ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಿಷ್ಪಕ್ಷಪಾತ ಚುನಾವಣೆ ಅನಿವಾರ್ಯ. ಆದರೆ ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರ ಇಂಥ ನಿಷ್ಪಕ್ಷಪಾತ ಚುನಾವಣೆ ನಡೆಸುವುದು ಅನುಮಾನ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಖರ್ಗೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಿದೆ. ಎಲ್ಲ ರಾಜಕೀಯ ಪಕ್ಷಗಳಿಗೂ ಸಮಾನ ಅವಕಾಶ ದೊರೆಯಬೇಕಿದೆ. ಆದರೆ ನಮ್ಮ ಬ್ಯಾಂಕ್‌ ಅಕೌಂಟುಗಳನ್ನು ಸೀಜ್‌ ಮಾಡಲಾಗಿದೆ. ಸರ್ಕಾರ ಕೂಡಲೇ ಸೀಜ್ ಆಗಿರುವ ಅಕೌಂಟುಗಳಿಗೆ ಮತ್ತೆ ಚಾಲನೆ ನೀಡಬೇಕು ಎಂದರು.

ನಮ್ಮ ಪಕ್ಷದ ಬ್ಯಾಂಕ್ ಖಾತೆಯನ್ನ ಫ್ರೀಜ್ ಮಾಡಲಾಗಿದೆ. ಚುನಾವಣಾ ಬಾಂಡ್ ಗಳು ಬಿಜೆಪಿಯ ಖಜಾನೆ ತುಂಬಿದೆ. ವಿರೋಧ ಪಕ್ಷಗಳ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಹೀಗಾದರೆ ಚುನಾವಣೆಗಳು ನ್ಯಾಯಸಮ್ಮತವಾಗಿ ನಡೆಯಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು. ಯಾವುದೋ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ನಮ್ಮ ಅಕೌಂಟುಗಳನ್ನು ಸೀಜ್‌ ಮಾಡಿದೆ. ಇದು ಪ್ರಜಾಪ್ರಭುತ್ವದ ಮೇಲಿನ ಗಂಭೀರ ದಾಳಿ ಎಂದು ಅವರು ಆರೋಪಿಸಿದರು.

ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಚುನಾವಣಾ ಚಂದಾ ಬಾಂಡ್‌ ಗಳ ವಿವರಗಳು ಬಹಿರಂಗಗೊಂಡಿವೆ. ಬಿಜೆಪಿ ಅದರಲ್ಲಿ ಸಿಂಹಪಾಲು ಪಡೆದಿದೆ. ಈ ಹಣವನ್ನು ಹೇಗೆ ಪಡೆದಿದೆ ಎಂಬುದು ಎಲ್ಲ ಬಹಿರಂಗಗೊಳ್ಳಲಿದೆ ಎಂದು ಅವರು ಹೇಳಿದರು.

ಎಐಸಿಸಿ ಮಾಜಿ ಅಧ್ಯಕ್ಷೆ, ಸೋನಿಯಾ ಗಾಂಧಿ ಮಾತನಾಡಿ, ನಮ್ಮ ಬ್ಯಾಂಕು ಅಕೌಂಟುಗಳನ್ನು ಸೀಜ್‌ ಮಾಡಲಾಗಿದೆ. ಇದು ಅತ್ಯಂತ ಅಪಾಯಕಾರಿ, ಗಂಭೀರ ಬೆಳವಣಿಗೆ. ಕಾಂಗ್ರೆಸ್‌ ಪಕ್ಷ ಈ ಚುನಾವಣೆಯಲ್ಲಿ ಹಣ ಖರ್ಚು ಮಾಡದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದರು.

More articles

Latest article