ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮವನ್ನು ಕೇವಲ ಪ್ರಚಾರದ ಸರಕನ್ನಾಗಿಸಿ ಕೊಂಡಿದೆಯೇ ಹೊರತು, ಕಾರ್ಯರೂಪಕ್ಕೆ ತರುವಲ್ಲಿ ವಿಫಲವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿಯಲ್ಲಿ ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡುತ್ತೇವೆ ಎಂದು ಬಿಜೆಪಿ ನೀಡಿದ್ದ ಭರವಸೆ ಇದುವರೆಗೂ ಈಡೇರಿಲ್ಲ ಎಂದು ಆರೋಪಿಸಿದ್ದಾರೆ.
2014ರಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮವನ್ನೂ ಸಂಪೂರ್ಣವಾಗಿ ಜಾರಿಗೆ ತರಲು ಇದುವರೆಗೂ ಏಕೆ ಸಾಧ್ಯವಾಗಲಿಲ್ಲ, ಈ ಯೋಜನೆಯಡಿ ಸೃಷ್ಟಿಯಾಗಬೇಕಿದ್ದ ಉದ್ಯೋಗಳು ಏಕೆ ಆಗಲಿಲ್ಲ?, ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಹಣದುಬ್ಬರದಿಂದ ಜನರು ಬೇಸತ್ತು ಹೋಗಿದ್ದಾರೆ ಎಂದು ಖರ್ಗೆ ಲೇವಡಿ ಮಾಡಿದ್ದಾರೆ.
ದೇಶದಲ್ಲಿ ರಫ್ತು ಪ್ರಮಾಣ ಕಳೆದ 50 ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ. 2024ರ ಹೊತ್ತಿಗೆ ಭಾರತ ಉತ್ಪಾದನಾ ವಲಯಕ್ಕೆ ನಿಗದಿಪಡಿಸಿದ್ದ ಪ್ರೋತ್ಸಾಹ ಧನ ಶೇ. 8ರಷ್ಟು ಮಾತ್ರವೇ ಕೇಂದ್ರ ಸರ್ಕಾರ ಬಳಸಿದೆ. ಈ ಕ್ಷೇತ್ರದಲ್ಲಿ ಶೇ. 37ರಷ್ಟು ಗುರಿ ಸಾಧಿಸಿದೆ ಎಂದು ಖರ್ಗೆ ಕಿಡಿ ಕಾರಿದ್ದಾರೆ.