ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧಕ್ಕೆ ಸಂಬಂಧಿಸಿದ ಉದ್ವಿಗ್ನತೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಯಾವುದೇ ಸನ್ನಿವೇಶ ಎದುರಿಸುವುದಕ್ಕೆ ಭಾರತೀಯ ನಾಗರಿಕರನ್ನು ಸಜ್ಜುಗೊಳಿಸಲು ಭಾರತ ಸರ್ಕಾರ ಮುಂದಾಗಿದೆ. ಈ ಪ್ರಕಾರ ನಾಳೆ ಕರ್ನಾಟಕದ ಬೆಂಗಳೂರು, ಉತ್ತರಕನ್ನಡ, ರಾಯಚೂರು ಸೇರಿ 244 ನಾಗರಿಕ ರಕ್ಷಣಾ ಜಿಲ್ಲೆಗಳಲ್ಲಿ (ಸಿವಿಲ್ ಡಿಫೆನ್ಸ್ ಡಿಸ್ಟ್ರಿಕ್ಟ್) ಮಾಕ್ ಡ್ರಿಲ್ ನಡೆಸಬೇಕು ಎಂದು ಎಲ್ಲ ರಾಜ್ಯಗಳಿಗೆ ಆದೇಶ ನೀಡಲಾಗಿದೆ. ಜನರನ್ನು ಜಾಗೃತಗೊಳಿಸುವ ಕೆಲಸ ಒಂದು ಕಡೆಯಾದರೆ, ಇನ್ನೊಂದೆಡೆ ಸರ್ಕಾರಿ ವ್ಯವಸ್ಥೆಯನ್ನು ಚುರುಕುಗೊಳಿಸುವುದು ಈ ತಾಲೀಮಿನ ಉದ್ದೇಶ. ಹಾಗಾದರೆ, ನಾಗರಿಕ ರಕ್ಷಣಾ ಜಿಲ್ಲೆಗಳ ವರ್ಗೀಕರಣ ಹೇಗೆ ಮಾಡುತ್ತಾರೆ ನೋಡೋಣ.
ನಾಗರಿಕ ರಕ್ಷಣಾ ಜಿಲ್ಲೆ ಎಂದರೇನು?
ನಾಗರಿಕ ರಕ್ಷಣಾ ಜಿಲ್ಲೆ ಅಥವಾ ಸಿವಿಲ್ ಡಿಫೆನ್ಸ್ ಡಿಸ್ಟ್ರಿಕ್ಟ್ ಎಂದರೆ, ಭಾರತ ಸರ್ಕಾರವು ನಾಗರಿಕ ರಕ್ಷಣಾ ಕಾರ್ಯಕ್ರಮಗಳನ್ನು ಸಕ್ರಿಯವಾಗಿ ಕಾರ್ಯಗತಗೊಳಿಸುವುದಕ್ಕಾಗಿ ಗುರುತಿಸಿರುವ ಪ್ರದೇಶವಾಗಿರುತ್ತದೆ. ಈ ಜಿಲ್ಲೆಗಳು ಯುದ್ಧ, ವಾಯು ದಾಳಿ, ಕ್ಷಿಪಣಿ ದಾಳಿ ಅಥವಾ ದೊಡ್ಡ ಪ್ರಮಾಣದ ಭಯೋತ್ಪಾದಕ ದಾಳಿಯಂತಹ ತುರ್ತು ಪರಿಸ್ಥಿತಿ ಎದುರಿಸುವಂತಹ ಸಿದ್ಧತಾ ಚಟುವಟಿಕೆಗಳಿಗೆ ಆಡಳಿತಾತ್ಮಕ ಹಾಗೂ ಕಾರ್ಯಾಚರಣೆ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ಸಂಪನ್ಮೂಲಗಳನ್ನು ಸಂಘಟಿಸುವುದು, ನಾಗರಿಕರು ಹಾಗೂ ಸ್ವಯಂಸೇವಕರಿಗೆ ತರಬೇತಿ ನೀಡುವುದು ಹಾಗೂ ಅನೇಕ ಸರ್ಕಾರ ಮತ್ತು ನಾಗರಿಕ ಏಜೆನ್ಸಿಗಳನ್ನು ಒಳಗೊಂಡ ಪ್ರತಿಕ್ರಿಯೆಗಳನ್ನು ಸಂಘಟಿಸುವುದು ಅವುಗಳ ಪಾತ್ರವಾಗಿದೆ.
ನಾಗರಿಕ ರಕ್ಷಣಾ ಜಿಲ್ಲೆ ಅಥವಾ ಸಿವಿಲ್ ಡಿಫೆನ್ಸ್ ಡಿಸ್ಟ್ರಿಕ್ಟ್‌ನಲ್ಲಿ ನಡೆಯುವ ಕೆಲಸಗಳೇನು?
1) ಸ್ವಯಂಸೇವಕರ ತರಬೇತಿ ಮತ್ತು ಒಗ್ಗೂಡಿಸುವಿಕೆ
2) ಬ್ಲ್ಯಾಕ್ ಔಟ್ ಮತ್ತು ತೆರವು ಕಾರ್ಯಾಚರಣೆ ನಡೆಸುವುದು
3) ಗೃಹ ರಕ್ಷಕದಳ, ಎನ್‌ಸಿಸಿ, ಎನ್‌ಎಸ್‌ಎಸ್, ಎನ್‌ವೈಕೆಎಸ್, ಪೊಲೀಸ್ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳ ನಡುವೆ ಸಮನ್ವಯ ನಿರ್ವಹಣೆ
4) ಸಾರ್ವಜನಿಕ ಜಾಗೃತಿ ಪ್ರಚಾರ ಅಭಿಯಾನ ನಡೆಸುವುದು ಮತ್ತು ಆಶ್ರಯ ತಾಣಗಳನ್ನು ಯೋಜಿಸುವುದು
ನಾಗರಿಕ ರಕ್ಷಣಾ ಜಿಲ್ಲೆ ಅಥವಾ ಸಿವಿಲ್ ಡಿಫೆನ್ಸ್ ಡಿಸ್ಟ್ರಿಕ್ಟ್‌ಗಳ ವರ್ಗೀಕರಣ ಹೇಗೆ?
ಕಾರ್ಯತಂತ್ರದ ಪ್ರಾಮುಖ್ಯ ಮತ್ತು ದೌರ್ಬಲ್ಯಗಳ ಮೌಲ್ಯಮಾಪನವನ್ನು ಆಧರಿಸಿ ಭಾರತದ 244 ನಾಗರಿಕ ರಕ್ಷಣಾ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ನಾಗರಿಕ ರಕ್ಷಣಾ ಜಿಲ್ಲೆ ಅಥವಾ ಸಿವಿಲ್ ಡಿಫೆನ್ಸ್ ಡಿಸ್ಟ್ರಿಕ್ಟ್‌ಗಳ ವರ್ಗೀಕರಣವು ಹಲವು ಮಾನದಂಡಗಳನ್ನು ಒಳಗೊಂಡಿರುತ್ತದೆ. ಅವುಗಳೆಂದರೆ…
1) ಅಂತಾರಾಷ್ಟ್ರೀಯ ಗಡಿಗೆ ಸನಿಹ: ಪಂಜಾಬ್, ರಾಜಸ್ಥಾನ, ಗುಜರಾತ್, ಜಮ್ಮು ಮತ್ತು ಕಾಶ್ಮೀರದ ಜಿಲ್ಲೆಗಳಿಗೆ ಮೊದಲ ಆದ್ಯತೆ. ಇವುಗಳು ಅಂತಾರಾಷ್ಟ್ರೀಯ ಗಡಿಗಳನ್ನು ಹಂಚಿಕೊಂಡಿರುವ ರಾಜ್ಯಗಳು.
2) ನಿರ್ಣಾಯಕ ಮೂಲ ಸೌಕರ್ಯಗಳಿರುವ ಜಿಲ್ಲೆಗಳು: ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿ ಸ್ಥಾಪನೆಗಳು, ವಿದ್ಯುತ್ ಗ್ರಿಡ್ ಗಳು, ರಿಫೈನರೀಸ್, ಬಂದರು ಮತ್ತು ಸಂವಹನ ಜಾಲಗಳ ಘಟಕಗಳು ಇರುವ ಜಿಲ್ಲೆಗಳು
3) ನಗರ ಸಾಂದ್ರತೆ ಮತ್ತು ಜನಸಂಖ್ಯೆ: ಮೆಟ್ರೋ ನಗರಗಳು ಅಥವಾ ದೊಡ್ಡ ಗಾತ್ರದ ನಗರಗಳು ಮತ್ತು ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳು ದಾಳಿಯ ಗುರಿಗಳಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಅಲ್ಲೆಲ್ಲ ಇಂತಹ ಅಣಕು ಯುದ್ಧ ತಾಲೀಮು ಅಥವಾ ಸ್ವರಕ್ಷಣಾ ಕಾರ್ಯಾಚರಣೆ ತಾಲೀಮು ಅಗತ್ಯ.
4) ಕರಾವಳಿ ಸೂಕ್ಷ್ಮ ಪ್ರದೇಶ: ಕರಾವಳಿಯ ಜಿಲ್ಲೆಗಳು ಹೆಚ್ಚು ಸೂಕ್ಷ್ಮ ಪ್ರದೇಶಗಳು. ನೌಕಾ ದಾಳಿಗೆ ಈ ಪ್ರದೇಶಗಳು ಸುಲಭ ತುತ್ತು. ಹೀಗಾಗಿ ರಕ್ಷಣಾ ವಿಷಯಕ್ಕೆ ಬಂದರೆ ಕರಾವಳಿ ಪ್ರದೇಶಕ್ಕೆ ಪ್ರಾಮುಖ್ಯ ಹೆಚ್ಚು.
ಈ ವರ್ಗಗಳು ದೇಶದ ಅತ್ಯಂತ ಅಪಾಯ ಎದುರಿಸುವ ಮತ್ತು ಪ್ರಮುಖ ಪ್ರದೇಶಗಳಾಗಿದ್ದು, ಕನಿಷ್ಠ ಅವ್ಯವಸ್ಥೆ ಮತ್ತು ಗರಿಷ್ಠ ಸಮನ್ವಯದೊಂದಿಗೆ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಉತ್ತಮವಾಗಿ ಸಿದ್ಧವಾಗಿವೆ ಎಂಬುದನ್ನು ಈ ನಾಗರಿಕ ರಕ್ಷಣಾ ಜಿಲ್ಲೆ ಅಥವಾ ಸಿವಿಲ್ ಡಿಫೆನ್ಸ್ ಡಿಸ್ಟ್ರಿಕ್ಟ್ ಗಳಲ್ಲಿ ಖಚಿತ ಪಡಿಸುವುದು ಮುಖ್ಯವಾಗಿರುತ್ತದೆ.