ಬೆಂಗಳೂರು: ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಇಂದು ಮುಂಜಾನೆ ಆಪರೇಷನ್ ಸಿಂಧೂರ ಹೆಸರಿನಲ್ಲಿ ಕ್ಷಿಪಣಿ ದಾಳಿ ನಡೆಸುವ ಮೂಲಕ ಪಾಕ್ ಗೆ ಶಾಕ್ ನೀಡಿದೆ.
ಈ ಮಧ್ಯೆ ನಿವೃತ್ತ ಸೇನಾಧಿಕಾರಿ ಕೆಜೆಎಸ್ ಧಿಲ್ಲೋನ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಜನರಿಗೆ ಜಾಗೃತಿ ಸಂದೇಶ ರವಾನಿಸಿ ಸಾರ್ವಜನಿಕರು ಏನು ಮಾಡಬಾರದು ಎನ್ನುವುದನ್ನು ನೆನಪಿಸಿದ್ದಾರೆ.
ಎಕ್ಸ್ ನಲ್ಲಿ ಅವರು ನಿಮ್ಮ ನಗರ ಅಥವಾ ಪಟ್ಟಣದಲ್ಲಿ ಸೇನೆ, ವಾಯುಪಡೆ ಅಥವಾ ನೌಕಾಪಡೆ ಸೇರಿದಂತೆ ಭದ್ರತಾ ಪಡೆಗಳ ಚಲನೆ ಅಥವಾ ಸೇನಾ ವಾಹನಗಳ ಸಂಚಾರ ಕಂಡು ಬಂದರೆ ದಯಮಾಡಿ ಅದರ ಯಾವುದೇ ವಿಡಿಯೊ ಅಥವಾ ರೀಲ್ ಗಳನ್ನು ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಭದ್ರತಾ ವಿಷಯಕ್ಕೆ ಸಂಬಂಧಿಸಿದ ಯಾವುದೇ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬೇಡಿ. ಈ ರೀತಿ ನೀವು ಮಾಡಿದರೆ ಉದ್ದೇಶಪೂರ್ವಕವಾಗಿಯೇ ಶತ್ರುಗಳಿಗೆ ಸಹಾಯ ಮಾಡಿದಂತಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಎರಡು ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಇಂದು ದೇಶದ ವಿವಿಧ ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ (ಸಾಮಾನ್ಯವಾಗಿ ಯುದ್ದ ಸನ್ನದ್ದತೆಯ ಭಾಗವಾಗಿ ನಾಗರಿಕ ಸ್ವರಕ್ಷಣೆ ತಾಲೀಮು) ನಡೆಸುವಂತೆ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೂ ಸಂದೇಶ ರವಾನಿಸಿದೆ.