ಕದ್ದ ಬೈಕ್‌ ನಲ್ಲೇ ಮೊಬೈಲ್‌ ಕಳವು ಮಾಡುತ್ತಿದ್ದ ಆರೋಪಿ ಬಂಧನ, 40 ಮೊಬೈಲ್‌ ವಶ

Most read


ಬೆಂಗಳೂರು: ನಗರದಲ್ಲಿ ದ್ವಿಚಕ್ರ ವಾಹನಗಳನ್ನು ಕದ್ದು, ಅದರಲ್ಲೇ ಮೊಬೈಲ್‌ ಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಮೈಕೋ ಪೊಲೀಸ್‌ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕೃತ್ಯ ಎಸಗುತ್ತಿದ್ದ ಬನ್ನೇರುಘಟ್ಟ ನಿವಾಸಿ ಕಿರಣ್ ಅಲಿಯಾಸ್ ಚಿಟ್ಟೆಯನ್ನು ಬಂಧಿಸಲಾಗಿದೆ. ಈತನಿಂದ ರೂ. 5.60 ಲಕ್ಷ ಮೌಲ್ಯದ ಎರಡು ದ್ವಿಚಕ್ರ ವಾಹನ ಮತ್ತು 40 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕುವೆಂಪುನಗರದ ಬಿ.ಟಿ.ಎಂ ಲೇಔಟ್‌ನ ನಿವಾಸಿಯೊಬ್ಬರು ದ್ವಿಚಕ್ರ ವಾಹನ ಕಳುವಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು, ಅರೆಕೆರೆ ಸಾಮ್ರಾಟ್ ಲೇಔಟ್ ಬಳಿ ಆರೋಪಿಯನ್ನು ದ್ವಿಚಕ್ರ ವಾಹನದಲ್ಲಿ ತೆರಳುತ್ತಿರುವಾಗಲೇ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ. ಈತ ವಿಚಾರಣೆಯ ಸಂದರ್ಭದಲ್ಲಿ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ದ್ವಿಚಕ್ರ ವಾಹನ ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿದ್ದೆ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ಬಿಟಿಎಂ ಲೇಔಟ್‌ನ ವಿವೇಕಾನಂದ ಮೈದಾನ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಿದ್ದ ಕಳವು ಮಾಡಿದ್ದ ವಾಹನವನ್ನು ಈತನಿಂದ ವಶಪಡಿಸಿಕೊಳ್ಳಲಾಗಿದೆ. ಬನ್ನೇರುಘಟ್ಟದಲ್ಲಿರುವ ಆರೋಪಿ ನಿವಾಸದಿಂದ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮೂಲಕ ಮೈಕೋ ಬಡಾವಣೆಯ ಎರಡು ದ್ವಿಚಕ್ರ ವಾಹನಗಳ ಪ್ರಕರಣ ಪತ್ತೆಯಾಗಿದೆ. ಕದ್ದ ಬೈಕ್ ಗಳಲ್ಲಿ ಸಂಚರಿಸುತ್ತಾ ಮಾತನಾಡಿಕೊಂಡು ಹೋಗುತ್ತಿದ್ದವರನ್ನೇ ಗುರಿಯಾಗಿಸಿಕೊಂಡು ಮೊಬೈಲ್‌ ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article