ತನಿಖಾ ಸಂಸ್ಥೆಗಳ ದುರ್ಬಳಕೆ

Most read

ಮೋದಿ ಮಾತನ್ನು ಕೇಳದ ವಿರೋಧ ಪಕ್ಷದ ನಾಯಕರುಗಳನ್ನು ಬಹುದಿನಗಳ ಕಾಲ ಬಂಧನದಲ್ಲಿ ಇಡಬಹುದು ಎನ್ನುವುದೇ ಇ.ಡಿ ಎನ್ನುವ ತನಿಖಾಸ್ತ್ರದ ಹಿಂದಿರುವ ಮೋದಿ ಶಾ ಎನ್ನುವ ಶಕ್ತಿಗಳ ವಿಶೇಷ ಆಸಕ್ತಿಯಾಗಿದೆ. ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು

ಹೇಗಾದರೂ ಮಾಡಿ ಮತ್ತೆ ಮೂರನೇ ಸಲ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲೇಬೇಕೆಂದು ಹಠ ತೊಟ್ಟಿರುವ ಮೋದಿ ಹಾಗೂ ಅವರ ಹಿಂದಿರುವ ಸಂಘದವರು ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ. ಅವರ ಕನಸಿನ ಮನುವಾದಿ ಹಿಂದುತ್ವರಾಷ್ಟ್ರ  ಸ್ಥಾಪನೆಗೆ ಅಡ್ಡಿಯಾಗಿರುವುದೇ ಭಾರತದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ. ಹೀಗಾಗಿ ಈ ಅಡೆತಡೆಗಳನ್ನು ನಿವಾರಿಸಿಕೊಂಡು  ಫ್ಯಾಸಿಸ್ಟ್ ಪ್ರಭುತ್ವವನ್ನು ಸ್ಥಾಪಿಸಲು ಚುನಾವಣೆಯಲ್ಲಿ ಅಭೂತಪೂರ್ವ ಜಯ ದಾಖಲಿಸಿಲೇಬೇಕಿದೆ. ಆದರೆ ದೇಶದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದೆ. ಚುನಾವಣಾ ಬಾಂಡ್ ಹಗರಣ ನುಂಗಲಾಗದ ತುತ್ತಾಗಿದೆ. ಕೇವಲ ಭಾವನಾತ್ಮಕ ಪ್ರಚೋದನೆಗಳು ಮತಗಳಾಗಿ ಪರಿವರ್ತನೆಯಾಗಬಹುದಾದ ಸಾಧ್ಯತೆಗಳು ಕಡಿಮೆಯಾಗಿವೆ. ಹೀಗಾಗಿ ನೇರವಾಗಿ ಚುನಾವಣೆಗಳನ್ನು ಎದುರಿಸಿ ಗೆಲ್ಲುವುದು ಕಷ್ಟಸಾಧ್ಯವೆಂದು ಗೊತ್ತಾಗಿರುವುದರಿಂದ ವಿರೋಧ ಪಕ್ಷಗಳನ್ನೇ ನಾಶ ಮಾಡಿ, ಚುನಾವಣಾ ಕಣದಲ್ಲಿ ಬಲಿಷ್ಠ ಎದುರಾಳಿಗಳೇ ಇಲ್ಲದಂತೆ ಮಾಡಿ ಗೆಲುವನ್ನು ಸಾಧಿಸಲು ಬೇಕಾದ ಶಡ್ಯಂತ್ರಗಳನ್ನು ಈಗಾಗಲೇ ಮೋದಿ ಸರಕಾರ ಮಾಡಿಕೊಂಡಿದೆ. ಅದರ ಭಾಗವಾಗಿಯೇ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳ ಧ್ವನಿಯನ್ನು ದಮನಿಸುವ ಕೆಲಸ 2014 ರಿಂದಲೂ ನಡೆಯುತ್ತಿದ್ದು ಈಗ ಇನ್ನೂ ಹೆಚ್ಚು ತೀವ್ರಗೊಳಿಸಲಾಗಿದೆ.

ಕೇಂದ್ರ ಸರಕಾರದ ಆಧೀನದಲ್ಲಿ ಇಡಿ, ಐಟಿ ಹಾಗೂ ಸಿಬಿಐ ಎನ್ನುವ ತನಿಖಾ ಸಂಸ್ಥೆಗಳು ಬರುತ್ತವೆ. ಹೇಳಿಕೊಳ್ಳಲು ಇವು ಸ್ವಾಯತ್ತ ಸಂಸ್ಥೆಗಳಾದರೂ ಅವುಗಳ ಮುಖ್ಯಸ್ಥರುಗಳನ್ನು ಆಯ್ಕೆ ಮಾಡುವುದೇ ಪ್ರಧಾನಿಗಳಾಗಿರುತ್ತಾರೆ. ಹೀಗಾಗಿ ಪ್ರಧಾನಿಗಳ ಅಣತಿಯ ಮೇರೆಗೆ ಈ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ.

ಇಷ್ಟಕ್ಕೂ ಇಡಿ ಅಂದರೆ ಎನ್ಫೋರ್ಸ್‌ ಮೆಂಟ್ ಡೈರೆಕ್ಟರೇಟ್ ಅಂತಾ. ಕನ್ನಡದಲ್ಲಿ ಜಾರಿ ನಿರ್ದೇಶನಾಲಯ.  ಕೇಂದ್ರದ ಕಂದಾಯ ಇಲಾಖೆ ಹಾಗೂ ಹಣಕಾಸು ಇಲಾಖೆಯ ಆಧೀನದಲ್ಲಿ ಬರುವ  ಆರ್ಥಿಕ ಅಪರಾಧಗಳ ತನಿಖಾ ಸಂಸ್ಥೆ. ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ಹಾಗೂ ಅಕ್ರಮ ಹಣ ವರ್ಗಾವಣೆ ಕಾಯಿದೆ (PMLA) ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಕಾರ್ಯ ನಿರ್ವಹಿಸುತ್ತದೆ. ಇದು 1956 ರಿಂದಲೂ ಅಸ್ತಿತ್ವದಲ್ಲಿದೆಯಾದರೂ 2014 ರಿಂದ ಮೋದಿ ಸರಕಾರದ ಆದೇಶದಂತೆ ಕಾರ್ಯನಿರ್ವಹಿಸುವಲ್ಲಿ ಹೈಪರ್ ಆಕ್ಟೀವ್ ಆಗಿದೆ.

ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿದ್ದ ಸಂಜಯ್ ಮಿಶ್ರಾ ಅಧಿಕಾರವಧಿಯಲ್ಲೇ ವಿರೋಧ ಪಕ್ಷಗಳ ನಾಯಕರುಗಳ ಮೇಲೆ ಅತೀ ಹೆಚ್ಚು ದಾಳಿ ಮಾಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಅವರ ಅಧಿಕಾರದ ಅವಧಿಯನ್ನು ಬಿಜೆಪಿ ಸರಕಾರ ವಿಸ್ತರಿಸುತ್ತಲೇ ಬಂದಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದ ವಿರುದ್ಧ ಸುಗ್ರೀವಾಜ್ಞೆ ಹೊರಡಿಸಿ ಮಿಶ್ರಾ ರವರ ಅಧಿಕಾರದ ಅವಧಿಯನ್ನು ಎರಡು ವರ್ಷದಿಂದ ಐದು ವರ್ಷಕ್ಕೆ ವಿಸ್ತರಿಸಲಾಗಿತ್ತು. ಸರಕಾರದ ಈ ಕ್ರಮದ ವಿರುದ್ಧ ವಿಚಾರಣೆ ಮಾಡಿದ ಸುಪ್ರೀಂ ಕೋರ್ಟ್ “ಬೇರೆ ಯಾರೂ ಸಮರ್ಥ ಅಧಿಕಾರಿಗಳಿಲ್ವಾ” ಎಂದು ಸರಕಾರವನ್ನು ಪ್ರಶ್ನಿಸಿ 15 ಸೆಪ್ಟಂಬರ್ 2023 ರಂದು ಮಿಶ್ರಾರವರನ್ನು ಮನೆಗೆ ಕಳುಹಿಸಿತು. ಆದರೆ ಇಲ್ಲಿಯವರೆಗೂ ನೂತನ ನಿರ್ದೇಶಕರನ್ನು ಕೇಂದ್ರ ಸರಕಾರ ನೇಮಕ ಮಾಡದೇ ಇನ್ನೊಬ್ಬ ಮೋದಿನಿಷ್ಟ ರಾಹುಲ್ ನವೀನ್ ಎಂಬ ಅಧಿಕಾರಿಗೆ ಇ.ಡಿ. ಇನ್‌ ಚಾರ್ಜ್ ಕೊಟ್ಟಿತು. ವಿರೋಧಿಗಳ ಮೇಲೆ ದಾಳಿ ಮುಂದುವರೆಯಿತು. ಆದರೆ ಅದೇ ಅಸಾಂವಿಧಾನಿಕವಾಗಿ ಚುನಾವಣಾ ಬಾಂಡ್ ಮೂಲಕ ಸಾವಿರಾರು ಕೋಟಿ ದೇಣಿಗೆ ವಸೂಲಿ ಮಾಡಿದ ಮೋದಿಯವರ ನೆರಳನ್ನೂ ಸೋಕುವ ಧೈರ್ಯ ಈ ಇಡಿ ಗೆ ಇಲ್ಲವಾಗಿದೆ. ಇದರಿಂದಾಗಿ ಜಾರಿ ನಿರ್ದೇಶನಾಲಯವು ಜನರ ವಿಶ್ವಾಸಾರ್ಹತೆಯನ್ನೇ ಕಳೆದುಕೊಂಡಿದೆ.

ಚುನಾವಣೆಯ ಸಂದರ್ಭದಲ್ಲಿ ಭ್ರಷ್ಟಾಚಾರದ ಹೆಸರಲ್ಲಿ ವಿರೋಧ ಪಕ್ಷಗಳನ್ನು ನಾಶ ಮಾಡುವ, ಪ್ರತಿರೋಧವನ್ನೇ ಇಲ್ಲವಾಗಿಸುವ ಅನಪೇಕ್ಷಿತ ಕೆಲಸವನ್ನು ಮೋದಿ ಸರಕಾರ ಮೊದಲ ಆದ್ಯತೆಯಾಗಿ ಮಾಡುತ್ತಿದೆ. ಅದಕ್ಕೆ ಜಾರಿ ನಿರ್ದೇಶನಾಲಯವನ್ನು ಬೇಕಾಬಿಟ್ಟಿ ಬಳಸಿಕೊಳ್ಳಲಾಗುತ್ತಿದೆ. ಜಾರ್ಖಂಡ್ ರಾಜ್ಯದ  ಮುಖ್ಯಮಂತ್ರಿ ಹೇಮಂತ ಸೊರೇನ್ ಮೇಲೆ ಭೂಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಜಾರಿ ನಿರ್ದೇಶನಾಲಯ ಏಳು ಬಾರಿ ಸಮನ್ಸ್ ನೀಡಿತ್ತು. ಜನವರಿ 31 ರಂದು ರಾಂಚಿಯಲ್ಲಿರುವ ಅವರ ಅಧಿಕೃತ ನಿವಾಸದಲ್ಲಿ ಎರಡನೇ ಸುತ್ತಿನ ವಿಚಾರಣೆಯ ನಂತರ ಮನಿ ಲಾಂಡರಿಂಗ್ ಆರೋಪದ ಮೇಲೆ ಸೋರೆನ್ ಅವರನ್ನು ಇಡಿ ಬಂಧಿಸಿತು. ಅವರನ್ನು ಬಂಧಿಸುವ ಮೊದಲು ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. 48 ವರ್ಷದ ಜೆಎಂಎಂ ನಾಯಕ ಸದ್ಯ ನ್ಯಾಯಾಂಗ  ಬಂಧನದಲ್ಲಿದ್ದಾರೆ. ಜಾರ್ಖಂಡ ರಾಜ್ಯದಲ್ಲಿ ಪ್ರಮುಖ ಆಳುವ ಪಕ್ಷವನ್ನು ನಾಶ ಮಾಡುವ ತಂತ್ರಗಾರಿಕೆಯ ಭಾಗ ಇದಾಗಿದೆ.

ಅಬಕಾರಿ ಗುತ್ತಿಗೆಯಲ್ಲಿ ನೂರು ಕೋಟಿ ಕಿಕ್ ಬ್ಯಾಕ್ ಹಣವನ್ನು ಆಮ್ ಆದ್ಮಿ ಪಕ್ಷ ಪಡೆದುಕೊಂಡಿದೆ ಎಂಬುದು ಇಡಿ ಆರೋಪ. ಇದೇ ಆರೋಪದ ಮೇಲೆ ಆಪ್ ಪಕ್ಷದ ಉಪಮುಖ್ಯಮಂತ್ರಿಯನ್ನು ಈಗಾಗಲೇ ಜೈಲಿಗೆ ಕಳುಹಿಸಲಾಗಿದೆ. ಯಾಕೆಂದರೆ ಆಪ್ ಪಕ್ಷವನ್ನು ಒಡೆದು ಬಹುತೇಕ ಶಾಸಕರನ್ನು ಕರೆದುಕೊಂಡು ಬಂದು ಬಿಜೆಪಿ ಸೇರಿದರೆ ದೆಹಲಿ ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ ಎಂದು ಸಿಸೋಡಿಯಾರವರಿಗೆ ಬಲವಂತಪಡಿಸಲಾಗಿತ್ತು. ಆದರೆ ಪಕ್ಷದ್ರೋಹಕ್ಕೆ ಅವರು ಒಪ್ಪದೇ ಇರುವುದರಿಂದ ಇಡಿ ಯನ್ನು ಛೂ ಬಿಟ್ಟು ಬಂಧಿಸಿ ಇಲ್ಲಿವರೆಗೂ ಜಾಮೀನು ಸಹ ಸಿಗದಂತೆ ನೋಡಿಕೊಳ್ಳಲಾಗಿದೆ. ಹಾಗೂ ದೆಹಲಿಯ ಸಿಎಂ ಕೇಜ್ರಿವಾಲ್ ರವರು ಇಂಡಿಯಾ ಮೈತ್ರಿ ಕೂಟ ಸೇರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಸೀಟು ಹೊಂದಾಣಿಕೆ ಮಾಡಿಕೊಂಡಿದ್ದರಿಂದ  ಕೆರಳಿದ ಮೋದಿ ಸೇಡಿಗೆ ಮುಂದಾದರು.  ಅವರಿಗೆ ವಿಚಾರಣೆಗೆ ಹಾಜರಾಗಲು  ಇಡಿ ಮೂಲಕ ನೋಟೀಸ್ ಮೇಲೆ ನೋಟೀಸ್ ಕಳುಹಿಸಲಾಯ್ತು. ಕೊನೆಗೂ ಸಮಯ ಸಾಧಿಸಿ ಲೋಕಸಭಾ ಚುನಾವಣಾ ಸಮಯದಲ್ಲಿ 21-03-24 ರಂದು ಗುರುವಾರ ಕ್ರೇಜಿ ವಾಲ್ ರವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಯ್ತು.

ದೆಹಲಿ ಅಬಕಾರಿ ನೀತಿ ಕೇಸಲ್ಲಿ  ಅರಬಿಂದೋ ಫಾರ್ಮಾದ ಮಾಲೀಕ ಶರತ್ ರೆಡ್ಡಿ ಮೇಲೆ 10 ನವೆಂಬರ್ 2022 ರಂದು ಇಡಿ ದಾಳಿ ಮಾಡಿ ಬಂಧಿಸಲಾಗುತ್ತದೆ. ಬಂಧನದ ಐದೇ ದಿನಗಳ ನಂತರ 5 ಕೋಟಿಯ ಚುನಾವಣಾ ಬಾಂಡ್ ಖರೀದಿಸಿ ಆತನ ಕಂಪನಿ ಬಿಜೆಪಿಗೆ ಕೊಟ್ಟಿದೆ. ಹಾಗೂ ಅಬಕಾರಿ ಕೇಸಲ್ಲಿ ಕ್ರೇಜಿವಾಲ್ ರವರನ್ನು ಸಿಕ್ಕಿಸಲು ಶರತ್ ರೆಡ್ಡಿಯನ್ನು ಸರಕಾರಿ ಸಾಕ್ಷಿಯಾಗಿ (ಅಪ್ರೂವರ್) ಆಗಿ ಮಾಡಲಾಗಿದೆ. ಅಪ್ರೂವರ್ ಆದ ನಂತರ ಸಹ ಶರತ್ ರೆಡ್ಡಿಯ ಕಂಪನಿ ಬಿಜೆಪಿಗೆ 25 ಕೋಟಿ ಮೊತ್ತದ ಚುನಾವಣಾ ಬಾಂಡ್ ಗಳನ್ನು ಖರೀದಿಸಿ ಕೊಟ್ಟಿದೆ. ಅಂತಹ ವ್ಯಕ್ತಿಯ ಹೇಳಿಕೆ ಮೇಲೆ ದೆಹಲಿಯ ಮುಖ್ಯಮಂತ್ರಿಯನ್ನು ಬಂಧಿಸಲಾಗಿದೆ. ಇದರಲ್ಲಿ  ದ್ವೇಷವನ್ನು ಹೊರತು ಪಡಿಸಿ ಬೇರೆ ಉದ್ದೇಶ  ಯಾವುದೂ  ಇಲ್ಲ.

ಈ ಶರತ್ ರೆಡ್ಡಿ ಬಿಆರ್ ಎಸ್ ಪಕ್ಷಕ್ಕೂ 15 ಕೋಟಿಯ ಬಾಂಡ್ ಕೊಟ್ಟಿದ್ದಾರೆ. ತೆಲಂಗಾಣದ ಬಿಆರ್ ಎಸ್ ಪಕ್ಷದ ಎಂಎಲ್ಸಿ ಕವಿತಾ ಕಲ್ವಕುಂಟ್ಲಾರವರನ್ನೂ ಸಹ ಇದೇ ಅಬಕಾರಿ ಕೇಸ್ ಸಂಬಂಧಿಸಿದಂತೆ ಬಂಧಿಸಲಾಗಿದೆ. ಯಾಕೆಂದರೆ ಕಳೆದ ತೆಲಂಗಾಣ ವಿಧಾನ ಸಭೆಯ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳಲು BRS ಪಕ್ಷದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ರವರು ನಿರಾಕರಿಸಿದ್ದರು. ಆ ದ್ವೇಷಕ್ಕಾಗಿ ಅವರ ಮಗಳಾದ ಮಾಜಿ ಎಂಪಿ, ಹಾಲಿ ಎಂಎಲ್ಸಿ ಕವಿತಾರವರನ್ನು ಇಡಿ ಬಂಧಿಸುವ ಮೂಲಕ ಮೋದಿ ಶಾ ಸೇಡು ತೀರಿಸಿಕೊಂಡರು. “ಶರತ್ ರೆಡ್ಡಿಯ ಹಣ ಚುನಾವಣಾ ಬಾಂಡ್ ರೂಪದಲ್ಲಿ ಬಿಜೆಪಿ ಪಕ್ಷಕ್ಕೆ ಹೋಗಿದೆ. ಆದರೆ ಕೇಜ್ರಿವಾಲ್ ರವರ ಮೇಲೆ ಆರೋಪ  ಮಾಡಲಾಗ್ತಿದೆ “ ಎಂದು ಆಪ್ ಪಾರ್ಟಿ ಪ್ರಶ್ನಿಸುತ್ತಿದೆ. ಚುನಾವಣಾ ಬಾಂಡ್ ಭ್ರಷ್ಟಾಚಾರ ಹಗರಣದಿಂದ ಜನರ ಗಮನವನ್ನು ಬೇರೆ ಕಡೆ ತಿರುಗಿಸಲು ಕೇಜ್ರಿವಾಲ್ ಬಂಧನದ ಹಿಂದಿರುವ ಕಾರಣ ಎಂದೂ ಹೇಳಲಾಗುತ್ತಿದೆ.

ಕವಿತಾ

ಕೇಜ್ರಿವಾಲ್ ಜೊತೆಗೆ ಭಿನ್ನಾಭಿಪ್ರಾಯ ಹೊಂದಿರುವ ವಕೀಲರಾದ ಪ್ರಶಾಂತ ಭೂಷಣ್, ಯೋಗೇಂದ್ರ ಯಾದವ್ ರವರೂ ಸಹ ಕೇಜ್ರಿವಾಲ್ ರವರ ಬಂಧನವನ್ನು ವಿರೋಧಿಸಿದ್ದಾರೆ. ಎನ್ ಡಿ ಎ ಯೇತರ  ಎಲ್ಲಾ ಪಕ್ಷಗಳೂ ಈ ಬಂಧನವನ್ನು ವಿರೋಧಿಸಿವೆ. ಇಂಡಿಯಾ ಮೈತ್ರಿ ಕೂಟ ದೆಹಲಿಯಲ್ಲಿ ಬ್ರಹತ್ ಪ್ರತಿರೋಧ ಹಮ್ಮಿಕೊಂಡಿತ್ತು. ಆದರೆ ಮೋದಿ ಶಾ ಜೋಡಿಯ ಪಂಚೇದ್ರಿಯಗಳು ಬಂದ್ ಆಗಿವೆ. ಜನರು ಎಚ್ಚೆತ್ತುಕೊಳ್ಳಬೇಕಿದೆ.

ಎರಡು ವರ್ಷದಿಂದ ಇಡಿ ಈ ಅಬಕಾರಿ ಹಗರಣದ ತನಿಖೆ ಮಾಡುತ್ತಿದೆ. ಆದರೆ ಇಷ್ಟು ದಿನ ಬಿಟ್ಟು ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ ಯಾಕೆ ಕೇಜ್ರೀವಾಲ್ ರವರನ್ನು ಬಂಧಿಸಿದೆ? ಯಾಕೆಂದರೆ ಈಗಾಗಲೇ ಆಪ್ ಪಕ್ಷಕ್ಕೆ ದೆಹಲಿಯಲ್ಲಿ ಅಪಾರ ಜನಬೆಂಬಲ ಇದೆ. ಈ ಸಲ ಬಿಜೆಪಿ ಪಕ್ಷದ ಉಮೇದುವಾರರ ಸೋಲು ಖಚಿತವಾಗಿದೆ. ಹೀಗಾಗಿ ಆಪ್ ಪಕ್ಷದ ಮುಖ್ಯಸ್ಥ ನನ್ನು ಬಂಧಿಸಿ ಚುನಾವಣಾ ಪ್ರಚಾರಕ್ಕೆ ಹೋಗದಂತೆ ತಡೆಯೊಡ್ಡಲಾಗಿದೆ. ಆಪ್ ಪಕ್ಷದ ಕಛೇರಿಯನ್ನೇ ಸೀಜ್ ಮಾಡಲಾಗಿದೆ. ಇನ್ನು ಆಪ್ ಪಕ್ಷದ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವ ಸಾಧ್ಯತೆಯೂ ಇದೆ. ಅಷ್ಟೇ ಯಾಕೆ ಕೇಜ್ರಿವಾಲ್ ರವರು ರಾಜೀನಾಮೆ ಕೊಡದೇ ಹೋದರೆ ಆಪ್ ಸರಕಾರವನ್ನೇ ಅಮಾನತ್ತಿನಲ್ಲಿಟ್ಟು ರಾಷ್ಟ್ರಪತಿ ಆಡಳಿತವನ್ನು ಹೇರುವ ಸಾಧ್ಯತೆಯೂ ಇದೆ. ಚುನಾವಣಾ ಆಯೋಗದ ಮೂಲಕ  ಆ ಪಕ್ಷದ ನೋಂದಣಿಯನ್ನೇ ರದ್ದು ಮಾಡುವ ಸಂಭವನೀಯತೆಯನ್ನೂ ಅಲ್ಲಗಳೆಯುವಂತಿಲ್ಲ. ಜಾರ್ಖಂಡಿನ ಹೇಮಂತ ಸೊರೇನ್, ದೆಹಲಿಯ ಅರವಿಂದ ಕೇಜ್ರಿವಾಲ್ ಹಾಗೂ ತೆಲಂಗಾಣದ ಕವಿತಾರವರ ರಾಜಕೀಯ ದುರುದ್ದೇಶದ ಬಂಧನ ಭಾರತದ ಜನತಂತ್ರಕ್ಕೆ ಅಪಾಯಕಾರಿಯಾಗಿದೆ. ವಿಧಾನಸಭೆ ಇಲ್ಲವೇ ಲೋಕಸಭಾ ಚುನಾವಣೆಗಳಲ್ಲೇ ವಿರೋಧಿಗಳ ಮೇಲೆ ಹೆಚ್ಚಿನ ಸಂಖ್ಯೆಯ ದಾಳಿಗಳು ಆಗಿದ್ದು ಕಳವಳಕಾರಿಯಾಗಿವೆ.

ಕೇಜ್ರಿವಾಲ ಬಂಧನ ವಿರೋಧಿಸಿ ಇಂಡಿಯಾ ಕೂಟದಿಂದ ರ್ಯಾಲಿ

“ವಿರೋಧ ಪಕ್ಷಗಳ ನಾಯಕರ ಮೇಲೆ ಕಿರುಕುಳ ಕೊಡಲು ಇಡಿ ಸಂಸ್ಥೆಯನ್ನು ಕೇಂದ್ರ ಸರಕಾರವು ಬಳಸಿಕೊಳ್ಳುತ್ತಿದೆ ಹಾಗೂ ವಿರೋಧ ಪಕ್ಷಗಳ ನಾಯಕರುಗಳ ವಿರುದ್ಧ ಶೇ.95 ರಷ್ಟು ಪ್ರಕರಣಗಳನ್ನು ದಾಖಲಿಸಿದೆ”  ಎಂದು ಆರೋಪಿಸಿ 14 ವಿರೋಧ ಪಕ್ಷಗಳು 2023ರಲ್ಲಿ ಸುಪ್ರೀಂ ಕೋರ್ಟ್ ಲ್ಲಿ ಅರ್ಜಿ ಸಲ್ಲಿಸಿವೆ. 2014 ರಿಂದ ಇಲ್ಲಿಯವರೆಗೂ ಇ.ಡಿ. ಅಧಿಕಾರಿಗಳು ವಿರೋಧ ಪಕ್ಷಗಳ 150 ನಾಯಕರುಗಳ ಮನೆ ಮೇಲೆ ದಾಳಿ ನಡೆಸಿವೆ. 2014 ಕ್ಕೂ ಮೊದಲು ಇ.ಡಿ. ಹಾಗೂ ಸಿಬಿಐ ದಾಳಿಗಳು ವ್ಯಕ್ತಿಗಳು ನೀಡಿದ ದೂರಿನ ಮೇಲೆ ನಡೆಯುತ್ತಿದ್ದವು. ಆದರೆ ಈಗ ಸ್ವಯಂಪ್ರೇರಿತವಾಗಿ ತನಿಖಾ ಸಂಸ್ಥೆಗಳು ದಾಳಿ ಮಾಡುತ್ತಿವೆ. 2004 ರಿಂದ 2014 ರ ವರೆಗೆ ಸಿಬಿಐ 72 ರಾಜಕೀಯ ನಾಯಕರುಗಳ ಮೇಲೆ ದಾಳಿ ಮಾಡಿದ್ದು ಅದರಲ್ಲಿ 43 ಜನ ವಿರೋಧ ಪಕ್ಷದವರಾಗಿದ್ದಾರೆ. ಆದರೆ 2014 ರಿಂದ 2024 ರ ವರೆಗೆ ನಡೆದ ದಾಳಿಗಳೆಲ್ಲವೂ ವಿರೋಧ ಪಕ್ಷದ ನಾಯಕರುಗಳ ಮೇಲೆ ಆಗಿವೆ” ಎಂದು ಸುಪ್ರೀಂ ಕೋರ್ಟಿಗೆ ವಿರೋಧ ಪಕ್ಷಗಳು ತಿಳಿಸಿವೆ. 

ಇಲ್ಲಿವರೆಗೂ ಇಡಿ ದಾಳಿ ಮಾಡಿದ ಪ್ರಕರಣಗಳಲ್ಲಿ ಬಹುತೇಕ ಸಾಬೀತಾಗಿಲ್ಲ. ಸಾಬೀತು ಆಗಲೇ ಬೇಕೆಂಬ ಹಠವೂ ಮೋದಿಯವರಿಗಿಲ್ಲ. 2014 ಕ್ಕಿಂತಲೂ ಮೊದಲು ಒಟ್ಟು 1,845 ಪ್ರಕರಣಗಳು ದಾಖಲಾಗಿದ್ದವು. 2014 ರ ನಂತರ 4,504 ಪ್ರಕರಣಗಳು ದಾಖಲಾಗಿವೆ. ಇಷ್ಟೊಂದು ಪ್ರಕರಣಗಳು ದಾಖಲಾದರೂ ಆರೋಪ ಸಾಬೀತಾಗಿ ಶಿಕ್ಷೆಗೆ ಗುರಿಯಾದವರು ಬೆರೆಳೆಣಿಕೆಯಷ್ಟು. ಕಳೆದ ಐದು ವರ್ಷಗಳಲ್ಲಿ 3,867 ಪ್ರಕರಣಗಳು ದಾಖಲಾಗಿ 354 ಜನರನ್ನು ಬಂಧಿಸಲಾಗಿದ್ದರೂ ಇಲ್ಲಿವರೆಗೂ ಕೇವಲ 32 ಜನರಿಗೆ ಮಾತ್ರ ಶಿಕ್ಷೆಯಾಗಿದೆ.  ಆದರೆ ಇಡಿ ಎಂಬ ಗುಮ್ಮನನ್ನು ತೋರಿಸಿ ಕಂಪನಿಗಳಿಂದ ಹಣ ಪಡೆಯಬಹುದು, ವಿರೋಧ ಪಕ್ಷದ ಶಾಸಕರನ್ನು ತನ್ನತ್ತ ಸೆಳೆಯಬಹುದು, ಬೇರೆ ಪಕ್ಷಗಳನ್ನು ಒಡೆದು ಬಿಜೆಪಿ ಸರಕಾರ ರಚಿಸಬಹುದು ಹಾಗೂ ಮೋದಿ ಮಾತನ್ನು ಕೇಳದ ವಿರೋಧ ಪಕ್ಷದ ನಾಯಕರುಗಳನ್ನು ಬಹುದಿನಗಳ ಕಾಲ ಬಂಧನದಲ್ಲಿ ಇಡಬಹುದು ಎನ್ನುವುದೇ ಇ.ಡಿ ಎನ್ನುವ ತನಿಖಾಸ್ತ್ರದ ಹಿಂದಿರುವ ಮೋದಿ ಶಾ ಎನ್ನುವ ಶಕ್ತಿಗಳ ವಿಶೇಷ ಆಸಕ್ತಿಯಾಗಿದೆ.

ಈ ಲೋಕಸಭಾ ಚುನಾವಣೆ ಮುಗಿದು ಅಂದುಕೊಂಡ ಹಾಗೆ 400 ಕ್ಕೂ ಲೋಕಸಭಾ ಸೀಟು ಗೆದ್ದರೆ ತದನಂತರ ಇಡಿ ತನಿಖೆಯಲ್ಲಿ ಯಾವ ಫಲಿತಾಂಶ ಬಂದರೂ ಬಿಜೆಪಿಗೆ ಬಾಧೆ ಇರುವುದಿಲ್ಲ. ಅತೀ ಹೆಚ್ಚು ಬಹುಮತ ಬಂದರೆ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಹೇಳಿದ ಹಾಗೆ ಸಂವಿಧಾನವನ್ನು ಬದಲಾಯಿಸಲು ಸಾಧ್ಯವಾಗುತ್ತದೆ. ಪ್ರಜಾತಂತ್ರದ ಸೋಗಿನಲ್ಲಿ ಸರ್ವಾಧಿಕಾರವನ್ನು ಖಾಯಂಗೊಳಿಸಲು ಅನುಕೂಲವಾಗುತ್ತದೆ ಎಂಬುದು ಮೋದಿ ಹಾಗೂ ಅವರ ಹಿಂದಿರುವ ಆರೆಸ್ಸೆಸ್ ನವರ ಪ್ಲಾನಿಂಗ್ ಆಗಿದೆ. ಬಿಜೆಪಿಗೆ ಬಹುಮತ ಕೊಡದೇ ಸೋಲಿಸಿ ಸಂವಿಧಾನವನ್ನು ಉಳಿಸಿ ಪ್ರಜಾತಂತ್ರವನ್ನು ರಕ್ಷಿಸಿಕೊಳ್ಳುವ ಹೊಣೆಗಾರಿಕೆ ಈ ದೇಶದ ಪ್ರಜೆಗಳ ಮೇಲಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

More articles

Latest article