Sunday, September 8, 2024

ಅಪ್ರಾಪ್ತರ ವಾಹನ ಚಾಲನೆ ಮತ್ತು ಕಾನೂನು

Most read

ಅಪ್ರಾಪ್ತ ವಯಸ್ಕರ ಕೈಗೆ ವಾಹನ ಕೊಡುವುದು, ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು ಇವೆಲ್ಲವೂ ವಿಮಾ ಷರತ್ತಿನ ಉಲ್ಲಂಘನೆ. ಹಾಗಾಗಿ ಅಪಘಾತದಲ್ಲಿ ಮೃತಪಟ್ಟವರ ವಾರಸುದಾರರು ಅಥವಾ ಗಾಯಾಳು ಅಪ್ರಾಪ್ತ ವಯಸ್ಕ ಚಾಲನೆ ಮಾಡಿದ ವಾಹನದ ವಿಮಾ ಕಂಪನಿಯಿಂದ ಪರಿಹಾರ ಪಡೆಯಲು ಸಾಧ್ಯವಾಗುವುದಿಲ್ಲ. ಅಂತಹ ಪ್ರಕರಣಗಳಲ್ಲಿ ಪರಿಹಾರ ನೀಡುವ ಸಂಪೂರ್ಣ ಹೊಣೆ ವಾಹನ ಮಾಲೀಕ ಅಥವಾ ಅಪ್ರಾಪ್ತನ ಪೋಷಕರ ಮೇಲೆ ಬೀಳಲಿದೆ- ಶಫೀರ್ ಎ ಎ, ವಕೀಲರು.

ಹದಿನೆಂಟು ವರ್ಷ ತುಂಬದ ಮತ್ತು ಚಾಲನಾ ಪರವಾನಗಿ ಪಡೆಯದ ಮಕ್ಕಳ ಕೈಗೆ ಮೋಟಾರು ವಾಹನ ಕೊಡುವ ಮತ್ತು ತಮ್ಮ ಮಕ್ಕಳ ವಾಹನ ಚಾಲನಾ ಕೌಶಲ್ಯದ ಬಗ್ಗೆ  ಹೆಮ್ಮೆಯಿಂದ ಬೀಗುವ ಪೋಷಕರನ್ನು ಬಹಳ ನೋಡಿದ್ದೇನೆ. ಕೇವಲ ಶ್ರೀಮಂತರ ನಡುವೆ ಮಾತ್ರ ಅಲ್ಲ, ಮಧ್ಯಮ ಮತ್ತು ಬಡ ವರ್ಗದಲ್ಲೂ ಸಹ ಇಂತಹ ಹೊಣೆಗೇಡಿ  ಪೋಷಕರು ಇದ್ದಾರೆ.  ಇಂತವರ ಬೇಜವಾಬ್ದಾರಿತನ ತಂದೊಡ್ದುವ ಅನಾಹುತ ಮತ್ತು ಪರಿಣಾಮಗಳ ಬಗ್ಗೆ ಸ್ವಲ್ಪ ನೋಡೋಣ. 

ಬಾಲ ನ್ಯಾಯ ಮಂಡಳಿಯ ಪ್ರಧಾನ ನ್ಯಾಯಿಕ ದಂಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಹಲವು ರಸ್ತೆ ಅಪಘಾತ ಪ್ರಕರಣಗಳು ನನ್ನ ಮುಂದೆ ವಿಚಾರಣೆಗೆ ಬಂದಿದ್ದವು. ಹದಿನೆಂಟು ವರ್ಷ ತುಂಬದ ಮಕ್ಕಳು ಅಜಾಗರೂಕತೆ ಅಥವಾ ನಿರ್ಲಕ್ಷ್ಯತನದಿಂದ ಬೈಕ್, ಕಾರು ಮುಂತಾದ ವಾಹನ ಚಲಾಯಿಸಿ ಯಾರೋ ನತದೃಷ್ಟರ ಜೀವ ತೆಗೆದ ಅಪರಾಧಕ್ಕೆ ಅಥವಾ ಗಂಭೀರವಾಗಿ ಗಾಯಪಡಿಸಿದಕ್ಕೆ ದಾಖಲಾದ ಪ್ರಕರಣಗಳವು. ಅಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ವಾಹನ ಚಲಾಯಿಸಿದ ಬಾಲಕನನ್ನು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಎಂದು ಪರಿಗಣಿಸಿ ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರು ಪಡಿಸಲಾಗುತ್ತದೆ. ಬಾಲಕನ ಪೋಷಕರ ವಿರುದ್ಧ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 199A ರ ಅಡಿಯಲ್ಲಿ ಮೂರು ವರ್ಷಗಳವರೆಗೆ ವಿಸ್ತರಿಸ ಬಹುದಾದ  ಕಾರಾಗೃಹ ವಾಸದಿಂದ ಮತ್ತು ಇಪ್ಪತ್ತೈದು ಸಾವಿರ ರೂಪಾಯಿ ಜುಲ್ಮಾನೆಯ ಶಿಕ್ಷೆಗೆ ಗುರಿಪಡಿಸ ಬಹುದಾದ ಅಪರಾಧಕ್ಕೆ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗುತ್ತದೆ. 

ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 199A ರ ಅಡಿಯಲ್ಲಿ ವಾಹನ ಚಾಲನೆಗೆ  ಸಂಬಂಧಿಸಿದಂತೆ ಅಪ್ರಾಪ್ತರು ಎಸಗುವ ಅಪರಾಧಗಳಿಗೆ ಪೋಷಕರೇ ನೇರ ಹೊಣೆಗಾರರು ಎಂದು ಪರಿಭಾವಿಸಲಾಗುತ್ತದೆ.  ಹಾಗಾಗಿ ಬಾಲ ನ್ಯಾಯ ಮಂಡಳಿಯ ಮುಂದಿರುವ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿ ದಂಡ ವಿಧಿಸಿ ಕಳುಹಿಸಿದರೂ ಕಾನೂನು ಕುಣಿಕೆಯಿಂದ ತಪ್ಪಿಸಿ ಕೊಳ್ಳಲು ಪೋಷಕರಿಗೆ ಸಾಧ್ಯವಿರುವುದಿಲ್ಲ.  ಜೆ .ಎಂ. ಎಫ್. ಸಿ ನ್ಯಾಯಾಲಯದಲ್ಲಿ ದಂಡ ಮತ್ತು ಜೈಲು ಶಿಕ್ಷೆಯ ತೂಗುಗತ್ತಿ ಒಂದೆಡೆಯಾದರೆ ಮೋಟಾರು ವಾಹನ ಅಪಘಾತ ವಿಮಾ ಪರಿಹಾರ ನ್ಯಾಯಾಧಿಕರಣದ ಮುಂದೆ ಸಂತ್ರಸ್ತರು ಅಥವಾ ಗಾಯಾಳು ವಿಮಾ ಪರಿಹಾರ ಕೋರಿ ದಾಖಲಿಸುವ ಪ್ರಕರಣ ಮತ್ತೊಂದೆಡೆ.   

ಪೋರ್ಷೆ ಕಾರು ದುರಂತ

ಅಪ್ರಾಪ್ತ ವಯಸ್ಕರ ಕೈಗೆ ವಾಹನ ಕೊಡುವುದು, ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು ಇವೆಲ್ಲವೂ ವಿಮಾ ಷರತ್ತಿನ ಉಲ್ಲಂಘನೆ. ಹಾಗಾಗಿ ಅಪಘಾತದಲ್ಲಿ ಮೃತಪಟ್ಟವರ ವಾರಸುದಾರರು ಅಥವಾ ಗಾಯಾಳು ಅಪ್ರಾಪ್ತ ವಯಸ್ಕ ಚಾಲನೆ ಮಾಡಿದ ವಾಹನದ ವಿಮಾ ಕಂಪನಿಯಿಂದ ಪರಿಹಾರ ಪಡೆಯಲು ಸಾಧ್ಯವಾಗುವುದಿಲ್ಲ. ಅಂತಹ ಪ್ರಕರಣಗಳಲ್ಲಿ ಪರಿಹಾರ ನೀಡುವ ಸಂಪೂರ್ಣ ಹೊಣೆ ವಾಹನ ಮಾಲೀಕ ಅಥವಾ ಅಪ್ರಾಪ್ತನ ಪೋಷಕರ ಮೇಲೆ ಬೀಳಲಿದೆ. ನ್ಯಾಯಾಧಿಕರಣ ಆದೇಶಿಸುವ ಪರಿಹಾರದ ಮೊತ್ತ ಮೃತರ ಅಥವಾ ಗಾಯಾಳುಗಳ ವೃತ್ತಿ, ಆದಾಯ ಮತ್ತು ಪ್ರಾಯವನ್ನು ಆಧರಿಸಿ ಲಕ್ಷಾಂತರ ರೂಪಾಯಿಗಳವರೆಗೂ ಬರಬಹುದು, ಕೋಟಿ ರೂಪಾಯಿ ಮೊತ್ತ ದಾಟಲೂ ಬಹುದು. 

ಶಫೀರ್ ಎ ಎ

ಕಳೆದ ಹತ್ತು ವರ್ಷಗಳಿಂದ ಕರ್ನಾಟಕದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ತಾವೇ ನಿವೃತ್ತಿಯನ್ನು ಪಡೆದು ಮತ್ತೆ ವಕೀಲರಾಗಿ ಸಕ್ರಿಯರಾಗಿದ್ದಾರೆ. ಸದಾ ಸಮಾಜಮುಖಿ ಚಿಂತನೆ,ಬರೆಹಗಳಲ್ಲಿ ತೊಡಗಿರುವ ಇವರು ಪ್ರತಿ ಶುಕ್ರವಾರ ಕನ್ನಡ ಪ್ಲಾನೆಟ್‌.ಕಾಂ ಗೆ ʼನ್ಯಾಯ ನೋಟʼ ಅಂಕಣ ಬರೆಯಲಿದ್ದಾರೆ.

ಇದನ್ನೂ ಓದಿ- ನ್ಯಾಯದಾನ ಯಾಕಿಷ್ಟು ವಿಳಂಬ? ಯಾರ ಕೊಡುಗೆ ಎಷ್ಟೆಷ್ಟು ?

More articles

Latest article