ವಿಜಯಪುರ: ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು 10 ವರ್ಷ ಕಳೆದರೂ ಕೃಷ್ಣಾ ಜಲಾಶಯ ಎತ್ತರಿಸಲು ಅವರಿಂದ ಆಗಲಿಲ್ಲ. ಇದರಿಂದಾಗಿ ನರೇಂದ್ರ ಮೋದಿ ಸುಳ್ಳು ಹೇಳ್ತಾರೆ ಎಂಬುದು ಮಕ್ಕಳ ಬಾಯಲ್ಲೂ ಬರುತ್ತಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದರು.
ಲೋಕಸಭಾ ಚುನಾವಣೆ ಹಿನ್ನಲೆ ವಿಜಯಪುರದಲ್ಲಿ ಪ್ರಚಾರ ಕಾರ್ಯದಲ್ಲಿ ನಡೆಸಿದ ಅವರು, ಕೇಂದ್ರವು ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಬಹುತೇಕ ತಾಲೂಕುಗಳಲ್ಲಿ ಬರ ಘೋಷಣೆಯಾಗಿ 7 ತಿಂಗಳಾದರೂ 18 ಸಾವಿರ ಕೋಟಿ ರೂ. ಹಣ ಬಿಡುಗಡೆ ಮಾಡಲಿಲ್ಲ. ಪ್ರಧಾನಿ ಮೋದಿ, ಅಮಿತ್ ಶಾಗೆ ನಮ್ಮ ರಾಜ್ಯದ ಜನತೆ ಮೇಲೆ ಕೋಪ ಇದೆ. ಕರ್ನಾಟಕ ಅಂದರೆ ಅವರು ಅಸಡ್ಡೆ ಮಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಜನ ಅವರಿಗೆ ಓಟ್ ಹಾಕಿಲ್ಲ ಎಂದು ರೈತರ ಮೇಲೆ ಕೋಪ ತೋರಿಸುತ್ತಿದ್ದಾರೆ. ದುರುದ್ದೇಶಪೂರಿತ ರಾಜಕೀಯ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ.
ರಾಜ್ಯದಿಂದ 4.34 ಲಕ್ಷ ಸಾವಿರ ಕೋಟಿ ಕೇಂದ್ರಕ್ಕೆ ಆದಾಯ ಹೋಗುತ್ತೆ. ಅಲ್ಲಿಂದ ನಮಗೆ ಒಂದು ರೂಪಾಯಿಯಲ್ಲಿ 13 ಪೈಸೆ ಮಾತ್ರ ಬರುತ್ತಿದೆ. ಬಜೆಟ್ ಹೆಚ್ಚಾಗಿರುವುದರಿಂದ ಹೆಚ್ಚಿಗೆ ಹಣ ಕೊಡಬೇಕು ಎಂದು ಅನೇಕ ಬಾರಿ ಮನವಿ ಮಾಡಿದರೂ ಅವರು ಕೊಟ್ಟಿಲ್ಲ. ನಮ್ಮ ರಾಜ್ಯಕ್ಕೆ 44 ಸಾವಿರ ಕೋಟಿ ರೂ ಕೊಡ್ತಾರೆ. ಗೋವಾ ಸೇರಿದಂತೆ 7 ರಾಜ್ಯಗಳಿಗೆ 1.21 ಲಕ್ಷ ಸಾವಿರ ಕೋಟಿ ಅನುದಾನ ಕೊಡ್ತಾರೆ ಎಂದು ದೂರಿದರು.
ರಾಜ್ಯಕ್ಕೆ ಕೇಂದ್ರದಿಂದ ಆಗುವ ತಾರತಮ್ಯದ ಕುರಿತು ಎಂಪಿಗಳು ಮಾತಾಡಬೇಕು. ಅವರು ಯಾರೂ ಇದರ ಬಗ್ಗೆ ಮಾತಾಡಲಿಲ್ಲ. ಎಲ್ಲಾರೂ ಒಟ್ಟಾಗಿ ಹೋಗಿ ಪ್ರಧಾನಿಗಳನ್ನು ಭೇಟಿಯಾಗಿ ಬರ ಪರಿಹಾರ ಕೇಳಬೇಕಿತ್ತು. ಅವರು ಕೇಳಿಲ್ಲ. ಟ್ಯಾಕ್ಸ್ ಹಣ ಹೆಚ್ಚಿಗೆ ಬೇಕು ಎಂದು ಕೇಳಬೇಕಿತ್ತು, ಅದನ್ನೂ ಕೇಳಲಿಲ್ಲ. ರಾಜ್ಯದ ಹಿತಾಸಕ್ತಿ ಬಯಸದವರು, ರೈತರಿಗೆ ಅನ್ಯಾಯ ಆದಾಗ ಸುಮ್ಮನೆ ಇರುವವರು ನಮಗೆ ಬೇಕಾಗಿಲ್ಲ. ಈ ಬಾರಿ 28 ರಲ್ಲಿ 28 ಕಾಂಗ್ರೆಸ್ ಗೆದ್ದರೆ ಮೋದಿ ಆಗಲಿ ಬೇರೆ ಯಾರೇ ಪ್ರಧಾನಿ ಆದರೂ ರಾಜ್ಯಕ್ಕೆ ಬೇಕಾದ ಸೌಲಭ್ಯವನ್ನು ಕೇಳಲು ಅನುಕೂಲ ಆಗಲಿದೆ ಎಂದರು.
ಸಿಎಂ ಪುತ್ರನ ಸಾವಿನ ಕುರಿತ ಹೇಳಿಕೆಗೆ ಎಚ್ಡಿಕೆ ದಾಖಲೆ ಕೊಡಲಿ
ಸಿಎಂ ಸಿದ್ಧರಾಮಯ್ಯ ಪುತ್ರ ರಾಕೇಶ ನಿಧನ ಅನುಮಾನ ಎಂದು ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಏನಾದರು ದಾಖಲೆ ಇದ್ದರೆ ಕೊಡಲಿ ಬಿಡಿ. ರಾಜಕೀಯದಲ್ಲಿ ಇದೆಲ್ಲಾ ಆಗುತ್ತೆ, ಹಾಗೆ ಹೇಳ್ತಿರ್ತಾರೆ. ಅವರ ಸಾವಿನ ಬಗ್ಗೆ ಗೊತ್ತಿದ್ದರೆ ಜನತೆಗೆ ಹೇಳಲಿ. ಸಹಜ ಸಾವು ಆಗಿರದಿದ್ದರೆ ಪೋಸ್ಟಮಾರ್ಟಂ ಮಾಡಿಯೇ ಕಳಿಸ್ತಾರೆ, ವಿದೇಶದಲ್ಲಿ ಕಾನೂನುಗಳು ಕಟ್ಟುನಿಟ್ಟಾಗಿ ಇವೆ. ಏನಾದರೂ ಒಂದು ಹೇಳಿದರೆ ವಿಚಾರ ಡೈವರ್ಟ್ ಮಾಡಲು ಹೀಗೆ ಹೇಳ್ತಾರೆ ಎಂದರು.
ಮಣಿಪುರದ ಮಹಿಳೆಗೆ ಅವಮಾನ ಆದಾಗ ಮಾತೃಶಕ್ತಿ ಎಲ್ಲಿ ಹೋಗಿತ್ತು?
ಬಿಜೆಪಿಯವರು ಮಹಿಳಾ ವಿರೋಧಿಗಳು. ಅಮಿತ್ ಶಾ ಮಾತೃಶಕ್ತಿ ಎಂದು ಹೇಳ್ತಾರೆ. ಮಣಿಪುರದಲ್ಲಿ ಮಹಿಳೆ ಬಟ್ಟೆ ಬಿಚ್ಚಿ ದೌರ್ಜನ್ಯ ನಡೆದಾಗ ಎಲ್ಲಿ ಹೋಗಿತ್ತು ಮಾತೃಶಕ್ತಿ? ಉತ್ತರ ಪ್ರದೇಶದಲ್ಲಿ ಕಾನೂನು ಇಲ್ಲಾ, ತಪ್ಪು ಮಾಡಿದರೆ ಶೂಟ್ ಮಾಡ್ತಾರೆ.ಒಬ್ಬರು ಮಾಡಿದರೆ ಮನೆಯವರೆಲ್ಲ ಬಲಿಯಾಗಬೇಕಾ. ರಸ್ತೆಯಲ್ಲಿ ರೈತರು ಎರಡು ವರ್ಷ ಪ್ರತಿಭಟಿಸಿ, 700 ಜನ ರೈತರು ರಸ್ತೆಯಲ್ಲೇ ಸತ್ತರು, ಅವರು ಮನುಷ್ಯರಲ್ಲವಾ? ಬಿಜೆಪಿಯವರದ್ದು ದ್ವಂದ್ವ ನೀತಿ. ಕಾಂಗ್ರೆಸ್ ನವರು ಯಾರಾದರೂ ಹೀಗೆ ಮಾಡಿದ್ದರೆ ಇಷ್ಟೊತ್ತಿಗೆ ಬೊಬ್ಬೆ ಹೊಡೆಯುತ್ತಿದ್ದರು ಎಂದಿದ್ದಾರೆ.